ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಕೆಲವರು ವ್ಯಕ್ತಿಯೊಬ್ಬರಿಗೆ ಚಪ್ಪಲಿ ಹಾರ ಹಾಕುತ್ತಿರುವುದು ಕಾಣಬಹುದು. ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ಉಲ್ಲೇಖಿಸಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಮತ್ತು ಹಿಂದೂ ಶಿಕ್ಷಕನ ಮೇಲೆ ಚಪ್ಪಲಿ ಹಾರ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ಇವರು ಒಬ್ಬ ಹಿಂದೂ ಶಿಕ್ಷಕ. ಇವರನ್ನು ಎಷ್ಟು ಬಾರಿ ಮತಾಂತರ ಆಗು ಅಂತ ಬೆದರಿಕೆ ಹಾಕಿದ್ರು ಮತಾಂತರ ವಾಗಲಿಲ್ಲ. ಅದ್ಕಕೆ ಈ ಶಿಕ್ಷೆ ಕೊಟ್ಟ ಅಲ್ಲಿಯ ಮುಸ್ಲಿಮ್ಮರು. ಹಿಂದುಗಳೇ ನಾಳೆ ನಿಮಗೂ ಇದೆ ಪರಿಸ್ಥಿತಿ ಬರುತ್ತೆ ಎಚ್ಚರ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೀಡಿಯೊದಲ್ಲಿ ಕಾಣುವ ವ್ಯಕ್ತಿ ಮುಸ್ಲಿಂ ವೈದ್ಯನಾಗಿದ್ದು, ದೇವದೂಷಣೆಯ ಆರೋಪದ ಮೇಲೆ ಅವರಿಗೆ ಚಪ್ಪಲಿ ಹಾರ ಹಾಕಲಾಗಿದೆ.
ನಮ್ಮ ತನಿಖೆಯನ್ನು ಪ್ರಾರಂಭಿಸಿ, ಮೊದಲನೆಯದಾಗಿ ನಾವು ಗೂಗಲ್ ಲೆನ್ಸ್ ಮೂಲಕ ವೈರಲ್ ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಹುಡುಕಿದೆವು. ಆಗ ಈ ವೀಡಿಯೊವನ್ನು ಜೂನ್ 20, 2025 ರಂದು ಬಿಎಂ ಜಾಹಿದ್ ಹುಸೇನ್ ಎಂಬ ಎಕ್ಸ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಸಿಕ್ಕಿದೆ. ಇಲ್ಲಿ ವೀಡಿಯೊದೊಂದಿಗೆ ನೀಡಲಾದ ಮಾಹಿತಿಯ ಪ್ರಕಾರ, ಇದು ಡಾ. ಅಹ್ಮದ್ ಅಲಿ. ಅದೇ ಸಮಯದಲ್ಲಿ, ಈ ಪ್ರಕರಣ ಬಾಂಗ್ಲಾದೇಶದ ರಾಜ್‌ಬರಿಯಲ್ಲಿ ನಡೆದಿದೆ.
ಇದರ ಆಧಾರದ ಮೇಲೆ, ನಾವು ನಮ್ಮ ತನಿಖೆಯನ್ನು ಮುಂದುವರಿಸಿದಾಗ ಬಾಂಗ್ಲಾದೇಶದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು ಜೂನ್ 19, 2025 ರಂದು ಹಂಚಿಕೊಂಡ ಅದೇ ವೀಡಿಯೊ ಕಂಡುಬಂದಿದೆ. ಇಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ವ್ಯಕ್ತಿ ಡಾ. ಅಹ್ಮದ್ ಅಲಿ, ಈ ಘಟನೆಯು ಧರ್ಮನಿಂದೆನೆಯ ಪ್ರಕರಣಕ್ಕೆ ಸಂಬಂಧಿಸಿದೆ.
ಪ್ರಕರಣದ ಕುರಿತು ಸುದ್ದಿಗಳನ್ನು ನಾವು ಹುಡುಕಿದಾಗ, ಢಾಕಾ ಟೈಮ್ಸ್ 24 ರ ವೆಬ್‌ಸೈಟ್‌ನಲ್ಲಿಯೂ ನಮಗೆ ಮಾಹಿತಿ ಸಿಕ್ಕಿತು. ಜೂನ್ 15, 2025 ರ ಸುದ್ದಿಯ ಪ್ರಕಾರ, ‘‘ರಾಜ್‌ಬರಿಯ ಬಲಿಯಕಂಡಿಯಲ್ಲಿ ನಿವೃತ್ತ ಸಮುದಾಯ ವೈದ್ಯಾಧಿಕಾರಿಯೊಬ್ಬರು ಪ್ರವಾದಿ ಮುಹಮ್ಮದ್ (ಸ.ಅ.) ಅವರನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಮೇಲೆ ಕೋಪಗೊಂಡ ಗುಂಪೊಂದು ಅವರನ್ನು ಥಳಿಸಿತು. ಬಲಿಯಾದ ಅಹ್ಮದ್ ಅಲಿ ಅದೇ ಉಪಜಿಲ್ಲಾದ ನವಾಬ್‌ಪುರ ಒಕ್ಕೂಟದ ಟೆಕಾಟಿ ಗ್ರಾಮದ ನಿವಾಸಿ. ಈ ಘಟನೆ ಭಾನುವಾರ ಮಧ್ಯಾಹ್ನ 12:30 ರ ಸುಮಾರಿಗೆ ನಡೆದಿದೆ. ನಂತರ, ಬಲಿಯಕಂಡಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ಶಾಂತಗೊಳಿಸಿ ಬಲಿಪಶುವನ್ನು ರಕ್ಷಿಸಿದರು. ಈ ವಿಷಯದ ಬಗ್ಗೆ, ಬಲಿಯಕಂಡಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ (ಒಸಿ) ಮೊಹಮ್ಮದ್ ಜಮಾಲ್ ಉದ್ದೀನ್ ಮಾತನಾಡಿ, ಬೆಳಿಗ್ಗೆ ಬೆರುಲಿ ಬಜಾರ್‌ನಲ್ಲಿರುವ ಚಹಾ ಅಂಗಡಿಯಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಅಹ್ಮದ್ ಅಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸುದ್ದಿ ಆ ಪ್ರದೇಶದಲ್ಲಿ ಹರಡಿದಾಗ, ಮಧ್ಯಾಹ್ನ ಗುಂಪೊಂದು ಅವರನ್ನು ಥಳಿಸಿತು.’’ ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ, ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕ ಮತಾಂತರ ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಈರೀತಿ ಅವಮಾನಿಸಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ವೈರಲ್ ಆಗಿರುವ ಹಕ್ಕು ಸುಳ್ಳು.