ಕನ್ನಡದ ಹಲವಾರು ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ ಒಬ್ಬ ಹುಡುಗಿ ತನ್ನ ಸಹಪಾಠಿಯನ್ನು ಪಿಜ್ಜಾ ಡೆಲಿವರಿ ಬಾಯ್ ಆಗಿದ್ದಕ್ಕಾಗಿ ಅಣಕಿಸುತ್ತಾ ವೀಡಿಯೊ ಮಾಡಿದ್ದಾಳೆ ಎಂದು ಹೇಳಲಾಗಿದೆ.
ವೈರಲ್ ಆಗಿರುವ ಈ ವೀಡಿಯೊ 35 ಸೆಕೆಂಡುಗಳಷ್ಟು ಉದ್ದವಾಗಿದ್ದು, ಇದರಲ್ಲಿ ಒಬ್ಬ ಮಹಿಳೆ ಪಿಜ್ಜಾ ಡೆಲಿವರಿ ಹುಡುಗನ ವಿಡಿಯೋವನ್ನು ರೆಕಾರ್ಡ್ ಮಾಡಿ, "ಇವನು ನನ್ನ ಸ್ನೇಹಿತ, ನನಗೆ ಓದಲು ಪ್ರೇರೇಪಿಸುವ ರೀಲ್‌ಗಳನ್ನು ಕಳುಹಿಸುತ್ತಿದ್ದ. ಇಂದು ಅವನಿಗೆ 30 ವರ್ಷ ಮತ್ತು ಡೊಮಿನೊ ಮಾರಾಟಗಾರ." ನಂತರ ಅವಳು ಅವನನ್ನು ಕೇಳುತ್ತಾಳೆ, "ನೀವು ಡೊಮಿನೊ ಮಾರಾಟಗಾರರಾಗಿರುವುದಕ್ಕೆ ಹೇಗನಿಸುತ್ತದೆ? ನೀವು ಮದುವೆಯಾಗಿದ್ದೀರಾ? ನೀವು ಶಾಲೆಯನ್ನು ತಪ್ಪಿಸಿಕೊಳ್ಳುತ್ತೀರಾ?" ಅವಳು ಈ ವೀಡಿಯೊವನ್ನು ತನ್ನ ಇತರ ಸ್ನೇಹಿತರಿಗೆ ಕಳುಹಿಸುವುದಾಗಿಯೂ ಹೇಳುತ್ತಾಳೆ.
ನ್ಯೂಸ್ ಕರ್ನಾಟಕ ತನ್ನ ಫೇಸ್ಬುಕ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡು, ‘‘ಪಿಜ್ಜಾ ಡೆಲಿವರಿ ಹುಡುಗನೊಬ್ಬ ತನ್ನ ಶಾಲಾ ಸಮಯದ ಗೆಳತಿಯನ್ನು ರಸ್ತೆಯಲ್ಲಿ ಭೇಟಿಯಾದ. ಅವಳು ರೆಕಾರ್ಡ್ ಮಾಡಲು ಪ್ರಾರಂಭಿಸಿದಳು ಮತ್ತು ಅವನನ್ನು ಅಣಕಿಸಿದಳು: "ನೀವು ಶಾಲೆಯಲ್ಲಿ ಎಲ್ಲರನ್ನೂ ಪ್ರೇರೇಪಿಸುತ್ತಿದ್ದಿರಿ... ಮತ್ತು ಈಗ ನೀವು ಪಿಜ್ಜಾ ಡೆಲಿವರಿ ಮಾಡುತ್ತಿದ್ದೀರಾ?" ನಂತರ ಅವಳು ವೀಡಿಯೊವನ್ನು ಇತರ ಸ್ನೇಹಿತರಿಗೆ ಕಳುಹಿಸುವುದಾಗಿ ಹೇಳಿದಳು. ಅವಳು ನಕ್ಕಳು... ಆದರೆ ಅವಳು ಒಂದು ಕ್ಷಣವೂ ಯೋಚಿಸಲಿಲ್ಲ: ಹುಡುಗರ ಜೀವನ ಸುಲಭವಲ್ಲ. ಕೆಲವೊಮ್ಮೆ ಜವಾಬ್ದಾರಿಗಳು ವಯಸ್ಸಿಗಿಂತ ಮುಂಚೆಯೇ ಬರುತ್ತವೆ. ಕನಸುಗಳು ಸಮಾಧಿಯಾಗುತ್ತವೆ. ಸ್ವಾಭಿಮಾನವನ್ನು ಪರೀಕ್ಷಿಸಲಾಗುತ್ತದೆ. ಪಿಜ್ಜಾ ಡೆಲಿವರಿ ಮಾಡುವುದು ನಾಚಿಕೆಗೇಡಿನ ಸಂಗತಿಯಲ್ಲ. ಹುಡುಗನಾಗಿರುವುದು ಸುಲಭವಲ್ಲ.’