Kannada

Fact Check: ದೆಹಲಿ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಶಾಸಕ ರವೀಂದ್ರ ಸಿಂಗ್ ಬೀದಿ ವ್ಯಾಪಾರಿಗಳಿಗೆ ವಾರ್ನ್ ಮಾಡಿದ್ದಾರೆ?, ಇಲ್ಲ ಇದು ಹಳೆಯ ವೀಡಿಯೊ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರವೀಂದರ್ ಅವರು ಭರ್ಜರಿ ಜಯ ಸಾಧಿಸಿದ ಬಳಿಕ ವೀಡಿಯೊ ಒಂದು ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ರವೀಂದ್ರ ಸಿಂಗ್ ಅವರು ಬೀದಿ ಬದಿ ಅಂಗಡಿಯ ಮುಂದೆ ಮಾರಾಟಗಾರರ ಬಳಿ ಹೆಸರು ಮತ್ತು ಧರ್ಮವನ್ನು ಕೇಳುತ್ತಿರುವುದು ಕಂಡುಬರುತ್ತದೆ.

vinay bhat

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಇದೀಗ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಬಿಜೆಪಿ ಶಾಸಕ ರವೀಂದ್ರ ಸಿಂಗ್ ಬೀದಿ ವ್ಯಾಪಾರಿಗಳ ಬಳಿ ಧರ್ಮವನ್ನು ಕೇಳುತ್ತಿರುವುದು ಕಾಣಬಹುದು. ಈ ವೀಡಿಯೊ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರದ್ದು ಎಂದು ಅನೇಕರು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಫೆಬ್ರವರಿ 10, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಗೆದ್ದು ಇನ್ನು ಒಂದು ದಿನ ಆಗಲಿಲ್ಲ ಆಗಲೇ ಅಖಾಡಕ್ಕಿಳಿದ ಪರ್ವತ ಗಂಜ್ ನ ಬಿಜೆಪಿ ಶಾಸಕ ರವೀಂದ್ರ_ಸಿಂಗ್. ನೀವು ವ್ಯಾಪಾರ ಮಾಡಿಕೊಳ್ಳಿ ಆದರೆ ನಿಮ್ಮ ಗುರುತನ್ನು ಅಂಗಡಿ ಮುಂದೆ ಹಾಕಿ ಎಂದು ಬಾಂಧವರಿಗೆ ವಾರ್ನಿಂಗ್’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಸಾಮಾಜಿಕ ತಾಣಗಳಲ್ಲಿ ದೆಹಲಿ ಚುನಾವಣೆಗು ಮುನ್ನವೇ ಚಾಲನೆಯಲ್ಲಿದೆ. ಇದು ರವೀಂದ್ರ ಸಿಂಗ್ ನೇಗಿ ಶಾಸಕರಾಗುವ ಮೊದಲು ಡಿಸೆಂಬರ್ 2024 ರಲ್ಲಿ ನಡೆದ ಘಟನೆ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಡಿಸೆಂಬರ್ 8, 2024 ರಂದು jist.news ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದೇ ವೈರಲ್ ರೀತಿಯ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. "ದೆಹಲಿಯಲ್ಲಿ ಹಿಂದೂ ತರಕಾರಿ ಮಾರಾಟಗಾರರ ಬಂಡಿಗಳ ಮೇಲೆ ಕೇಸರಿ ಧ್ವಜಗಳನ್ನು ಇಡುವ ಮೂಲಕ ಬಿಜೆಪಿ ಕೌನ್ಸಿಲರ್ ರವೀಂದರ್ ಸಿಂಗ್ ನೇಗಿ ವಿವಾದವನ್ನು ಹುಟ್ಟುಹಾಕಿದ್ದಾರೆ" ಎಂಬ ಶೀರ್ಷಿಕೆ ಈ ವೀಡಿಯೊಕ್ಕೆ ನೀಡಲಾಗಿದೆ.

