Fact Check: ಬಾಂಗ್ಲಾದೇಶದಲ್ಲಿ ಹಿಂದೂ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಎಂದು ಸುಳ್ಳು ವೀಡಿಯೊ ವೈರಲ್

ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರಕ್ಕೆ ಸಾಕ್ಷಿ ಎಂಬಂತೆ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ಬಾಲಕಿಯ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Fact Check: ಬಾಂಗ್ಲಾದೇಶದಲ್ಲಿ ಹಿಂದೂ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಎಂದು ಸುಳ್ಳು ವೀಡಿಯೊ ವೈರಲ್
Published on
2 min read

ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಬಳಿಕ, ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯವಾದ ಹಿಂದೂಗಳ ವಿರುದ್ಧ ಹಿಂಸಾಚಾರ ತಾರಕಕ್ಕೇರಿದೆ ಎಂಬ ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳು ತುಂಬಿ ಹೋಗಿವೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರಕ್ಕೆ ಸಾಕ್ಷಿ ಎಂಬಂತೆ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ಬಾಲಕಿಯ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ಶಿವಕಾರ್ತಿಕ್ ಹಿರೇಮಟ್ ಎಂಬ ಫೇಸ್​ಬುಕ್ ಖಾತೆಯಿಂದ ಆಗಸ್ಟ್ 7, 2024 ರಂದು ಈ ವೀಡಿಯೊ ಹಂಚಿಕೊಳ್ಳಲಾಗಿದ್ದು, 'ಬಾಂಗ್ಲಾದೇಶ- ಮುಂದೆ ಭಾರತದಲ್ಲಿ ಇಂತಹ ಪರಿಸ್ಥಿತಿ ಬಂದರೂ ಅಚ್ಚರಿ ಪಡುವಂತದ್ದೆನಿಲ್ಲ...' ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಆಕ್ಸಿಂಡೆಲ್ ಭಕ್ಸ್ ಎಂಬ ಎಕ್ಸ್ ಖಾತೆಯಲ್ಲಿ ಕೂಡ ಇದೇ ವೀಡಿಯೊ ಶೇರ್ ಆಗಿದ್ದು, 'ಬಾಂಗ್ಲಾದೇಶದಲ್ಲಿ ಹಿಂದು ಹೆಣ್ಣುಮಕ್ಕಳ ಪರಿಸ್ಥಿತಿ, ಇವಳಲ್ಲಿ ಅವರು ನೋಡಿದ್ದು ಒಂದೇ ಅದು ಕಾಫಿರ್, ನೀವೇಷ್ಟೇ ಲಿಬರಲ್ ಆಗಿರಿ ಅವರ ಜನಸಂಖ್ಯೆ ಮೆಜಾರಿಟಿ ಆದರೆ ಇದೆ ಗತಿ ಆಗೋದು' ಎಂದು ಹೇಳಿದ್ದಾರೆ.

ದಿ ಜೈಪುರ ಡೈಲಾಗ್ಸ್ ಎಂಬ ಎಕ್ಸ್ ಖಾತೆಯು ವೀಡಿಯೊವನ್ನು ಹಂಚಿಕೊಂಡಿದೆ. “ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರು! ಅವರನ್ನು ಅತ್ಯಾಚಾರ ಮಾಡಲಾಗುತ್ತಿದೆ ಮತ್ತು ಕೊಲ್ಲಲಾಗುತ್ತಿದೆ! ಬಾಂಗ್ಲಾದೇಶದಲ್ಲಿ ನಡೆದ ನರಮೇಧವನ್ನು ಹಿಂದೂಗಳು ನೋಡುತ್ತಿದ್ದಾರೆ. ಈ ಫೋಟೋ ಮತ್ತು ವೀಡಿಯೊಗಳು ನಿಮ್ಮನ್ನು ಅಸಹಾಯಕರನ್ನಾಗಿಸುತ್ತವೆ!” ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಬಾಂಗ್ಲಾದೇಶದ ಜಗನ್ನಾಥ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬನ ಸಾಂಕೇತಿಕ ಪ್ರತಿಭಟನೆಯನ್ನು ವೀಡಿಯೊ ತೋರಿಸುತ್ತದೆ ಎಂದು ಬಾಂಗ್ಲಾದೇಶದ ಇಬ್ಬರು ಪತ್ರಕರ್ತರು ನ್ಯೂಸ್‌ಮೀಟರ್‌ಗೆ ಖಚಿತಪಡಿಸಿದ್ದಾರೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಜುಲೈ 26 ರಂದು JnU ಶಾರ್ಟ್ ಸ್ಟೋರೀಸ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ.