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನಿಜವಾಗಿ ನಡೆದ ಘಟನೆ ಅಲ್ಲ, ಬದಲಾಗಿ ಇದೊಂದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ನಲ್ಲಿ ಹುಡುಕಿದಾಗ, ಇದೇ ವೀಡಿಯೊವನ್ನು ಜನವರಿ 27 ರಂದು ರಿಷಿಕಾ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವುದು ಸಿಕ್ಕಿದೆ. ಈ ವೀಡಿಯೊ ನಟನೆಯದ್ದು ಎಂದು ಕ್ಯಾಪ್ಶನ್ ನೀಡಲಾಗಿದೆ.
ಈ ಖಾತೆಯನ್ನು ಮತ್ತಷ್ಟು ಪರಿಶೀಲಿಸಿದಾಗ, ಜನವರಿ 29 ರಂದು ಅಪ್‌ಲೋಡ್ ಮಾಡಲಾದ ಮತ್ತೊಂದು ವೀಡಿಯೊ ನಮಗೆ ಸಿಕ್ಕಿತು. ಈ ವೀಡಿಯೊವನ್ನು ಕೇವಲ ಮನರಂಜನಾ ಉದ್ದೇಶಗಳಿಗಾಗಿ ರಚಿಸಿದ್ದಾರೆ ಎಂದು ಇದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ರಿಷಿಕಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಪಿಜ್ಜಾ ಡೆಲಿವರಿ ಬಾಯ್ ಆಗಿ ನಟಿಸಿರುವ ತರುಣ್ ಸಿಂಗ್ ಅವರ ಇನ್‌ಸ್ಟಾಗ್ರಾಮ್ ಖಾತೆಯೂ ನಮಗೆ ಸಿಕ್ಕಿದೆ. ಅವರು ಜನವರಿ 30 ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗೆ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಇದು ಕೇವಲ ಒಂದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಎಂದು ವಿವರಿಸಿದ್ದಾರೆ. ಅಲ್ಲದೆ, ಈಗ ಕೆಲ ಜನರು ನನ್ನ ನಕಲಿ ಐಡಿಗಳನ್ನು ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ, ಅವರು ಈ ಸ್ಪಷ್ಟೀಕರಣ ವೀಡಿಯೊವನ್ನು ಮಾಡಿದ್ದೇನೆ ಎಂದಿದ್ದಾರೆ.
ಇದಲ್ಲದೆ, ರಿಷಿಕಾ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಪ್‌ಲೋಡ್ ಮಾಡಲಾದ ಇತರ ವೀಡಿಯೊಗಳಲ್ಲಿ ಸಹ ತರುಣ್ ಸಿಂಗ್ ಅವರನ್ನು ಕಾಣಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪಿಜ್ಜಾ ಡೆಲಿವರಿ ಬಾಯ್ ಆಗಿದ್ದಕ್ಕಾಗಿ ಹುಡುಗಿಯೊಬ್ಬಳು ತನ್ನ ಸ್ನೇಹಿತನನ್ನು ಅಣಕಿಸುವುದನ್ನು ತೋರಿಸುವ ವೈರಲ್ ವೀಡಿಯೊ ಸ್ಕ್ರಿಪ್ಟ್ ಮಾಡಲಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.