ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಹೇಳಲಾಗುತ್ತಿದ್ದರೂ ಹಿಂದೂಗಳಿಗೆ ಅವಮಾನ ಮಾಡಲಾಗುತ್ತಿರುವ ಮತ್ತು ಹಲ್ಲೆ ನಡೆಯುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಅನೇಕ ವೀಡಿಯೊಗಳು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಂತೆ ಇದೀಗ ವೀಡಿಯೊವೊಂದು ಹರಿದಾಡುತ್ತಿದ್ದು, ಇದರಲ್ಲಿ ರಸ್ತೆಯಲ್ಲಿ ಕೆಲ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಬಾಂಗ್ಲಾದೇಶದಲ್ಲಿ ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ಹಿಂದೂ ಮಹಿಳೆಯರನ್ನು ಬೆನ್ನಟ್ಟಿ ಥಳಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ.
ಪದ್ಮನಾಭ ಉಪಾಧ್ಯಾಯ ಎಂಬವರು ಸೆಪ್ಟೆಂಬರ್ 12, 2024 ರಂದು ಈ ವೀಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಬಾಂಗ್ಲಾದೇಶದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ನೋಡಿ. ಹಿಂದೂ ಹೆಣ್ಣು ಮಕ್ಕಳು ಬುರ್ಕಾ ಹಾಕದೆ ರಸ್ತೆಯಲ್ಲಿ ಹೋಗುತ್ತಾ ಇದ್ದಾರೆ ಎಂದು, ಅವರನ್ನು ಸೂ*ಯರು ಎಂದು ನಡು ರಸ್ತೆಯಲ್ಲಿ ಜರಿದು ಒಬ್ಬ ಮತಾಂಧ ಜಿಹಾದಿ ಮುಸ್ಲಿಂ ಯುವಕ ಹೇಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾ ಇದ್ದಾರೆ ನೋಡಿ, ಮನುಷ್ಯತ್ವ ಇಲ್ಲದವರು’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಸೆ. 11, 2024 ರಂದು ಸನಾತನಿ ಹಿಂದೂ ರಾಕೇಶ್ ಎಂಬ ಎಕ್ಸ್ ಖಾತೆಯಿಂದ ಇದೇ ವೀಡಿಯೊ ಅಪ್ಲೋಡ್ ಆಗಿದ್ದು, ‘ಬಾಂಗ್ಲಾದೇಶದಲ್ಲಿ ಬುರ್ಖಾ ಹಾಕಿಲ್ಲ ಎಂಬ ಕಾರಣಕ್ಕೆ ಹಿಂದೂ ಹುಡುಗಿಯರನ್ನು ಬೆನ್ನಟ್ಟಿ ಥಳಿಸಲಾಗುತ್ತಿದೆ. ಈ ಭೂಮಿಯನ್ನು ನರಕವನ್ನಾಗಿ ಮಾಡಲು ಮಾತ್ರ ಅವರನ್ನು ಕಳುಹಿಸಲಾಗಿದೆ. ಭವಿಷ್ಯದಲ್ಲಿ ನಿಮ್ಮ ಮುಂದಿನ ಪೀಳಿಗೆಯನ್ನು ನಾವು ನೋಡುತ್ತಿದ್ದೇವೆ. ಇದು ನಿಮಗೆ ಇನ್ನೂ ಅರ್ಥವಾಗುತ್ತಿಲ್ಲವೇ’ ಎಂದು ಹೇಳಿಕೊಂಡಿದ್ದಾರೆ.
ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ಈ ವೀಡಿಯೊ ಢಾಕಾದಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸುವ ದೃಶ್ಯವಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದೆವು. ಆಗ ಈ ವೀಡಿಯೊದ ಮೇಲೆ ಇಸ್ಲಾಮಿಕ್ ಮೀಡಿಯಾ ಟಿವಿ ತಬಕ್‌ಪುರ್ ಎಂದು ಬರೆದಿರುವುದು ಕಂಡುಬಂತು. ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಿದಾಗ ಫೇಸ್ಬುಕ್ನಲ್ಲಿ ಈ ಪೇಜ್ ಸಿಕ್ಕಿದ್ದು, ಇದೇ ವೈರಲ್ ವೀಡಿಯೊವನ್ನು ಆಗಸ್ಟ್ 30, 2024 ರಂದು ಪೋಸ್ಟ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ಘಟನೆ ಢಾಕಾದ ಶ್ಯಾಮೋಲಿ ಚೌಕದಲ್ಲಿ ನಡೆದಿದೆ ಎಂದು ಬರೆಯಲಾಗಿದೆ.