''ಈ ವೀಡಿಯೊ ಬೀದಿ ನಾಟಕವಾಗಿದೆ. ಇದರಲ್ಲಿರುವ ಬಾಲಕಿ 2021-22ರ ಶೈಕ್ಷಣಿಕ ವರ್ಷದ ಜಗನ್ನಾಥ್ ವಿಶ್ವವಿದ್ಯಾಲಯದ ಸಾಮಾನ್ಯ ವಿದ್ಯಾರ್ಥಿನಿ. ಕೆಲ ದಿನಗಳ ಹಿಂದೆ ನಡೆದ ಆವಂತಿಕಾ ಆತ್ಮಹತ್ಯೆಯ ಪ್ರತಿಭಟನೆಯಾಗಿ ಪಥ ಸಂಚಲನದ ದೃಶ್ಯ ಈ ವೀಡಿಯೊ ಆಗಿದೆ. ಆದರೆ ಕೆಲವರು ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡು ಛಾತ್ರ ಲೀಗ್‌ನ ನಾಯಕಿ ಎಂದು ಹೇಳುತ್ತಿದ್ದಾರೆ. ಇದು ತಕ್ಷಣವೇ ವೈರಲ್ ಆಗಿದೆ. ಇದನ್ನು ನೋಡಿದ ಹುಡುಗಿ ಆಘಾತಕ್ಕೆ ಒಳಗಾಗುತ್ತಾಳೆ. ಆಕೆ ಆತ್ಮಹತ್ಯೆ ಮಾಡಿಕೊಂಡರೆ ಅವಳ ಜವಾಬ್ದಾರಿಯನ್ನು ಯಾರು ಹೊರುತ್ತಾರೆ?. ಸುಳ್ಳು ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ,'' ಎಂದು ಬರೆಯಲಾಗಿದೆ.

ಇದರಲ್ಲಿರುವ ಮಾಹಿತಿಯನ್ನು ಪಡೆದು ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆಗ ಮಾರ್ಚ್ 17 ರಂದು ಬೆಂಗಾಲಿ ಪತ್ರಿಕೆ ದಿ ಡೈಲಿ ಇತ್ತೆಫಾಕ್ ಪ್ರಕಟಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ.

'ಜಗನ್ನಾಥ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪಂಜಿನ ಮೆರವಣಿಗೆ ನಡೆಸಿದ್ದು, ಮೇಣದಬತ್ತಿಗಳನ್ನು ಬೆಳಗಿಸಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ವಿದ್ಯಾರ್ಥಿ ಫೈರುಜ್ ಸದಾಫ್ ಅಬಂತಿಕಾ ಅವರ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಕ್ಯಾಂಪಸ್‌ನಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸಿದರು' ಎಂದು ವರದಿ ಹೇಳಿದೆ.


ಹೆಚ್ಚುವರಿಯಾಗಿ ಬಾಂಗ್ಲಾದೇಶದ ದೂರದರ್ಶನ ಚಾನೆಲ್, ಚಾನೆಲ್ 24 ನ್ಯೂಸ್‌ನಿಂದ ಮಾರ್ಚ್ 18 ರಂದು ಪೋಸ್ಟ್ ಮಾಡಲಾದ ಅಬಂತಿಕಾಗೆ ನ್ಯಾಯವನ್ನು ಕೋರುವ ವಿದ್ಯಾರ್ಥಿಯರ ಮೆರವಣಿಗೆಯ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ.

