Kannada

Fact Check: ಮಹಾಕುಂಭಕ್ಕೆ ತೆರಳುತ್ತಿದ್ದ ವಯಸ್ಸಾದ ಪ್ರಯಾಣಿಕರಿಂದ ಟಿಟಿಇ ಹಣ ಪಡೆದಿದ್ದು ನಿಜವೇ? ಇಲ್ಲ, ಇದು 2019ರ ವೀಡಿಯೊ

ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದ ವೃದ್ಧ ಪ್ರಯಾಣಿಕರಿಂದ ಟಿಟಿಇ ಬಲವಂತವಾಗಿ ಹಣ ಪಡೆಯುತ್ತಿದ್ದಾರೆ ಎಂದು ತೋರಿಸುವ ವೈರಲ್ ವೀಡಿಯೊ ನಕಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Vinay Bhat

ವೃದ್ಧ ಪ್ರಯಾಣಿಕರೊಬ್ಬರಿಂದ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಬಲವಂತವಾಗಿ ಹಣ ಪಡೆಯುತ್ತಿರುವುದನ್ನು ತೋರಿಸುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪ್ರಯಾಣಿಸುತ್ತಿರುವಾಗ ಈ ಘಟನೆ ನಡೆದಿದೆ ಎಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಒಂದು ಒಂದು ರೂಪಾಯಿ ಜೋಡಿಸಿ ಮಹಾಕುಂಭ್ ಮೇಳಕ್ಕೆ ಹೋದ ಇವರ ಹತ್ತಿರ ದುಡ್ಡು ತಕೊಂಡ ಟಿ ಟಿ’’ ಎಂದು ಬರೆದುಕೊಂಡಿದ್ದಾರೆ. (ಆರ್ಕೈವ್)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2019 ರ ವೀಡಿಯೊ ಆಗಿದ್ದು, ಉತ್ತರ ಪ್ರದೇಶದ ಚಂದೌಲಿಯಿಂದ ಬಂದಿದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಈ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಈ ವೀಡಿಯೊ ಹಲವು ವರ್ಷಗಳಿಂದ ಇಂಟರ್ನೆಟ್‌ನಲ್ಲಿದೆ ಎಂಬುದು ತಿಳಿದುಬಂತು. ಹೀಗಾಗಿ ಮಹಾ ಕುಂಭಕ್ಕೂ ಈ ವಿಡಿಯೊಕ್ಕು ಯಾವುದೇ ಸಂಬಂಧವಿಲ್ಲ ಎಂಬುದು ಖಚಿತವಾಯಿತು.

