Top Stories

Fact Check: ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಹಿಂದೂ ಬಾಲಕಿ ಕುತ್ತಿಗೆಗೆ ಚಾಕುವಿನಿಂದ ಇರಿಯಲು ಹೋಗಿದ್ದು ಮುಸ್ಲಿಂ ಯುವಕನೇ?

ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಹಿಂದೂ ಬಾಲಕಿ ಕುತ್ತಿಗೆಗೆ ಚಾಕುವಿನಿಂದ ಇರಿಯಲು ಹೋಗಿದ್ದು ಮುಸ್ಲಿಂ ಯುವಕ ಅಲ್ಲ, ಆತನ ಹೆಸರು ಆರ್ಯನ್ ವಾಘ್ಮಲೆ ಎಂದಾಗಿದ್ದು ಆತ ಹಿಂದೂ ಆಗಿದ್ದಾನೆ.

Vinay Bhat

(ಈ ಸತ್ಯ ಪರಿಶೀಲನೆಯು ಹಿಂಸಾಚಾರದ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ಕೃತ್ಯದ ಫೋಟೋ ಅಥವಾ ವೀಡಿಯೊವನ್ನು ಇಲ್ಲಿ ಸೇರಿಸಿಲ್ಲ. ಇದು ಓದುಗರ ವಿವೇಚನೆಗೆ ಬಿಡಲಾಗಿದೆ.)

 ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಒರ್ವ ಯುವಕ ಬಾಲಕಿಯನ್ನು ಹಿಡಿದುಕೊಂಡು ಆಕೆಗೆ ಚಾಕು ತೋರಿಸಿ ಬೆದರಿಸುತ್ತಿರುವುದನ್ನು ಕಾಣಬಹುದು. ಆಗ ಅಲ್ಲಿದ್ದ ಗುಂಪಿನಲ್ಲಿದ್ದ ಯುವಕನೊಬ್ಬ ಹಿಂದಿನಿಂದ ಬಂದು ಆತನನ್ನು ಹಿಡಿಯುತ್ತಾನೆ, ನಂತರ ಚಾಕು ಹಿಡಿದುಕೊಂಡಿದ್ದ ಯುವಕನನ್ನು ಜನಸಮೂಹ ಥಳಿಸುತ್ತದೆ. ಸಾಮಾಜಿಕ ಜಾಲತಾಣ ಬಳಕೆದಾರರು ಈ ವೀಡಿಯೊವನ್ನು ಕೋಮು ಕೋನದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮಹಾರಾಷ್ಟ್ರ ಸತಾರದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಗೆ ಬಹಳ ದಿನದಿಂದ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಮುಸ್ಲಿಂ ವ್ಯಕ್ತಿ, ಪ್ರೀತಿಗೆ ಒಪ್ಪದಿದ್ದಾಗ ಬಾಲಕಿ ಕುತ್ತಿಗೆಗೆ ಚಾಕುವಿನಿಂದ ಇರಿಯಲು ಹೋದ. ಆತನನ್ನು ಹಿಂದಿನಿಂದ ಹಿಡಿದುಕೊಂಡು ಸರಿಯಾಗಿ ಬಾರಿಸಿ ಪೊಲೀಸ್​ಗೆ ಒಪ್ಪಿಸಿದ್ದಾರೆ ಹಿಂದೂ ಸಹೋದರರ ಒಗ್ಗಟ್ಟಿಗೆ ಧನ್ಯವಾದಗಳು’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಚಾಕು ಹಿಡಿದುಕೊಂಡಿರುವ ಯುವಕ ಮುಸ್ಲಿಂ ಅಲ್ಲ, ಆತನ ಹೆಸರು ಆರ್ಯನ್ ವಾಘ್ಮಲೆ ಮತ್ತು ಆತ ಹಿಂದೂ ಆಗಿದ್ದಾನೆ.

ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಮಯದಲ್ಲಿ, ಜುಲೈ 22 ರಂದು ಆಜ್ ತಕ್ ಪ್ರಕಟಿಸಿದ ವರದಿಯನ್ನು ನಾವು ಕಂಡುಕೊಂಡೆವು. ಅದರಲ್ಲಿ ವೈರಲ್ ವೀಡಿಯೊ ಕೂಡ ಇದೆ. ಈ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ಹೇಳುತ್ತದೆ, ಅಲ್ಲಿ ಒಬ್ಬ ಹುಚ್ಚ ಪ್ರೇಮಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಹುಡುಗಿಯ ಕುತ್ತಿಗೆಗೆ ಚಾಕು ಇಟ್ಟಿದ್ದಾನೆ. ಈ ಘಟನೆ ಸತಾರಾ ಜಿಲ್ಲೆಯ ಬಸಪ್ಪ ಪೇಟ್ ಪ್ರದೇಶದದ್ದಾಗಿದೆ. ವರದಿಯ ಪ್ರಕಾರ, ಯುವಕನ ಹೆಸರು ಆರ್ಯನ್ ವಾಘ್ಮಲೆ. ಈ ಪ್ರಕರಣದಲ್ಲಿ, ಪೋಕ್ಸೊ ಸೇರಿದಂತೆ ಹಲವು ಇತರ ವಿಭಾಗಗಳ ಅಡಿಯಲ್ಲಿ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಾಗೆಯೆ ಜುಲೈ 22 ರಂದು ತರುಣ್ ಭಾರತ್ ವೆಬ್‌ಸೈಟ್‌ನಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟವಾದ ಸುದ್ದಿ ನಮಗೆ ಕಂಡುಬಂತು. ಈ ಸುದ್ದಿಯು ವೈರಲ್ ವೀಡಿಯೊದ ದೃಶ್ಯಗಳನ್ನು ಒಳಗೊಂಡಿದೆ. ಈ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯದ್ದಾಗಿದ್ದು, ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದ ಯುವಕನ ಹೆಸರು ಆರ್ಯನ್ ವಾಘ್ಮಲೆ. ಈತ 18 ವರ್ಷ ವಯಸ್ಸಿನವನಾಗಿದ್ದು, ಪ್ರಸ್ತುತ 12 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ ಎಂದು ವರದಿ ಹೇಳುತ್ತದೆ.

ABP ನ್ಯೂಸ್ ಮತ್ತು ಹಿಂದೂಸ್ತಾನ್ ಟೈಮ್ಸ್ ಕೂಡ ಆರೋಪಿ ಯುವಕನ ಹೆಸರನ್ನು ಆರ್ಯನ್ ವಾಘ್ಮಲೆ ಎಂದು ಬರೆದಿದೆ. ಈ ಘಟನೆ ಜುಲೈ 21 ರಂದು ಮಹಾರಾಷ್ಟ್ರದ ಸತಾರಾ ನಗರದ ಕರಂಜೆ ಬಸಪ್ಪ ಪೇಟ್ ಪ್ರದೇಶದಲ್ಲಿ ನಡೆದಿದ್ದು, ಆರೋಪಿ ಆರ್ಯನ್ ವಾಘ್ಮಲೆ ಬಲಿಪಶುವಿನ ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿ ಬೆದರಿಕೆ ಹಾಕಲು ಪ್ರಾರಂಭಿಸಿದನು. ಈ ಘಟನೆ ಏಕಪಕ್ಷೀಯ ಪ್ರೇಮದಿಂದಾಗಿ ಸಂಭವಿಸಿದೆ. ಈ ಮಧ್ಯೆ, ಉಮೇಶ್ ಅಡಗಲೆ ಎಂಬ ಯುವಕ ಧೈರ್ಯ ತೋರಿಸಿ ಆರ್ಯನ್‌ನನ್ನು ಹಿಂದಿನಿಂದ ಹಿಡಿದನು, ನಂತರ ಗುಂಪು ಆರೋಪಿಯನ್ನು ಥಳಿಸಿತು ಎಂಬ ಮಾಹಿತಿ ಇದರಲ್ಲಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಹಿಂದೂ ಬಾಲಕಿ ಕುತ್ತಿಗೆಗೆ ಚಾಕುವಿನಿಂದ ಇರಿಯಲು ಹೋಗಿದ್ದು ಮುಸ್ಲಿಂ ಯುವಕ ಅಲ್ಲ, ಆತನ ಹೆಸರು ಆರ್ಯನ್ ವಾಘ್ಮಲೆ ಎಂದಾಗಿದ್ದು ಆತ ಹಿಂದೂ ಆಗಿದ್ದಾನೆ.

Fact Check: Hindu temple attacked in Bangladesh? No, claim is false

Fact Check: തദ്ദേശ തിരഞ്ഞെടുപ്പില്‍ ഇസ്‍ലാമിക മുദ്രാവാക്യവുമായി യുഡിഎഫ് പിന്തുണയോടെ വെല്‍ഫെയര്‍ പാര്‍ട്ടി സ്ഥാനാര്‍ത്ഥി? പോസ്റ്ററിന്റെ വാസ്തവം

Fact Check: ராஜ்நாத் சிங் காலில் விழுந்த திரௌபதி முர்மு? உண்மை என்ன

Fact Check: ಬಿರಿಯಾನಿಗೆ ಕೊಳಚೆ ನೀರು ಬೆರೆಸಿದ ಮುಸ್ಲಿಂ ವ್ಯಕ್ತಿ?, ವೈರಲ್ ವೀಡಿಯೊದ ಸತ್ಯಾಂಶ ಇಲ್ಲಿದೆ

Fact Check: బంగ్లాదేశ్‌లో హిజాబ్ ధరించనందుకు క్రైస్తవ గిరిజన మహిళపై దాడి? లేదు, నిజం ఇక్కడ తెలుసుకోండి