
ರಾಮನ ಕಲಾಕೃತಿಯನ್ನು ಚಿತ್ರಿಸಿದ ರೈಲಿನ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅನೇಕ ಬಳಕೆದಾರರು ಈ ಚಿತ್ರವನ್ನು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ವಿನ್ಯಾಸ ಎಂದು ಹೇಳಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ‘ಭಾರತ ತನ್ನ ಶ್ರೇಷ್ಠ ಪರಂಪರೆಯತ್ತ ಸಾಗುತ್ತಿರುವುದು ಅದ್ಭುತವಾಗಿದೆ ಜೈ ಶ್ರೀ ರಾಮ್’ ಎಂದು ಹೇಳಿಕೊಳ್ಳುತ್ತಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಎಂಬುದು ಕಂಡುಬಂದಿದೆ. ಈ ಫೋಟೋ ಕೃತಕ ಬುದ್ದಿಮತ್ತೆ (AI) ಯಿಂದ ರಚಿಸಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವಂದೇ ಭಾರತ್ ರೈಲಿನಲ್ಲಿ ಶ್ರೀರಾಮನ ಕಲಾಕೃತಿಯ ಬಗ್ಗೆ ಹುಡುಕಿದ್ದೇವೆ. ಆದರೆ, ಇದನ್ನು ದೃಢೀಕರಿಸುವ ಯಾವುದೇ ಅಧಿಕೃತ ಪ್ರಕಟಣೆಗಳು ಅಥವಾ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಸಿಕ್ಕಿಲ್ಲ. ನಾವು ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಸಹ ಪರಿಶೀಲಿಸಿದ್ದೇವೆ. ಭಗವಾನ್ ರಾಮನನ್ನು ಒಳಗೊಂಡ ಹೊಸ ವಂದೇ ಭಾರತ್ ವಿನ್ಯಾಸದ ಬಗ್ಗೆ ಯಾವುದೇ ಉಲ್ಲೇಖ ಅಥವಾ ಅನಾವರಣ ಇರಲಿಲ್ಲ.
ಬಳಿಕ ನಾವು ವೈರಲ್ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ The Rai Pilot ಎಂಬ ವಾಟರ್ ಮಾರ್ಕ್ ಇರುವುದನ್ನು ಗಮನಿಸಿದ್ದೇವೆ. ಇದನ್ನು ನಾವು ಗೂಗಲ್ನಲ್ಲಿ ಹುಡುಕಿದಾಗ ಈ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ಸಿಕ್ಕಿದೆ. ಇದರಲ್ಲಿ ವೈರಲ್ ಫೋಟೋ ಕೂಡ ಇದ್ದು, ಇದಕ್ಕೆ ‘ಈ ಫೋಟೋವನ್ನು ಸಂಪೂರ್ಣವಾಗಿ ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ’ ಎಂಬ ಕ್ಯಾಪ್ಶನ್ ನೀಡಲಾಗಿದೆ.
ಇದೇ ಖಾತೆಯಲ್ಲಿ ಐಪಿಎಲ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಆಟಗಾರರ ಕಲಾಕೃತಿಯನ್ನು ರೈಲಿನಲ್ಲಿ ಬಿಡಿಸಿರುವ ಎಐ ಫೋಟೋ ಕೂಡ ಕಂಡುಬಂದಿದ್ದು, ಅದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಫೋಟೋವನ್ನು ಎಐ ಪತ್ತೆ ಸಾಧನದ ಮೂಲಕ ಪರಿಶೀಲನೆಗೆ ಉದ್ದೇಶಿಸಿದ್ದೇವೆ. ಹೈವ್ ಮಾಡರೇಷನ್ ಮೂಲಕ ಫೋಟೋವನ್ನು ಪರೀಕ್ಷಿಸಿದಾಗ, ಈ ಫೋಟೋ ಎಐ ಆಗಿರುವ ಸಾಧ್ಯತೆಯನ್ನು 97.9% ಆಗಿದೆ ಎಂದು ಹೇಳಿದೆ. ಹಾಗೆಯೆ ಮತ್ತೊಂದು ಎಐ ಪತ್ತೆ ವೆಬ್ಸೈಟ್ ವಾಸ್ ಇಟ್ ಎಐ ಮೂಲಕ ಫೋಟೋ ಪರಿಶೀಲಿಸಿದಾಗ, ಇಲ್ಲೂ ಫೋಟೋ ಎಐನಿಂದ ತಯಾರಿಸಲಾಗಿದೆ ಎಂದು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವಂದೇ ಭಾರತ್ ರೈಲಿನಲ್ಲಿ ಭಗವಾನ್ ರಾಮನ ಕಲಾಕೃತಿ ಇರುವುದು ನಿಜವಲ್ಲ, ಇದನ್ನು ಎಐಯಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.