ಇದೇ ಸಂದರ್ಭ ಜುಲೈ 23, 2019 ರಂದು ಎಕ್ಸ್ ಪೋಸ್ಟ್ ಒಂದನ್ನು ಕಂಡಿದ್ದೇವೆ. ಬಳಕೆದಾರರೊಬ್ಬರು ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡು, ‘‘ಸರ್ ಈ ಭ್ರಷ್ಟ ರೈಲ್ವೆ ಟಿಸಿ ಹಿರಿಯ ನಾಗರಿಕರಿಂದ (ರೈತರು) ಹಣ ಪಡೆಯುತ್ತಿದ್ದಾರೆ’’ ಎಂದು ಬರೆದು ರೈಲ್ವೆ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ರೈಲ್ವೆ ಸೇವಾದ ಅಧಿಕೃತ ಖಾತೆ ರಿಪ್ಲೇ ಕೊಟ್ಟಿದ್ದು, ಈ ಘಟನೆಯನ್ನು ಪರಿಶೀಲಿಸಿ ಎಂದು ಡಿವಿಷನಲ್ ರೈಲ್ವೆ ಮ್ಯಾನೇಜರ್​ಗೆ ಹೇಳಿದೆ. ಇದಕ್ಕೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರೈಲ್ವೆ ವಿಭಾಗ ಉತ್ತರ ಕೊಟ್ಟಿದ್ದು, ‘‘ವೀಡಿಯೊ ಕ್ಲಿಪ್‌ಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಉದ್ಯೋಗಿಯಿಂದ ವಿವರಣೆಯನ್ನು ಕೇಳಲಾಗಿದೆ. ಈ ಘಟನೆ 3-4 ತಿಂಗಳ ಹಿಂದೆ ನಡೆದಿದೆ. ಟಿಕೆಟ್ ತಯಾರಿಸಲು ಪ್ರಯಾಣಿಕರಿಂದ ಹಣ ಪಡೆಯುತ್ತಿದ್ದೆ ಮತ್ತು ಟಿಕೆಟ್ ಮಾಡಿದ್ದೇನೆ ಎಂದು ಉದ್ಯೋಗಿ ಹೇಳಿದ್ದರು. ಸಂಬಂಧಪಟ್ಟ ಉದ್ಯೋಗಿಯನ್ನು ವಿವರವಾದ ತನಿಖೆಗಾಗಿ ಅಮಾನತುಗೊಳಿಸಲಾಗಿದೆ’’ ಎಂದು ಅಬರು ಹೇಳಿದ್ದಾರೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ‘Rail TT Farmer Take Money Suspended’ ಎಂಬ ಕೀವರ್ಡ್ ಬಳಸಿ ಹುಡುಕಿದ್ದೇವೆ. ಆಗ ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ Patrika.com ಜುಲೈ 25, 2019 ರಂದು "ಚಲಿಸುವ ರೈಲಿನಲ್ಲಿ ವೃದ್ಧನಿಂದ ಹಣ ಕಸಿದುಕೊಂಡಿದ್ದಕ್ಕಾಗಿ ಟಿಟಿಇ ಅಮಾನತುಗೊಂಡಿದ್ದಾರೆ, ವೀಡಿಯೊ ವೈರಲ್ ಆಗಿದೆ" ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ವಿನಯ್ ಸಿಂಗ್ ಎಂಬ ಟಿಟಿಇ ವೃದ್ಧನಿಂದ ಬಲವಂತವಾಗಿ ಹಣವನ್ನು ಕಸಿದುಕೊಂಡಿದ್ದಾರೆ. ರೈಲ್ವೆ ಸಚಿವಾಲಯದ ಟ್ವಿಟರ್ ಹ್ಯಾಂಡಲ್‌ಗೆ ಟ್ಯಾಗ್ ಮಾಡಿ ಜನರು ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಇದಾದ ನಂತರ ಈ ವೀಡಿಯೊ ಸಾಕಷ್ಟು ಟ್ರೋಲ್ ಆಗುತ್ತಿದೆ. ಆರೋಪಿ ಟಿಟಿಇ ವಿನಯ್ ಸಿಂಗ್ ಅವರು ಮೊಘಲ್‌ಸರಾಯ್ ರೈಲ್ವೆ ವಿಭಾಗದ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೀಡಿಯೊ ವೈರಲ್ ಆದ ನಂತರ, ಮೊಘಲ್‌ಸರಾಯ್ ರೈಲ್ವೆ ವ್ಯವಸ್ಥಾಪಕ ಪಂಕಜ್ ಸಕ್ಸೇನಾ ಅವರು ಆರೋಪಿ ಟಿಟಿಇಯನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ, ಈ ವಿಷಯದ ತನಿಖೆಗಾಗಿ ಒಂದು ತಂಡವನ್ನು ರಚಿಸಲಾಗಿದೆ. ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’’ ಎಂದು ಬರೆಯಲಾಗಿದೆ.

ಜುಲೈ 25, 2019 ರಂದು ಅಮರ್ ಉಜಾಲಾ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿದ್ದು, ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಪೂರ್ವ ಮಧ್ಯ ರೈಲ್ವೆ ಮೊಘಲ್‌ಸರಾಯ್ ವಿಭಾಗದಲ್ಲಿ ಟಿಟಿಇ ರೈಲಿನಲ್ಲಿ ವೃದ್ಧನಿಂದ ಹಣವನ್ನು ಕಸಿದುಕೊಂಡರು, ವೀಡಿಯೊ ವೈರಲ್ ಆದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ’’ ಎಂದು ಬರೆದುಕೊಂಡಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದ ವೃದ್ಧ ಪ್ರಯಾಣಿಕರಿಂದ ಟಿಟಿಇ ಬಲವಂತವಾಗಿ ಹಣ ಪಡೆಯುತ್ತಿದ್ದಾರೆ ಎಂದು ತೋರಿಸುವ ವೈರಲ್ ವೀಡಿಯೊ ನಕಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Pro-Palestine march in Kerala? No, video shows protest against toll booth

Fact Check: ഓണം ബംപറടിച്ച സ്ത്രീയുടെ ചിത്രം? സത്യമറിയാം

Fact Check: யோகி ஆதித்யநாத்தை ஆதரித்து தீப்பந்தத்துடன் பேரணி நடத்தினரா பொதுமக்கள்? உண்மை என்ன

Fact Check: Christian church vandalised in India? No, video is from Pakistan

Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್