Kannada

Fact Check: ಹಿಂದೂ ಮಹಿಳೆಯೊಂದಿಗೆ ಜಿಮ್​​ನಲ್ಲಿ ಮುಸ್ಲಿಂ ಜಿಮ್ ಟ್ರೈನರ್ ಅಸಭ್ಯ ವರ್ತನೆ?: ವೈರಲ್ ವೀಡಿಯೊದ ನಿಜಾಂಶ ಇಲ್ಲಿದೆ

ವೈರಲ್ ಆಗಿರುವ ವೀಡಿಯೊದಲ್ಲಿ, ಯುವಕನೊಬ್ಬ ಹುಡುಗಿಗೆ ತರಬೇತಿ ನೀಡುವುದು ಮತ್ತು ಅವಳೊಂದಿಗೆ ಅಶ್ಲೀಲವಾಗಿ ವರ್ತಿಸುವುದನ್ನು ಕಾಣಬಹುದು.

vinay bhat

ಬಿಲಾಲ್ ಅಹ್ಮದ್ ಖಾನ್ ಎಂಬಾತ ತನ್ನ ಜಿಮ್‌ನಲ್ಲಿ ಹಿಂದೂ ಹುಡುಗಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಯುವಕನೊಬ್ಬ ಹುಡುಗಿಗೆ ತರಬೇತಿ ನೀಡುವುದು ಮತ್ತು ಅವಳೊಂದಿಗೆ ಅಶ್ಲೀಲವಾಗಿ ವರ್ತಿಸುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ನವೆಂಬರ್ 18, 2024 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ನಮ್ಮ ಹಿಂದೂಗಳಿಗೆ ಯಾವಾಗ್ ಬುದ್ಧಿ ಬರುತ್ತೋ ಏನೋ. ಬಿಲಾಲ್ ಅಹ್ಮದ್ ಜಿಮ್‌ನಲ್ಲಿ ಹಿಂದೂ ಹೆಣ್ಣುಮಕ್ಕಳ ದೇಹ ದೊಂದಿಗೆ ಆಟವಾಡುತ್ತಿದ್ದಾನೆ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊದಲ್ಲಿ ಜಿಮ್ ಟ್ರೈನರ್ ತನ್ನ ಹೆಂಡತಿಗೆ ತರಬೇತಿ ನೀಡುತ್ತಿದ್ದಾನೆ ಮತ್ತು ಈ ವೀಡಿಯೊ ಭಾರತದ್ದಲ್ಲ, ಇದು ಟ್ರಿನಿಡಾಡ್ ಮತ್ತು ಟೊಬಾಗೋದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲು ವೀಡಿಯೊವನ್ನು ಕೀ-ಫ್ರೇಮ್‌ಗಳಾಗಿ ವಿಂಗಡಿಸಿ ನಂತರ ಗೂಗಲ್‌ನಲ್ಲಿ ಪ್ರತಿ ಕೀ-ಫ್ರೇಮ್ ಅನ್ನು ಹುಡುಕಿದ್ದೇವೆ. ಆಗ ನಮಗೆ ಈ ವೈರಲ್ ವೀಡಿಯೊ 2017 ರಿಂದ ಅಂತರ್ಜಾಲದಲ್ಲಿ ಪ್ರಸ್ತುತವಾಗಿದೆ ಎಂಬುದು ಕಂಡುಬಂತು. ಇದೇ ವೀಡಿಯೊವನ್ನು 2017 ರಲ್ಲಿ 'ಬಾಡಿ ಬೈ ಇಮ್ರಾನ್' ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳಲ್ಲಿ ಪ್ರಕಟಿಸಿರುವುದು ನಮಗೆ ಸಿಕ್ಕಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಇವರಿಬ್ಬರೂ ಜಿಮ್​ನಲ್ಲಿ ತಾಲೀಮು ನಡೆಸುತ್ತಿರುವ ಅನೇಕ ವೀಡಿಯೊ ಇದೆ. ಈ ಪೈಕಿ ಒಂದು ವೀಡಿಯೊದ ವಿವರಣೆಯಲ್ಲಿ, ಇಮ್ರಾನ್ ರಜಾಕ್ ಅವರ ಜಿಮ್‌ನಲ್ಲಿ ಅವರ ಪತ್ನಿ ರೇಷ್ಮಾ ರಜಾಕ್ ಅವರಿಗೆ ತರಬೇತಿ ನೀಡುವ ದೃಶ್ಯಗಳು ಎಂದು ಉಲ್ಲೇಖಿಸಲಾಗಿದೆ.

ಇಮ್ರಾನ್ ಮತ್ತು ರೇಷ್ಮಾ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳನ್ನು ಗಮನಿಸಿದಾಗ, ಅವರು ವಿವಾಹಿತ ದಂಪತಿಗಳು ಎಂಬುದು ದೃಢಪಟ್ಟಿದೆ.

ಇನ್ನು ವೀಡಿಯೊದಲ್ಲಿರುವ ಜಿಮ್ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿದೆ, ಭಾರತದಲ್ಲಿ ಅಲ್ಲ. ಟ್ರಿನಿಡಾಡ್ ಮತ್ತು ಟೊಬೆಗೋ ದಕ್ಷಿಣ ಕೆರಿಬ್ಬಿಯನ್‍‍ನಲ್ಲಿರುವ ಒಂದು ದ್ವೀಪಸಮೂಹ ರಾಷ್ಟ್ರ. ಇದು ವೆನೆಜುವೆಲಾ ಬಳಿ ಇದೆ. ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಈ ಜಿಮ್ ಅನ್ನು ಲಾಸ್ಟ್ ಸರ್ಕ್ಯುಲರ್ ಜಿಮ್ ಎಂದು ಉಲ್ಲೇಖಿಸಿರುವ ಬಾಡಿ ಬೈ ಇಮ್ರಾನ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಹೀಗಾಗಿ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ವಿವಾಹಿತ ದಂಪತಿಗಳ ಹಳೆಯ ಜಿಮ್ ವರ್ಕ್‌ಔಟ್ ವೀಡಿಯೊವನ್ನು ಈಗ ಜಿಮ್​ನಲ್ಲಿ ಹಿಂದೂ ಮಹಿಳೆಯೊಂದಿಗೆ ಮುಸ್ಲಿಂ ಜಿಮ್ ಟ್ರೈನರ್ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಕೋಮುಕೋನವಿಲ್ಲ.

Fact Check: Vijay’s rally sees massive turnout in cars? No, image shows Maruti Suzuki’s lot in Gujarat

Fact Check: പ്രധാനമന്ത്രി നരേന്ദ്രമോദിയെ ഡ്രോണ്‍ഷോയിലൂടെ വരവേറ്റ് ചൈന? ചിത്രത്തിന്റെ സത്യമറിയാം

Fact Check: தவெக மதுரை மாநாடு குறித்த கேள்விக்கு பதிலளிக்காமல் சென்றாரா எஸ்.ஏ. சந்திரசேகர்? உண்மை அறிக

Fact Check: ಮತ ಕಳ್ಳತನ ವಿರುದ್ಧದ ರ್ಯಾಲಿಯಲ್ಲಿ ಶಾಲಾ ಮಕ್ಕಳಿಂದ ಬಿಜೆಪಿ ಜಿಂದಾಬಾದ್ ಘೋಷಣೆ?

Fact Check: రాహుల్ గాంధీ ఓటర్ అధికార యాత్రను వ్యతిరేకిస్తున్న మహిళ? లేదు, ఇది పాత వీడియో