ಸುಪ್ರೀಂ ಕೋರ್ಟ್‌ ದೇಶಾದ್ಯಂತ ಪಟಾಕಿ ನಿಷೇಧಿಸಿದೆಯೇ?

ವಾಯು ಮತ್ತು ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ದೇಶಾದ್ಯಂತ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ ಎಂಬ ಸುದ್ದಿ ಸುಳ್ಳು
ಸುಪ್ರೀಂ ಕೋರ್ಟ್‌ ದೇಶಾದ್ಯಂತ ಪಟಾಕಿ ನಿಷೇಧಿಸಿದೆಯೇ?
Published on
1 min read

ವಾದ

ಸುಪ್ರೀಂ ದೇಶದಾದ್ಯಂತ ಪಟಾಕಿ ನಿಷೇಧಿಸಿದೆ.

ವಾಸ್ತವ

ಪಟಾಕಿ ತಯಾರಿಕೆ ಮತ್ತು ಮಾರಾಟ ನಿಯಂತ್ರಿಸುವ ಹಿಂದಿನ ಆದೇಶಗಳು ಎಲ್ಲ ರಾಜ್ಯಕ್ಕೂ ಅನ್ವಯ ಎಂದು ತಿಳಿಸಿದೆ.

ದೇಶಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುವ ದೀಪಾವಳಿಯ ಮುಖ್ಯ ಆಕರ್ಷಣೆ ಪಟಾಕಿ. ಆದರೆ ಈ ಬಾರಿ ಪಟಾಕಿ ಸಿಡಿಸದಂತೆ ಎಲ್ಲ ರಾಜ್ಯಗಳನ್ನು ನಿಷೇಧ ಹೇರುವಂತೆ ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ಪ್ರತಿಪಾದಿಸುವ ಟ್ವೀಟ್‌ ವೈರಲ್‌ ಆಗಿದೆ.

ಆಶು ಎಂಬುವವರು, 'ಸುಪ್ರೀಂ ಕೋರ್ಟ್‌ ದೇಶಾದ್ಯಂತ ಪಟಾಕಿ ನಿಷೇಧಿಸಿ ಆದೇಶಿಸಿದೆ. ಪಿರ್ಯಾದುದಾರ ಕೂಡ ಈ ರೀತಿ ಮನವಿ ಮಾಡಿಲ್ಲ. ಇದು ಅನ್ಯಾಯ ಮತ್ತು ವ್ಯಾಪಾರವನ್ನೇ ನಂಬಿ ಜೀವನ ಮಾಡುವ ಸಣ್ಣ ಕೈಗಾರಿಕೆಗಳನ್ನು ಕೊಲ್ಲಲಿದೆ ' ಎಂದು ಟ್ವೀಟ್‌ ಮಾಡಿದ್ದಾರೆ.

ಓಂಕಾರ ಎಂಬುವರ ಟ್ವೀಟ್‌ನಲ್ಲಿ ಸುಪ್ರೀಂ ಕೋರ್ರ್ಟ ದೇಶಾದ್ಯಂತ ಪಟಾಕಿ ನಿಷೇಧಿಸಿದೆ ಎಂದು ಹೇಳುವ ಜೊತೆಗೆ, ಹಂಚಿಕೊಂಡಿರುವ ಪೋಸ್ಟರ್‍‌ನಲ್ಲಿ, 'ಪಟಾಕಿ ನಿಯಂತ್ರಣದ ನಿರ್ದೇಶನಗಳು, ದೆಹಲಿಗೆ ಮಾತ್ರವಲ್ಲ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್‌' ಎಂದಿದೆ.

ಫ್ಯಾಕ್ಟ್‌ ಚೆಕ್‌

ಸುಪ್ರೀಂ ಕೋರ್ಟ್ ದೇಶಾದ್ಯಂತ ಸಂಪೂರ್ಣವಾಗಿ ಪಟಾಕಿ ಸುಡುವುದನ್ನು ನಿಷೇಧಿಸಿಲ್ಲ. ಬದಲಿಗೆ ಪಟಾಕಿ ತಯಾರಿಕೆ ಮತ್ತು ಮಾರಾಟದಲ್ಲಿ ನಿಯಂತ್ರಣದ ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಿ, ಹಿಂದಿನ ತೀರ್ಪನ್ನು ಪಾಲಿಸುವಂತೆ ಸೂಚಿಸಿದೆ.

