ಕೇಸರಿ ಬಣ್ಣದ ಬೋರ್ಡ್ ಗಳಿವೆ ಎಂಬ ಏಕೈಕ ಕಾರಣಕ್ಕೆ ಬೆಂಗಳೂರಿನಲ್ಲಿ ಅಂಗಡಿಗಳ ಮೇಲೆ ದಾಳಿ.... ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿರುವ ತಲೆ ಬರಹ ಇದು...
ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೆಲವೊಂದು ಅಂಗಡಿಗಳ ಬೋರ್ಡ್ ಗಳನ್ನು ತೆರವುಗೊಳಿಸುತ್ತಿರುವುದು ಕಾಣಿಸುತ್ತಿದೆ. ಈ ಅಂಗಡಿಗಳ ಬೋರ್ಡ್ ಗಳು ಕೇಸರಿ ಬಣ್ಣ ಹೊಂದಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಎಕ್ಸ್ ಬಳಕೆದಾರರೊಬ್ಬರು ''ಕರ್ನಾಟಕದಲ್ಲಿ ನೀವು ಕಾಂಗ್ರೆಸ್ ಗೆ ಮತ ನೀಡಿದ ನಂತರ ನಿಮ್ಮ ಅಂಗಡಿಗಳು, ಮನೆಗಳು, ದೇವಸ್ಥಾನಗಳಲ್ಲಿ ಕೇಸರಿ ಬಣ್ಣ ಬಳಸುವ ಹಾಗಿಲ್ಲ'' ಎಂದು ಬರೆದಿದ್ದರು. ಇದೇ ಆರೋಪ ಮಾಡಿ ಹಲವು ಎಕ್ಸ್ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಫೇಸ್ಬುಕ್ ನಲ್ಲೂ ಕೂಡ ಈ ವಿಡಿಯೋ ವೈರಲ್ ಆಗಿದೆ. ಹಾಗಾದ್ರೆ ನಿಜಕ್ಕೂ ಬೆಂಗಳೂರಿನಲ್ಲಿ ಕೇಸರಿ ಬಣ್ಣದ ಕಾರಣ ಅಂಗಡಿಗಳ ಬೋರ್ಡ್ ಗಳನ್ನು ತೆರವುಗೊಳಿಸಲಾಯಿತೇ ? (Archive 1, Archive 2)
ವಾಸ್ತವ ಏನು ?
ಈ ವಿಡಿಯೋವನ್ನು ಪರಿಶೀಲಿಸುವ ವೇಳೆ ಇಂಡಿಯಾ ಟುಡೇ ವರದಿಯೊಂದು ʼಬೆಂಗಳೂರಿನ ಭಾಷಾಯುದ್ಧ: ಇಂಗ್ಲಿಷ್ ಸೈನ್‌ಬೋರ್ಡ್ ಗಳನ್ನು ತೆರವುಗೊಳಿಸುತ್ತಿರುವ ಬಿಬಿಎಂಪಿʼ ಎಂಬ ತಲೆಬರಹದಡಿ ಪತ್ತೆಯಾಗಿತ್ತು. ಈ ವರದಿ ಫೆಬ್ರವರಿ23ರಂದು ಪ್ರಕಟವಾಗಿತ್ತು. ಈ ವರದಿಯಲ್ಲಿ ಬಿಬಿಎಂಪಿ ಕೆಲಸಗಾರ ಇಂಗಿಷ್ ಪದಗಳಿರುವ ಬೋರ್ಡ್ ತೆರವುಗೊಳಿಸುವ ದೃಶ್ಯವಿತ್ತು. ಅಂಗಡಿ ಮುಂಗಟ್ಟುಗಳು ಅಥವಾ ಇನ್ಯಾವುದೇ ಬೋರ್ಡ್ ಗಳಲ್ಲಿ 60 ಶೇಕಡಾ ಕನ್ನಡ ಬಳಕೆ ನಿಯಮ ಉಲ್ಲಂಘಿಸಿದ ಕಾರಣ ಈ ಬೋರ್ಡ್ ಗಳನ್ನು ತೆರವುಗೊಳಿಸಲಾಗಿದೆ ಎನ್ನುವುದು ಈ ಸುದ್ದಿಯ ಸತ್ಯಾಂಶ.
ಬಿಬಿಎಂಪಿ ಅಧಿಕಾರಿಗಳು ಬೋರ್ಡ್ ಗಳಲ್ಲಿ ಕನ್ನಡ ಬಳಸಿಲ್ಲ ಎನ್ನುವ ಕಾರಣಕ್ಕೆ ಕೆಲವು ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು. ಅನಂತರ ಬೋರ್ಡ್ ತೆರವುಗೊಳಿಸಲಾಗಿತ್ತು. ರಾಮ್ ದೇವ್ ಹೈ ಫ್ಯಾಷನ್, ಬರ್ಗರ್ ಕಿಂಗ್ ಸೇರಿ ಹಲವು ಅಂಗಡಿಗಳ ಬೋರ್ಡ್ ಗಳಲ್ಲಿರುವ ಇಂಗ್ಲಿಷ್ ಪದಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದರು.
ಇನ್ನು ಹೆಚ್ಚಿನ ಪರಿಶೀಲನೆಗಾಗಿ ಗೂಗಲ್ ಮ್ಯಾಪ್ ನಲ್ಲಿ ಸ್ಟ್ರೀಟ್ ವೀವ್ ಮೂಲಕ ನೋಡಿದಾಗ 'ರಾಮ್ ದೇವ್ ಹೈ ಫ್ಯಾಷನ್' ಬೆಂಗಳೂರಿನ ತಂಬುಚೆಟ್ಟಿ ಪಾಳ್ಯ ಸಮೀಪದ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹತ್ತಿರ ಇದೆ ಎನ್ನುವುದು ತಿಳಿದುಬಂದಿತ್ತು. ನಂತರ ಸೌತ್ ಚೆಕ್ ತಂಡ ಅಂಗಡಿಯ ಮಾಲಕರಲ್ಲೇ ಮಾಹಿತಿ ಪಡೆದಿದ್ದು, ಅಂಗಡಿಯ ಬೋರ್ಡ್ ನಲ್ಲಿ ಇಂಗ್ಲಿಷ್ ಅಕ್ಷರಗಳಿವೆ ಎನ್ನುವ ಕಾರಣಕ್ಕೆ ಬಿಬಿಎಂಪಿ ಸಿಬ್ಬಂದಿ ಬೋರ್ಡ್ ತೆರವುಗೊಳಿಸಿದ್ದರು ಎಂದವರು ಸ್ಪಷ್ಟಪಡಿಸಿದ್ದಾರೆ.
ಅಂಗಡಿಗಳ ಬೋರ್ಡ್ ಗಳಲ್ಲಿ 60 ಶೇಕಡಾ ಕನ್ನಡ ಬಳಕೆಗೆ ಫೆಬ್ರವರಿ 28 ಕೊನೆಯ ದಿನವಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಅಂಗಡಿಗಳ ಬೋರ್ಡ್ ಗಳನ್ನು ಕೇಸರಿ ಬಣ್ಣದ ಕಾರಣ ತೆರವುಗೊಳಿಸಲಾಗಿದೆ ಎನ್ನುವುದು ತಿರುಚಿದ ಸುದ್ದಿಯೇ ಹೊರತು ವಾಸ್ತವವಲ್ಲ