Top Stories

Fact Check: ಉತ್ತರ ಪ್ರದೇಶದಲ್ಲಿ ವಕ್ಫ್‌ನ ಅಕ್ರಮ ಆಸ್ತಿಗಳ ಮೇಲಿನ ವಿಚಾರಣೆ ಆರಂಭ?, ಸತ್ಯ ಇಲ್ಲಿ ತಿಳಿಯಿರಿ

ಉತ್ತರ ಪ್ರದೇಶದಲ್ಲಿ ವಕ್ಫ್ನ ಅಕ್ರಮ ಆಸ್ತಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

Vinay Bhat

ಇತ್ತೀಚೆಗಷ್ಟೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಭಾರತದ ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದವು. ಸುಮಾರು 12 ಗಂಟೆಗಳ ಚರ್ಚೆಯ ನಂತರ ಲೋಕಸಭೆಯು ಏಪ್ರಿಲ್ 02, 2025 ರಂದು ಮಸೂದೆಯನ್ನು ಅಂಗೀಕರಿಸಿತು. ಆದರೆ, ಅನೇಕ ಮುಸ್ಲಿಂ ಸಂಘಟನೆಗಳು ಇದನ್ನು ಒಪ್ಪದೆ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಇದರ ಮಧ್ಯೆ ಉತ್ತರ ಪ್ರದೇಶದಲ್ಲಿ ವಕ್ಫ್​ನ ಅಕ್ರಮ ಆಸ್ತಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ, ಕೆಲ ಅಧಿಕಾರಿಗಳು ಪೊಲೀಸರೊಂದಿಗೆ ಕ್ಯಾಂಪಸ್‌ಗೆ ಪ್ರವೇಶಿಸುವುದನ್ನು ಕಾಣಬಹುದು. ಒಳಗೆ ಹೋದಾಗ ಒಬ್ಬ ಅಧಿಕಾರಿ ಅಲ್ಲಿ ನಿಂತಿದ್ದ ವೃದ್ಧ ಮುಸ್ಲಿಮರಿಗೆ ಮದರಸಾವನ್ನು ಸೀಲ್ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಆಗ ಆ ಮುಸ್ಲಿಂ ವ್ಯಕ್ತಿ ಒಳಗಡೆಯಿಂದ ಯಾವುದೋ ದಾಖಲೆಯನ್ನು ಅಧಿಕಾರಿಗಳಿಗೆ ತೋರಿಸಲು ಮುಂದಾಗುತ್ತಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಏಪ್ರಿಲ್ 7, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಇಷ್ಟು ಬೇಗ ಕಾರ್ಯಕ್ಷಮತೆಯನ್ನು ಕೈಗೊಳ್ಳುವುದರಲ್ಲಿ ಯೋಗಿ ಸರ್ಕಾರ ಎತ್ತಿದ ಕೈ ಉತ್ತರ ಪ್ರದೇಶದ ವಕ್ಫ್‌ನ ಅಕ್ರಮ ಮತ್ತು ದಾಖಲೆರಹಿತ ಆಸ್ತಿಗಳ ಮೇಲಿನ ವಿಚಾರಣೆ ಆರಂಭವಾಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ವಕ್ಫ್ ತಿದ್ದುಪಡಿ ಮಸೂದೆಗಿಂತ ಹಿಂದಿನದ್ದಾಗಿದ್ದು, ಉತ್ತರಾಖಂಡದಲ್ಲಿ ನಡೆದ ಘಟನೆ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಸಂದರ್ಭ ನಾವು ಪೊಲೀಸ್ ಅಧಿಕಾರಿಯ ಭುಜದ ಮೇಲೆ ಉತ್ತರಾಖಂಡ ಪೊಲೀಸ್ ಬ್ಯಾಡ್ಜ್ ಇರುವುದನ್ನು ನಾವು ಗಮನಿಸಿದ್ದೇವೆ.

