

ವಾದ
ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಶಾಲೆಗಳಲ್ಲಿ ಕುರಾನ್ ಪಠಣ ಕಡ್ಡಾಯಗೊಳಿಸಿದೆ.
ವಾಸ್ತವ
ಕರ್ನಾಟಕ ಸರ್ಕಾರ ಕುರಾನ್ ಪಠಣ ಕಡ್ಡಾಯಗೊಳಿಸಿ ಯಾವುದೇ ಆದೇಶ ಹೊರಡಿಸಿಲ್ಲ. ವೈರಲ್ ವಿಡಿಯೋ ನಕಲಿ.
ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ ಕುರಾನ್ ಪಠಣ ಮಾಡುವುದನ್ನು ಕಡ್ಡಾಯಗೊಳಿಸಿದೆ ಎಂದು ಪ್ರತಿಪಾದಿಸುವ ವಿಡಿಯೋವೊಂದು ವೈರಲ್ ಆಗಿದೆ.
ಎಕ್ಸ್ ( ಈ ಹಿಂದೆ ಟ್ವಿಟರ್), ಫೇಸ್‌ಬುಕ್‌ಗಳಲ್ಲಿ ಪ್ರಕಟವಾಗಿರುವ 45 ಸೆಕೆಂಡ್‌ಗಳ ವಿಡಿಯೋ ಜೊತೆಗೆ "ಹಿಂದುಗಳು ಉಚಿತ ಬಸ್ ಟಿಕೆಟ್, 200 ಯುನಿಟ್ ಉಚಿತ ವಿದ್ಯುತ್ ಆಸೆಗಾಗಿ ಬಿಜೆಪಿ ವಿರುದ್ಧ ಮತಹಾಕಿದರು. ಈಗ ಅನುಭವಿಸಿ!!" ಎಂದು ಬರೆಯಲಾಗಿದೆ.
ಫೇಸ್‌ಬುಕ್‌ನಲ್ಲಿ ದಿನೇಶ್ ಸತ್ಯನಾರಾಯಣ್ ರಾಜಭರ್f ಎಂಬುವವರು ಶೇರ್ ಮಾಡಿರುವ ಇನ್ನೊಂದು ವಿಡಿಯೋದಲ್ಲಿ , "ಈಗ ಶಾಲೆಗಳಲ್ಲಿ ಇಸ್ಲಾಮ್ ಶಿಕ್ಷಣ ಅನಿವಾರ್ಯವಾಗಿದೆ. ಕರ್ನಾಟಕದ ಎಲ್ಲ ಶಾಲೆಗಳಲ್ಲಿ ಹಿಂದು ವಿದ್ಯಾರ್ಥಿಗಳು ಕುರಾನ್ ಓದಬೇಕೆಂದು ಆದೇಶಿಸಲಾಗಿದೆ. ಈ ರೀತಿಯಲ್ಲಿ ಕಾಂಗ್ರೆಸ್ ದೇಶವನ್ನು ನಾಶ ಮಾಡುತ್ತದೆ" ಎಂದು ಹೇಳಿದೆ.
ಟ್ವಿಟರ್‍ನಲ್ಲೂ ಈ ವಿಡಿಯೋ ವ್ಯಾಪಕವಾಗಿ ಶೇರ್ ಆಗಿದೆ.
"ಸೌತ್‌ಚೆಕ್" ವಿಡಿಯೋದ ಸ್ಕ್ರೀನ್ ಶಾಟ್ ಬಳಸಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ವೈರಲ್ ಆಗಿರುವ ವಿಡಿಯೋ ಹೋಲುವ ವಿಡಿಯೋ ಜುಲೈನಲ್ಲಿ ವೈರಲ್ ಆಗಿದ್ದು ತಿಳಿಯಿತು.
ಜುಲೈ ತಿಂಗಳಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಜ್ಞಾನ ಸಾಗರ ಇಂಟರ್‍ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ, ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸಲು ಹಾಗೂ ಬಕ್ರೀದ್ ಮಹತ್ವ ತಿಳಿಸಲು ಕುರಾನ್ ಓದಿಸಿದ್ದರು. ಇದು ವಿವಾದಕ್ಕೂ ಕಾರಣವಾಗಿ ವಿಡಿಯೋ ಸಾರ್ವಜನಿಕವಾಗಿ ಹರಿದಾಡಿತ್ತು.
