ಇಂಡೋನೇಷ್ಯಾದ ಸುಮಾತ್ರಾದಲ್ಲಿ ಭೀಕರ ಪ್ರವಾಹದ ಸಮಯದಲ್ಲಿ ಆನೆಯೊಂದು ಹುಲಿಯನ್ನು ರಕ್ಷಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿದೆ. ಈ ಕ್ಲಿಪ್‌ನಲ್ಲಿ, ಬಲವಾದ ನೀರಿನ ಪ್ರವಾಹದ ನಡುವೆ ಹುಲಿಯೊಂದು ಆನೆಯ ಬೆನ್ನಿನ ಮೇಲೆ ಹತ್ತುವುದನ್ನು ಕಾಣಬಹುದು. ಸುಮಾತ್ರಾದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದ ಸಮಯದಲ್ಲಿ ಈ ಘಟನೆಯನ್ನು ಅಪರೂಪದ ಮತ್ತು ಭಾವನಾತ್ಮಕ ಕ್ಷಣ ಎಂದು ಪೋಸ್ಟ್ ವಿವರಿಸುತ್ತದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸುಮಾತ್ರದಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ಸಮಯದಲ್ಲಿ ಅಪರೂಪದ ಮತ್ತು ಹೃದಯಸ್ಪರ್ಶಿ ಘಟನೆಯನ್ನು ಸೆರೆಹಿಡಿಯಲಾಗಿದೆ. ಬಲವಾದ ಪ್ರವಾಹಕ್ಕೆ ಸಿಲುಕಿ ಸುಮಾತ್ರನ್ ಆನೆಯೊಂದು ಹುಲಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಈ ಅಪರೂಪದ ಕ್ಷಣ ತಕ್ಷಣವೇ ಇಂಡೋನೇಷ್ಯಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ನಿಜವಲ್ಲ. ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಆನೆಯೊಂದು ಹುಲಿಯನ್ನು ರಕ್ಷಿಸುವ ಅಪರೂಪದ ದೃಶ್ಯಕ್ಕಾಗಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ಈ ಅಸಾಮಾನ್ಯ ಘಟನೆಯನ್ನು ಒಳಗೊಂಡ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿ ಕಂಡುಬಂದಿಲ್ಲ.
ಬಳಿಕ ಈ ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ನೋಡಿದ್ದೇವೆ. ಇದರಲ್ಲಿ ಆನೆ ಮತ್ತು ಹುಲಿಯ ರೋಬೋಟಿಕ್ ಚಲನೆಗಳು ಸೇರಿದಂತೆ ಕೆಲವು ನ್ಯೂನತೆಗಳನ್ನು ಗಮನಿಸಿದ್ದೇವೆ. ಅಲ್ಲದೆ ನೀರಿನ ಹರಿವು ಅಸ್ವಾಭಾವಿಕವಾಗಿ ಸುಗಮವಾಗಿ ಕಾಣುತ್ತದೆ, ಬಲವಾದ ಪ್ರವಾಹಗಳ ಹೊರತಾಗಿಯೂ ಆನೆಯು ಪರಿಪೂರ್ಣ ಸಮತೋಲನದೊಂದಿಗೆ ಹುಲಿಯನ್ನು ತನ್ನ ಬೆನ್ನಿನ ಮೇಲೆ ಸ್ಥಿರವಾಗಿ ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. ಈ ಅಂಶಗಳು ವೀಡಿಯೊವನ್ನು ಡಿಜಿಟಲ್ ರೀತಿಯಲ್ಲಿ ಕುಶಲತೆಯಿಂದ ನಿರ್ವಹಿಸಲಾಗಿದೆ ಎಂದು ಬಲವಾಗಿ ಸೂಚಿಸುತ್ತವೆ.
ಇದರ ಆಧಾರದ ಮೇಲೆ, ನಾವು ಮತ್ತಷ್ಟು ತನಿಖೆ ನಡೆಸಿ ವೀಡಿಯೊವನ್ನು AI ಪತ್ತೆ ಸಾಧನ ಹೈವ್ ಮಾಡರೇಶನ್‌ಗೆ ಅಪ್‌ಲೋಡ್ ಮಾಡಿದ್ದೇವೆ. ಇದು ವೀಡಿಯೊವನ್ನು AI ನಿಂದ ರಚಿಸಲಾಗಿರುವ ಶೇಕಡಾ 99.9 ಕ್ಕಿಂತ ಹೆಚ್ಚಿನ ಸಂಭವನೀಯತೆಯನ್ನು ತೋರಿಸಿದೆ. Sightengine ನಲ್ಲಿ ಪರೀಕ್ಷಿಸಿದಾಗ ಇದನ್ನು ಶೇ. 78 ರಷ್ಟು ಎಐಯಿಂದ ಸೃಷ್ಟಿಸಲಾಗಿದೆ ಎಂದು ಹೇಳಿದೆ. WasitAI ಕೂಡ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಆನೆಯೊಂದು ಹುಲಿಯನ್ನು ಪ್ರವಾಹದಿಂದ ರಕ್ಷಿಸುವ ವೀಡಿಯೊ ನಿಜವಲ್ಲ, ಇದನ್ನು ಕೃತಕ ಬುದ್ಧಿಮತ್ತೆ ಬಳಸಿ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.