ಹೆಚ್ಚಿನ ದೃಢೀಕರಣಕ್ಕಾಗಿ, ನ್ಯೂಸ್‌ಮೀಟರ್ ಜಗನ್ನಾಥ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮತ್ತು ಚಾನೆಲ್ 24 ನ್ಯೂಸ್‌ನ ವಿಶ್ವವಿದ್ಯಾಲಯದ ವರದಿಗಾರ ಅಬು ಹನೀಫ್ ಅವರ ಬಳಿ ವಿಚಾರಿಸಿದ್ದೇವೆ. ವೈರಲ್ ವೀಡಿಯೊವನ್ನು ಮಾರ್ಚ್ 17 ರಂದು ಚಿತ್ರೀಕರಿಸಲಾಗಿದೆ ಎಂದು ಅವರು ದೃಢಪಡಿಸಿದರು ಮತ್ತು ಅಬಂತಿಕಾ ನ್ಯಾಯಕ್ಕಾಗಿ ನಾಟಕವನ್ನು ಪ್ರದರ್ಶಿಸಲಾಯಿತು. ಈ ವೀಡಿಯೊ ಬಾಂಗ್ಲಾದೇಶದ ಪ್ರಸ್ತುತ ಬಿಕ್ಕಟ್ಟಿಗೆ ಸಂಬಂಧಿಸಿಲ್ಲ ಎಂದು ಹನೀಫ್ ಸ್ಪಷ್ಟಪಡಿಸಿದ್ದಾರೆ.

ಹಾಗೆಯೆ ಜಗನ್ನಾಥ್ ವಿಶ್ವವಿದ್ಯಾಲಯದ Bdnews24 ವರದಿಗಾರ ಅನುಪಮ್ ಮಲ್ಲಿಕ್ ಆದಿತ್ಯ ಅವರು ಹಿಂದೂ ಹುಡುಗಿಯ ಮೇಲಿನ ದೌರ್ಜನ್ಯದ ಹೇಳಿಕೆಯನ್ನು ವದಂತಿ ಎಂದು ತಳ್ಳಿಹಾಕಿದ್ದಾರೆ. ವೀಡಿಯೊದಲ್ಲಿರುವ ಹುಡುಗಿ ವಿಶ್ವವಿದ್ಯಾನಿಲಯದ ಸಂಗೀತ ವಿಭಾಗದ ವಿದ್ಯಾರ್ಥಿನಿ ಎಂದು ಅವರು ಖಚಿತಪಡಿಸಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ತಾನು ಎದುರಿಸಿದ ಕಿರುಕುಳದಿಂದ ಮಾರ್ಚ್ 15 ರಂದು ಆತ್ಮಹತ್ಯೆ ಮಾಡಿಕೊಂಡ ಸ್ನಾತಕೋತ್ತರ ಕಾನೂನು ವಿದ್ಯಾರ್ಥಿನಿ ಅವಂತಿಕಾ ಅವರ ನ್ಯಾಯಕ್ಕೆ ಒತ್ತಾಯಿಸಿ ಬಾಲಕಿ ನಡೆಸಿದ ಸಾಂಕೇತಿಕ ಪ್ರತಿಭಟನೆಯ ವೀಡಿಯೊ ಇದಾಗಿದೆ ಎಂದು ಆದಿತ್ಯ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಹುಡುಗಿಯ ಮೇಲಿನ ದೌರ್ಜನ್ಯ ಎಂದು ಹೇಳಲಾಗುತ್ತಿರುವ ಈ ವೀಡಿಯೊ ಸುಳ್ಳಾಗಿದೆ ಎಂದು ನಾವು ಖಚಿತಪಡಿಸುತ್ತೇವೆ.

Related Stories

No stories found.
logo
South Check
southcheck.in