ಈ ಕುರಿತು ನ್ಯೂಸ್9 ತಾಣ ಪ್ರಕಟಿಸಿದ್ದು, ಇದರಲ್ಲಿ 2.16 ನಿಮಿಷಗಳ ವಿಡಿಯೋ ಇದ್ದು, ಶಾಲೆಯ ಪ್ರಾಂಶುಪಾಲರು ಬಕ್ರೀದ್ ಹಬ್ಬದ ಶುಭ ಹಾರೈಕೆಗಳನ್ನು ಹೇಳಿರುವುದನ್ನು ನೋಡಬಹುದು ಎಂದು ವರದಿ ಹೇಳುತ್ತದೆ. ಸುದ್ದಿಯ ಲಿಂಕ್ ಇಲ್ಲಿದೆ.
ಶಾಲೆಯ ಪ್ರಾಂಶುಪಾಲರಾದ ಸುಜಾ ಫಿಲಿಪ್, "ಮಕ್ಕಳಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ಪರಿಚಯಿಸುವ ಉದ್ದೇಶವಿತ್ತು. ಇನ್ನಾವುದೇ ಉದ್ದೇಶವಿಲ್ಲ. ಇದು ತಪ್ಪೆನ್ನುವುದಾದರೆ, ಮತ್ತೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ಇಲ್ಲಿ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ಇಲ್ಲಿ ಎಲ್ಲ ವಿದ್ಯಾರ್ಥಿಗಳು ಕುರಾನ್ ಓದಿಲ್ಲ. ಮುಸ್ಲಿಮ್ ಮಕ್ಕಳು ಮಾತ್ರ ಓದಿದರು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ. ಇದು ಧರ್ಮ ನಿರಪೇಕ್ಷತೆಯ ಶಾಲೆ" ಎಂದು ಹೇಳಿದ್ದು ವರದಿಯಲ್ಲಿ ಉಲ್ಲೇಖವಾಗಿದೆ.
ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರನ್ನೂ ಸುದ್ದಿಯಲ್ಲಿ ಉಲ್ಲೇಖಿಸಲಾಗಿದ್ದು, " ಎಲ್ಲ ಧರ್ಮಗಳ ಹಬ್ಬದ ಸಂದರ್ಭಗಳನ್ನು ಹೀಗೆ ಆಚರಿಸಲಾಗುತ್ತದೆ. ಹಬ್ಬದ ಹಿನ್ನೆಲೆಯನ್ನು ಪರಿಚಯಿಸುವುದಕ್ಕೆ ಮಕ್ಕಳು ನಾಟಕಗಳನ್ನು ಪ್ರದರ್ಶಿಸುತ್ತಾರೆ'' ಎಂದು ಹೇಳಿದ್ದಾರೆ.
ರಾಜ್ಯದಾದ್ಯಂತ ಎಲ್ಲ ಶಾಲೆಗಳಲ್ಲಿ ಕುರಾನ್ ಪಠಿಸುವ ಸಂಬಂಧ ಶಿಕ್ಷಣ ಇಲಾಖೆಯ ಅಧಿಕೃತ ತಾಣದಲ್ಲಿ ಯಾವುದಾದರು ಹೇಳಿಕೆ, ಅಧಿಸೂಚನೆ ಪ್ರಕಟವಾಗಿರುವ ಬಗ್ಗೆ ಪರಿಶೀಲಿಸಿದಾಗ, ನಮಗೆ ಯಾವುದೇ ಆದೇಶಗಳು ಲಭ್ಯವಾಗಲಿಲ್ಲ.
ರಾಜ್ಯದಾದ್ಯಂತ ಎಲ್ಲ ಶಾಲೆಗಳಲ್ಲಿ ಕುರಾನ್ ಪಠಿಸುವ ಸಂಬಂಧ ಶಿಕ್ಷಣ ಇಲಾಖೆಯ ಅಧಿಕೃತ ತಾಣದಲ್ಲಿ ಯಾವುದಾದರು ಹೇಳಿಕೆ, ಅಧಿಸೂಚನೆ ಪ್ರಕಟವಾಗಿರುವ ಬಗ್ಗೆ ಪರಿಶೀಲಿಸಿದಾಗ, ನಮಗೆ ಯಾವುದೇ ಆದೇಶಗಳು ಲಭ್ಯವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಗಮನಿಸಿದರೆ, ವೈರಲ್ ಆಗಿರುವ ವಿಡಿಯೋ ಕೇವಲ ಒಂದು ಖಾಸಗಿ ಶಾಲೆಗೆ ಸಂಬಂಧಿಸಿದ್ದಾಗಿದ್ದು, ರಾಜ್ಯ ವ್ಯಾಪಿ ನಡೆದಿರುವ ಯಾವುದೇ ವರದಿ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯಗೊಳಿಸಿರುವ ಯಾವುದೇ ಆದೇಶಗಳೂ ಇಲ್ಲ. ಹಾಗಾಗಿ ಈ ವೈರಲ್ ವಿಡಿಯೋ ಪ್ರತಿಪಾದನೆಯು ಸುಳ್ಳು.