ಬಳಿಕ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಆಗ ರೂರ್ಕಿ ಹರಿದ್ವಾರ ಸಮಾಚಾರ್ ಎಂಬ ಫೇಸ್‌ಬುಕ್ ಪುಟವು ಮಾರ್ಚ್ 22, 2025 ರಂದು ಇದೇ ವೈರಲ್ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದು ಸಿಕ್ಕಿತು. ಈ ವೀಡಿಯೊಕ್ಕೆ ‘‘ಭಗವಾನ್‌ಪುರ ತಹಸಿಲ್ ಆಡಳಿತವು ಅಕ್ರಮವಾಗಿ ಕಾರ್ಯನಿರ್ವಹಿಸುವ ಮದರಸಾಗಳ ಬಗ್ಗೆ ತನಿಖೆ ನಡೆಸಿತು’’ ಎಂದು ಶೀರ್ಷಿಕೆ ನೀಡಲಾಗಿದೆ. ಇದು ವೈರಲ್ ವೀಡಿಯೊ ವಕ್ಫ್ ತಿದ್ದುಪಡಿ ಮಸೂದೆಯ ಅಂಗೀಕಾರಕ್ಕೂ ಮುಂಚೆಯೇ ಇತ್ತು ಎಂಬುದನ್ನು ದೃಢಪಡಿಸುತ್ತದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಯೂಟ್ಯೂಬ್​ನಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ ಹುಡುಕಿದ್ದೇವೆ. ಆಗ ಮಾರ್ಚ್ 26, 2025 ರಂದು ಡಿಡಿ ನ್ಯೂಸ್ ಉತ್ತರಾಖಂಡ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ "ಹರಿದ್ವಾರದಲ್ಲಿ ಅಕ್ರಮ ಮದರಸಾಗಳ ವಿರುದ್ಧ ಆಡಳಿತದ ಕ್ರಮ ಮುಂದುವರೆದಿದೆ" ಎಂಬ ಶೀರ್ಷಿಕೆಯ ಸುದ್ದಿ ವರದಿಯನ್ನು ಕಂಡುಕೊಂಡಿದ್ದೇವೆ. ವೀಡಿಯೊದಲ್ಲಿನ 1:23 ಸಮಯದ ಸ್ಟ್ಯಾಂಪ್‌ನಲ್ಲಿ, ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಅಧಿಕಾರಿಗಳನ್ನು ಕಾಣಬಹುದು.

ಇದೇವೇಳೆ ಮಾರ್ಚ್ 24, 2025 ರಂದು ನ್ಯೂಸ್ ನೇಷನ್ ಯೂಟ್ಯೂಬ್ ಚಾನೆಲ್​ನಲ್ಲಿ ಕೂಡ ಈ ಕುರಿತು ವೀಡಿಯೋ ವರದಿ ಮಾಡಲಾಗಿದ್ದು,  ಉತ್ತರಾಖಂಡದ ಆಡಳಿತವು ಕಠಿಣ ನಿಲುವನ್ನು ತೆಗೆದುಕೊಂಡು ಹರಿದ್ವಾರ ಮತ್ತು ಹತ್ತಿರದ ಭಗವಾನ್‌ಪುರ ಮತ್ತು ಲಕ್ಸರ್ ಪ್ರದೇಶಗಳಲ್ಲಿ ಹಲವಾರು ಮದರಸಾಗಳನ್ನು ಸೀಲ್ ಮಾಡಿದೆ ಎಂದು ಹೇಳಲಾಗಿದೆ. ಸುದ್ದಿಯ ಪ್ರಕಾರ, ಆಡಳಿತವು ಆಗ 110 ಕ್ಕೂ ಹೆಚ್ಚು ಮದರಸಾಗಳನ್ನು ಕಾನೂನುಬಾಹಿರ ಎಂದು ಕರೆದು ನಿಷೇಧಿಸಿತ್ತು. ಈ ವೀಡಿಯೊದಲ್ಲಿನ 1:24 ಸಮಯದ ಸ್ಟ್ಯಾಂಪ್‌ನಲ್ಲಿ, ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಅಧಿಕಾರಿಗಳನ್ನು ಕಾಣಬಹುದು.

ಉತ್ತರಾಖಂಡ ಆಡಳಿತವು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿಸದ ಮದರಸಾಗಳನ್ನು ಮುಚ್ಚುವ ಅಭಿಯಾನವನ್ನು ಪ್ರಾರಂಭಿಸಿದೆ. ಮುಸ್ಲಿಂ ಸಂಘಟನೆಗಳು ಈ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ ಎಂಬ ಹಲವಾರು ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಇದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ಆಗುತ್ತಿರುವ ವೀಡಿಯೊಗೂ ವಕ್ಫ್ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ, ಉತ್ತರಾಖಂಡದಲ್ಲಿ ನೋಂದಾಯಿಸದ ಮದರಸಾಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿರುವ ವೀಡಿಯೊ ಇದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Pro-Palestine march in Kerala? No, video shows protest against toll booth

Fact Check: ഓണം ബംപറടിച്ച സ്ത്രീയുടെ ചിത്രം? സത്യമറിയാം

Fact Check: கரூர் கூட்ட நெரிசலில் பாதிக்கப்பட்டவர்களை பனையூருக்கு அழைத்தாரா விஜய்?

Fact Check: Christian church vandalised in India? No, video is from Pakistan

Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್