ಅಡುಗೆ ಮನೆಯಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೈಯಲ್ಲಿ ಪಾತ್ರೆಯೊಂದನ್ನು ಹಿಡಿದುಕೊಂಡು ಬಾಗಿಲು ಮುಚ್ಚಿ ಬಳಿಕ ತನ್ನ ಕುರ್ತಾವನ್ನು ಎತ್ತಿ ಫ್ರಿಡ್ಜ್‌ನ ಹಿಂದೆ ಹೋಗುತ್ತಾಳೆ. ನಂತರ ಪಾತ್ರೆಯನ್ನು ಇಟ್ಟು ಬಟ್ಟೆಯಿಂದ ಕೈಗಳನ್ನು ಒರೆಸುವುದು ವಿಡಿಯೋದಲ್ಲಿದೆ.
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಉಗುಳಿನ ಬಳಿಕ ಈಗ ಮೂತ್ರ ಜಿಹಾದ್ ಶುರುವಾಗಿದೆ. ಗಾಜಿಯಾಬಾದ್‌ನಲ್ಲಿ ಮುಸ್ಲಿಂ ಮನೆಕೆಲಸದಾಕೆ ಪಾತ್ರೆಯೊಂದರಲ್ಲಿ ಮೂತ್ರ ಮಾಡಿ ಅದರಲ್ಲಿಯೇ ರೊಟ್ಟಿ ತಯಾರಿಸಿರುವ ಆಘಾತಕಾರಿ ಘಟನೆ ಮನೆಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ,’’ ಎಂದು ಬರೆದುಕೊಂಡಿದ್ದಾರೆ.
ಇದೇ ವಿಡಿಯೋವನ್ನು ಬೇರೆ ಬೇರೆ ರೀತಿಯಲ್ಲಿ ಹಂಚಿಕೊಳ್ಳಲಾಗುತ್ತಿದೆ. ಎಲ್ಲದರಲ್ಲೂ ಈ ಮಹಿಳೆ ಮುಸ್ಲಿಂ ಎಂದು ಬರೆಯಲಾಗಿದೆ.
ಸೌತ್ ಚೆಕ್ ಈ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ವಿಡಿಯೋದಲ್ಲಿರುವ ಮಹಿಳೆ ಮುಸ್ಲಿಂ ಅಲ್ಲ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕ್ರಾಸಿಂಗ್ ರಿಪಬ್ಲಿಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರೀತಿ ಅವರು, ಈ ಮಹಿಳೆ ರೀನಾ, ಅವರು ಹಿಂದೂ ಸಮುದಾಯದಿಂದ ಬಂದವರು ಎಂದು ನ್ಯೂಸ್‌ಮೀಟರ್‌ಗೆ ಖಚಿತಪಡಿಸಿದ್ದಾರೆ.
ನಾವು ಎಫ್‌ಐಆರ್‌ನ ಪ್ರತಿಯನ್ನು ಕೂಡ ಪಡೆದುಕೊಂಡಿದ್ದೇವೆ. ಗೌತಮ್ ಕುಮಾರ್ ಅವರ ಪತ್ನಿ ರೂಪಮ್ ಅವರು ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಎಫ್‌ಐಆರ್ ಪ್ರಕಾರ, ಗಾಜಿಯಾಬಾದ್‌ನ ಶಾಂತಿನಗರ ನಿವಾಸಿ ಪ್ರಮೋದ್ ಕುಮಾರ್ ಅವರ ಪತ್ನಿ ರೀನಾ ಕಳೆದ ಎಂಟು ವರ್ಷಗಳಿಂದ ರೂಪಮ್ ಅವರ ಮನೆಗೆ ಅಡುಗೆ ಮಾಡುತ್ತಿದ್ದರು. ಅಕ್ಟೋಬರ್ 14, 2024 ರಂದು, ರೂಪಮ್, ಮೊಬೈಲ್ ಕ್ಯಾಮೆರಾ ದೃಶ್ಯಗಳ ಮೂಲಕ, ರೀನಾ ಪಾತ್ರೆಯಲ್ಲಿ ಮೂತ್ರ ವಿಸರ್ಜಿಸುತ್ತಿರುವುದನ್ನು ಮತ್ತು ರೊಟ್ಟಿಗಳನ್ನು ತಯಾರಿಸಲು ಬಳಸುತ್ತಿರುವುದನ್ನು ಸೆರೆ ಹಿಡಿದಿದ್ದಾರೆ. ರೂಪಮ್ ಅವರ ಕುಟುಂಬವು ಹಲವಾರು ತಿಂಗಳುಗಳಿಂದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 16 ರಂದು ಪ್ರಕಟವಾದ NDTV ವರದಿಯ ಪ್ರಕಾರ, ಕಳೆದ ಎಂಟು ವರ್ಷಗಳಿಂದ ಗಾಜಿಯಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಮನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ 32 ವರ್ಷದ ರೀನಾ ಅವರು ರೊಟ್ಟಿ ಮಾಡಲು ಬಳಸುವ ಹಿಟ್ಟಿನಲ್ಲಿ ಮೂತ್ರವನ್ನು ಬೆರೆಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಬರೆಯಲಾಗಿದೆ.
ಎಎನ್‌ಐ ಕೂಡ ಬಂಧನದ ವಿಡಿಯೋವನ್ನು ಹಂಚಿಕೊಂಡಿದೆ. "ಗಾಜಿಯಾಬಾದ್‌ನ ರೆಸಿಡೆನ್ಶಿಯಲ್ ಸೊಸೈಟಿಯೊಂದರಲ್ಲಿ ಹಿಟ್ಟನ್ನು ತಯಾರಿಸಲು ಮೂತ್ರವನ್ನು ಬೆರೆಸಿದ ಆರೋಪದ ಮೇಲೆ ರೀನಾ ಎಂಬವರನ್ನು ಪೊಲೀಸರು ಗುರುತಿಸಿ, ಮಹಿಳೆಯನ್ನು ಕ್ರಾಸಿಂಗ್ಸ್ ರಿಪಬ್ಲಿಕ್ ಪಿಎಸ್ ತಂಡವು ಬಂಧಿಸಿದೆ" ಎಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.
ಹೀಗಾಗಿ, ಎಫ್‌ಐಆರ್ ಮತ್ತು ಇನ್ಸ್‌ಪೆಕ್ಟರ್ ಪ್ರೀತಿ ಅವರ ಹೇಳಿಕೆಯನ್ನು ಆಧರಿಸಿ, ಆಹಾರದಲ್ಲಿ ಮೂತ್ರವನ್ನು ಬೆರೆಸಿ ಸಿಕ್ಕಿಬಿದ್ದ ಮಹಿಳೆ ಮುಸ್ಲಿಂ ಅಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.