ನವೆಂಬರ್ 7ರಂದು ರಾಜಸ್ಥಾನದ ಉದಯಪುರದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ್ದ ಸುಪ್ರೀಂ ಕೋರ್ಟ್‌, ಈ ನ್ಯಾಯಾಲಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ವಾಯು ಮತ್ತು ಶಬ್ದ ಮಾಲಿನ್ಯ ಕಡಿಮೆ ಮಾಡಲು ವಿವಿಧ ಆದೇಶಗಳನ್ನು ಜಾರಿಗೊಳಿಸಿದೆ. ಆದ್ದರಿಂದ, ಈ ಆದೇಶಗಳು ದೆಹಲಿ ಸೇರಿದಂತೆ ದೇಶದ ಪ್ರತಿಯೊಂದು ರಾಜ್ಯಕ್ಕೂ ಅನ್ವಯಿಸುತ್ತದೆ. ಹೀಗಾಗಿ, ರಾಜಸ್ಥಾನ ರಾಜ್ಯವೂ ಇದನ್ನು ಗಮನಿಸಬೇಕು. ಹಬ್ಬದ ಸಂದರ್ಭಗಳಲ್ಲಿ ಮಾತ್ರವಲ್ಲದೆ ಉಳಿದ ಸಮಯದಲ್ಲೂ ವಾಯು , ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ಪೀಠ ತಿಳಿಸಿತ್ತು.

ಆದರೆ ಇದು ಪಟಾಕಿ ನಿಷೇಧವೆಂದು ವರದಿಯಾಗಿತ್ತು.

ವೈರಲ್ ಆದ ಸುದ್ದಿಯ ಕೀ ವರ್ಡ್‌ಗಳನ್ನು ಆಧರಿಸಿ, ಹುಡುಕಾಟ ನಡೆಸಿದ 'ಸೌತ್‌ ಚೆಕ್‌', ಸುಪ್ರೀಂ ಕೋರ್ಟ್‌ ಮಂಗಳವಾರದ ಆದೇಶದಲ್ಲಿ ಉಲ್ಲೇಖಿಸಿದ 2021ರ ತೀರ್ಪು ಲಭ್ಯವಾಯಿತು. ಇದರಲ್ಲಿ ಬೇರಿಯಂಯುಕ್ತ ಪಟಾಕಿಗಳ ಉತ್ಪಾದನೆ ಮತ್ತು ಮಾರಾಟದ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಿತ್ತು. ಆ ನಿರ್ದೇಶನವನ್ನು ಮಂಗಳವಾರದ ರಾಜಸ್ಥಾನ ಅರ್ಜಿ ವಿಚಾರಣೆಯ ವೇಳೆ ನೆನಪಿಸಿತ್ತು. ಸಂಪೂರ್ಣವಾಗಿ ದೇಶಾದ್ಯಂತ ಪಟಾಕಿ ನಿಷೇಧಿಸಿ ಯಾವುದೇ ತೀರ್ಪು ನೀಡಿಲ್ಲ.

ಈ ಕುರಿತು ಸ್ಕ್ರಾಲ್‌ನಲ್ಲಿ ಅಕ್ಟೋಬರ್ 29, 2021ರಂದು ಪ್ರಕಟವಾದ ವರದಿಯ ಲಿಂಕ್‌ ಇಲ್ಲಿದೆ.

ಈ ಹಿನ್ನೆಲೆಯಲ್ಲಿ ಬೇರಿಯಂಯುಕ್ತ ಪಟಾಕಿ ನಿಷೇಧ ಹಿಂದಿನ ಆದೇಶವನ್ನು ನೆನಪಿಸಿದ್ದ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ತಪ್ಪಾಗಿ ಅರ್ಥೈಸಲಾಗಿದೆ. ಹಾಗಾಗಿ ಈ ಸುದ್ದಿ ಸುಳ್ಳು.

Related Stories

No stories found.
logo
South Check
southcheck.in