‘ದಯವಿಟ್ಟು ಕೊನೆಯವರೆಗೂ ವೀಡಿಯೊ ನೋಡಿ ಅದಕ್ಕು ಮೊದಲು ಕಾಮೆಂಟ್ ಮಾಡಬೇಡಿ. ಈ ವೀಡಿಯೊದಲ್ಲಿರುವುದು ಮುಖ್ಯ ಮಾಲೀಕ ಮಹಿಳೆ. ನೀವು ಅವಳನ್ನು ನೋಡಿದರೆ ಕೊಲ್ಲಿ. ಇದು ನಿಮ್ಮ ಧಾರ್ಮಿಕ ಜವಾಬ್ದಾರಿಯಾಗಿದೆ. ಸೇನಾ ಪೊಲೀಸರು ನಮ್ಮ ಬೆಂಬಲಕ್ಕೆ ಇದ್ದಾರೆ. ದಯವಿಟ್ಟು ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿ. ವಿಡಿಯೋವನ್ನು ಆದಷ್ಟು ಶೇರ್ ಮಾಡಿ. ಶ್ಯಾಮೋಲಿ ಚೌಕದಲ್ಲಿ ಇದು ನಡೆದಿದೆ. ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಿ’ ಎಂದು ಬರೆಯಲಾಗಿದೆ.
ಸ್ಪಷ್ಟ ಮಾಹಿತಿ ಸಿಗದ ಕಾರಣ ನಾವು ಈ ಘಟನೆಯ ಕುರಿತು ಹೆಚ್ಚಿನ ವಿವರಣೆಗಾಗಿ ಗೂಗಲ್ನಲ್ಲಿ ‘dhaka men beaten women’ ಎಂದು ಕೀವರ್ಡ್ ಸರ್ಚ್ ಮಾಡಿದೆವು. ಆಗ ಬೆಂಗಾಲಿ ಭಾಷೆಯಲ್ಲಿ ಪ್ರಕಟವಾದ ಕೆಲವು ಲೇಖನ ಕಂಡುಬಂತು. Our News BD ಎಂಬ ವೆಬ್ಸೈಟ್ನಲ್ಲಿ ಇದೇ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸೆ. 2, 2024 ರಂದು ಸುದ್ದಿ ಪ್ರಕಟವಾಗಿದ್ದು ‘ರಾಜಧಾನಿಯಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸಿದ ವಿಡಿಯೋ ವೈರಲ್ ಆಗಿದೆ’ ಎಂದ ಶೀರ್ಷಿಕೆ ನೀಡಲಾಗಿದೆ.
ವರದಿಯಲ್ಲಿ ಏನಿದೆ?: ಡಾಕಾದ ವಿವಿಧ ಪ್ರದೇಶಗಳಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸಿದ ವಿಡಿಯೋ ವೈರಲ್ ಆಗಿದೆ. ಕೆಲವು ಯುವಕರು ವಿವಿಧ ಪ್ರದೇಶಗಳಲ್ಲಿ ಥಳಿಸುತ್ತಿದ್ದಾರೆ ಎಂದು ಸಂತ್ರಸ್ತ ಲೈಂಗಿಕ ಕಾರ್ಯಕರ್ತರು ದೂರಿದ್ದಾರೆ. ಯುವಕನೋರ್ವ ಹಸಿರು ಬಣ್ಣದ ಪೈಪ್‌ನಿಂದ ಮಹಿಳೆಗೆ ತೀವ್ರವಾಗಿ ಥಳಿಸಿದ್ದಾನೆ. ಕಲ್ಯಾಣಮಯಿ ನಾರಿ ಸಂಘ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ, ಕಳೆದ ಆಗಸ್ಟ್ 27 ರಿಂದ ಲೈಂಗಿಕ ಕಾರ್ಯಕರ್ತೆಯರ ಮೇಲೆ ಒಬ್ಬರ ನಂತರ ಒಬ್ಬರು ಹಲ್ಲೆ ನಡೆಸುತ್ತಿದ್ದಾರೆ. ಕನಿಷ್ಠ 60 ಮಹಿಳಾ ಲೈಂಗಿಕ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಈಗಾಗಲೇ ಮಾತನಾಡಿದ್ದೇವೆ ಎಂದು ಮಹಿಳಾ ಸಂಘ ನೀಡಿದ ಹೇಳಿಕೆ ಈ ವರದಿಯಲ್ಲಿದೆ.
ಹಾಗೆಯೆ ಬಾಂಗ್ಲಾದೇಶದ Kaler Kantho, jaijaidinbd ಮಾಧ್ಯಮ ಕೂಡ ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸುವ ವಿಡಿಯೋ ವೈರಲ್ ಆಗಿದೆ. ಕೆಲವು ಯುವಕರು ವಿವಿಧ ಪ್ರದೇಶಗಳಲ್ಲಿ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಸಂತ್ರಸ್ತ ಲೈಂಗಿಕ ಕಾರ್ಯಕರ್ತರು ದೂರಿದ್ದಾರೆ’ ಎಂದು ಬರೆಯಲಾಗಿದೆ.
ಹೀಗಾಗಿ ಬುರ್ಖಾ ಧರಿಸದ ಕಾರಣಕ್ಕಾಗಿ ಹಿಂದೂ ಮಹಿಳೆಯರನ್ನು ಥಳಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಈ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಈ ವೀಡಿಯೊ ಢಾಕಾದಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸುವ ದೃಶ್ಯವಾಗಿದೆ.