Fact Check: ಬಾಲಿವುಡ್​ನ ತೌಬಾ ತೌಬಾ ಹಾಡಿಗೆ ನೃತ್ಯ ಮಾಡುತ್ತಿರುವ ಈ ವ್ಯಕ್ತಿ ಮುತ್ತಯ್ಯ ಮುರಳೀಧರನ್ ಅಲ್ಲ

Fact Check: ಬಾಲಿವುಡ್​ನ ತೌಬಾ ತೌಬಾ ಹಾಡಿಗೆ ನೃತ್ಯ ಮಾಡುತ್ತಿರುವ ಈ ವ್ಯಕ್ತಿ ಮುತ್ತಯ್ಯ ಮುರಳೀಧರನ್ ಅಲ್ಲ

ಬಾಲಿವುಡ್​ನಲ್ಲಿ ಭಾರೀ ಸದ್ದು ಮಾಡಿದ "ಬ್ಯಾಡ್ ನ್ಯೂಸ್" ಸಿನಿಮಾದ 'ತೌಬಾ ತೌಬಾ' ಹಾಡಿಗೆ ವ್ಯಕ್ತಿಯೊಬ್ಬರು ನೃತ್ಯ ಮಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ಇಲ್ಲಿ ಡ್ಯಾನ್ಸ್ ಮಾಡಿದ ವ್ಯಕ್ತಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಎಂದು ಹೇಳಿಕೊಳ್ಳುತ್ತಿದ್ದಾರೆ.
Published on

ಶ್ರೀಲಂಕಾದ ಲೆಜೆಂಡರಿ ಬೌಲರ್ ಮುತ್ತಯ್ಯ ಮುರಳೀಧರನ್ ಸಾರ್ವಕಾಲಿಕ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಇದೀಗ ಬಾಲಿವುಡ್​ನಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡಿದ "ಬ್ಯಾಡ್ ನ್ಯೂಸ್" ಸಿನಿಮಾದ 'ತೌಬಾ ತೌಬಾ' ಹಾಡಿಗೆ ವ್ಯಕ್ತಿಯೊಬ್ಬರು ನೃತ್ಯ ಮಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ಇಲ್ಲಿ ಡ್ಯಾನ್ಸ್ ಮಾಡಿದ ವ್ಯಕ್ತಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಎಂದು ಹೇಳಿಕೊಳ್ಳುತ್ತಿದ್ದಾರೆ.


ಕರಿಯಪ್ಪ ಸ್ನೇಹಜೀವಿ ಎಂಬ ಫೇಸ್​ಬುಕ್ ಖಾತೆಯಿಂದ ಆಗಸ್ಟ್ 2, 2024 ರಂದು ಈ ವೀಡಿಯೊ ಹಂಚಿಕೊಳ್ಳಲಾಗಿದ್ದು 'ಇವರು..... ಅವರೇ...... ಮುತ್ತಯ್ಯ ಮುರಳೀಧರನ್...' ಎಂದು ಬರೆದುಕೊಂಡಿದ್ದಾರೆ.

ಫೇಸ್​ಬುಕ್ ಖಾತೆಯಲ್ಲಿ ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್ ಶಾಟ್.
ಫೇಸ್​ಬುಕ್ ಖಾತೆಯಲ್ಲಿ ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್ ಶಾಟ್.

ಹಾಗೆಯೆ ಎಕ್ಸ್​ನಲ್ಲಿ ಕೂಡ ಅನೇಕರು ಈ ವೀಡಿಯೊವನ್ನು ಮುತ್ತಯ್ಯ ಮುರಳೀಧರನ್ ಎಂದು ಹಂಚಿಕೊಂಡಿದ್ದು, 'ಇದು ಮುರಳೀಧರನ್ ಅವರ ನಿವೃತ್ತಿಯ ನಂತರದ ಜೀವನ, ಮುತ್ತಯ್ಯ ಮುರಳೀಧರನ್ ಅವರ ಹೊಸ ಅವತಾರ, ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ತಮ್ಮ ನೃತ್ಯ ಕೌಶಲ್ಯವನ್ನು ತೋರಿಸುತ್ತಿರುವುದು,' ಎಂದು ಬರೆದುಕೊಂಡಿದ್ದಾರೆ. ಈ ಕುರಿತ ಲಿಂಕ್ ಅನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಅಷ್ಟಕ್ಕೂ ಈ ವೈರಲ್ ವೀಡಿಯೊದಲ್ಲಿ ಇರುವುದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅಲ್ಲ. ಇವರು ಮುಂಬೈನ ಪ್ರಸಿದ್ಧ ನೃತ್ಯ ಸಂಯೋಜಕ ಕಿರಣ್ ಜೋಪಾಲ್.


ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಜುಲೈ 22, 2022 ರಂದು ಕಿರಣ್ ಜೆ ಎಂಬ ನೃತ್ಯ ಸಂಯೋಜಕರ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ''ಈ ವೈಬ್‌ನಿಂದ ಹೊರಬರಲು ಸಾಧ್ಯವಿಲ್ಲ, ತುಂಬಾ ಧನ್ಯವಾದಗಳು ಬೆಂಗಳೂರು @dance.inn.bangalore ಅದ್ಭುತ ಸ್ಮರಣೀಯ ದಿನ @team.kiranj @manasa.jk__ @laharsharma't get overCanj_29'' ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಜುಲೈ 25 ರಂದು ಕಿರಣ್ ಜೆ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಇದೇ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದಕ್ಕೆ ತೌಬಾ ತೌಬಾ ಎಂದು ಕ್ಯಾಪ್ಷನ್ ನೀಡಿದ್ದಾರೆ. ಫೇಸ್​ಬುಕ್ ಖಾತೆಯಲ್ಲಿ ಕೂಡ ಈ ವೀಡಿಯೊ ಹಂಚಿಕೊಂಡಿದ್ದಾರೆ.

ಯಾರು ಈ ಕಿರಣ್ ಜೋಪಾಲ್?:

ಕಿರಣ್ ಜೋಪಾಲ್/ ಕಿರಣ್ ಜೆ ಮುಂಬೈನ ಪ್ರಸಿದ್ಧ ನೃತ್ಯ ಸಂಯೋಜಕ ಎಂದು ನಾವು ಕಂಡುಕೊಂಡಿದ್ದೇವೆ ಮತ್ತು ಸಾಮಾಜಿಕ ಮಾಧ್ಯಮದ ಪ್ರಸಿದ್ಧ ವ್ಯಕ್ತಿ. ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಇವರನ್ನು ನೃತ್ಯದ ಕಲೆ ಉತ್ತುಂಗಕ್ಕೆ ಕರೆದುಕೊಂಡು ಹೋಯಿತು. ಅದ್ಭುತ ನೃತ್ಯಗಳನ್ನು ಮಾಡುವ ಮೂಲಕ ಇನ್‌ಸ್ಟಾಗ್ರಾಮ್, ಯೂಟ್ಯೂಬ್​ನಲ್ಲಿ ಫೇಮಸ್ ಆದರು. ಇವರ ಜೀವನದ ಕುರಿತು 4 ವರ್ಷದ ಹಿಂದೆ TEDx ಟಾಕ್ಸ್ ಎಂಬ ಯೂಟ್ಯೂಬ್ ಖಾತೆಯಲ್ಲಿ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಅವರು ತಮ್ಮ ಜೀವನದ ಪಯಣದ ಬಗ್ಗೆ ಮಾತನಾಡಿದ್ದಾರೆ.

ಈ ಮೂಲಕ ತೌಬಾ ತೌಬಾ ಹಾಡಿಗೆ ಮುತ್ತಯ್ಯ ಮುರಳೀಧರನ್ ನೃತ್ಯ ಮಾಡುತ್ತಿರುವುದು ಎಂದು ಹೇಳಲಾಗುತ್ತಿರುವ ವೀಡಿಯೊ ಸುಳ್ಳಾಗಿದೆ. ಮತ್ತು ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಮುಂಬೈನ ಕಿರಣ್ ಜೋಪಾಲೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in