ಇದೇ ವೇಳೆ The Observer Post ಕೂಡ ಡಿಸೆಂಬರ್ 6, 2024 ರಂದು ಇದೇ ವೀಡಿಯೊವನ್ನು ಹಂಚಿಕೊಂಡಿದ್ದು, ದೆಹಲಿಯ ವಿನೋದ್ ನಗರದಿಂದ ಸೆರೆಹಿಡಿಯಲಾಗಿದೆ ಎಂದು ಬರೆಯಲಾಗಿದೆ. ‘‘ಡಿಸೆಂಬರ್ 3 ರಂದು ದೆಹಲಿಯ ವಿನೋದ್ ನಗರದಲ್ಲಿ, ಬಿಜೆಪಿ ಕೌನ್ಸಿಲರ್ ರವೀಂದರ್ ಸಿಂಗ್ ನೇಗಿ ಅವರು ಮುಸ್ಲಿಂ ಪನೀರ್ ಮಾರಾಟಗಾರನಿಗೆ ತಮ್ಮ ಹೆಸರನ್ನು ಪ್ರದರ್ಶಿಸುವುದಾಗಿ ಅಥವಾ ಅವರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ನೇಗಿ ತರಕಾರಿ ಮಾರಾಟಗಾರರ ಹೆಸರುಗಳು ಮತ್ತು ಧರ್ಮಗಳ ಬಗ್ಗೆ ಪ್ರಶ್ನಿಸಿದ್ದಾರೆ. ಹಿಂದೂ ಮಾರಾಟಗಾರರ ಅಂಗಡಿಗಳ ಮೇಲೆ ಕೇಸರಿ ಧ್ವಜಗಳನ್ನು ಸ್ಥಾಪಿಸಿದರು’’ ಎಂದು ಬರೆಯಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ‘ravinder singh negi vinod nagar saffron flag’ ಎಂಬ ಕೀವರ್ಡ್ ಬಳಸಿ ಹುಡುಕಿದ್ದೇವೆ. ಆಗ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ದಿ ಟ್ರಿಬ್ಯೂನ್ ಡಿಸೆಂಬರ್ 9, 2024 ರಂದು ಪ್ರಕಟಿಸಿದ ಸುದ್ದಿ ಸಿಕ್ಕಿದೆ. ‘ಬಿಜೆಪಿ ಕೌನ್ಸಿಲರ್ ಮುಸ್ಲಿಂ ಮಾರಾಟಗಾರರನ್ನು ಭಯಭೀತಗೊಳಿಸುತ್ತಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ’ ಎಂದು ಶೀರ್ಷಿಕೆ ನೀಡಲಾಗಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ನೇಗಿ ಅವರು ಬೀದಿ ವ್ಯಾಪಾರಿಗಳ ಬಳಿ ಹೆಸರುಗಳನ್ನು ಕೇಳಿ, ಮುಸ್ಲಿಂ ಮಾರಾಟಗಾರರಿಗೆ ಅವರ ಹೆಸರುಗಳನ್ನು ಪ್ರದರ್ಶಿಸಲು ಹೇಳುತ್ತಿದ್ದಾರೆ ಮತ್ತು ಹಿಂದೂಗಳೆಂದು ಹೇಳಿಕೊಳ್ಳುವ ಅಂಗಡಿಯವರಿಗೆ ಕೇಸರಿ ಧ್ವಜಗಳನ್ನು ವಿತರಿಸುತ್ತಿದ್ದಾರೆ. ದೆಹಲಿ ಪೊಲೀಸರೇ, ಕೋಮು ದ್ವೇಷ ಹರಡಿದ್ದಕ್ಕಾಗಿ ಈ ವ್ಯಕ್ತಿಯ ಮೇಲೆ ಏಕೆ ಆರೋಪ ಹೊರಿಸಿ ಬಂಧಿಸಲಾಗಿಲ್ಲ ಎಂದು ಸಿಪಿಎಂ ಆರೋಸಿದೆ’’ ಎಂದು ವರದಿ ಹೇಳುತ್ತದೆ.

ಸಿಪಿಎಂ ಡಿಸೆಂಬರ್ 8, 2024 ರಂದು ತನ್ನ ಅಧಿಕೃತ ಫೇಸ್‌ಬುಕ್ ಪುಟದ ಮೂಲಕ ಆರೋಪಗಳನ್ನು ಮಾಡಿರುವುದನ್ನು ನೀವು ಇಲ್ಲಿ ನೋಡಬಹುದು.

ದೆಹಲಿ ಚುನಾವಣೆಗು ಮುನ್ನವೇ ಈ ವೀಡಿಯೊವನ್ನು ಹಂಚಿಕೊಂಡಿರುವುದು ಹಾಗೂ ಸುದ್ದಿ ಪ್ರಕಟ ಆಗಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ಆಗುತ್ತಿರು ಈ ವೀಡಿಯೊವನ್ನು ದೆಹಲಿಯಲ್ಲಿ ಬಿಜೆಪಿ ಚುನಾವಣಾ ಗೆಲುವಿನ ನಂತರದ್ದಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Potholes on Kerala road caught on camera? No, viral image is old

Fact Check: ഇത് റഷ്യയിലുണ്ടായ സുനാമി ദൃശ്യങ്ങളോ? വീഡിയോയുടെ സത്യമറിയാം

Fact Check: ஏவுகணை ஏவக்கூடிய ட்ரோன் தயாரித்துள்ள இந்தியா? வைரல் காணொலியின் உண்மை பின்னணி

Fact Check: ರಷ್ಯಾದಲ್ಲಿ ಸುನಾಮಿ ಅಬ್ಬರಕ್ಕೆ ದಡಕ್ಕೆ ಬಂದು ಬಿದ್ದ ಬಿಳಿ ಡಾಲ್ಫಿನ್? ಇಲ್ಲ, ವಿಡಿಯೋ 2023 ರದ್ದು

Fact Check: హైదరాబాద్‌లో ఇంట్లోకి చొరబడి పూజారిపై దాడి? లేదు, నిజం ఇక్కడ తెలుసుకోండి