Fact Check: ಜೆಎನ್ಯೂ ವಿದ್ಯಾರ್ಥಿ ಸಂಘ ಚುನಾವಣೆ; ʼಎಬಿವಿಪಿʼ ಜಯಭೇರಿ ಬಾರಿಸಿದೆ ಎಂದು ವರದಿ ಮಾಡಿದ ಕನ್ನಡ ಮಾಧ್ಯಮಗಳು

ಜವಹರಲಾಲ್‌ ನೆಹರೂ ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಎಲ್ಲ ನಾಲ್ಕು ಸ್ಥಾನಗಳಲ್ಲೂ ಎಡಪಕ್ಷಗಳು ಜಯಗಳಿಸಿವೆ.
Fact Check: ಜೆಎನ್ಯೂ ವಿದ್ಯಾರ್ಥಿ ಸಂಘ ಚುನಾವಣೆ; ʼಎಬಿವಿಪಿʼ ಜಯಭೇರಿ ಬಾರಿಸಿದೆ ಎಂದು ವರದಿ ಮಾಡಿದ ಕನ್ನಡ ಮಾಧ್ಯಮಗಳು

ವಿದ್ಯಾರ್ಥಿ ಚಳವಳಿಗೆ ಸಂಬಂಧಿಸಿದಂತೆ ದಿಲ್ಲಿಯ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯವು ದೇಶದಾದ್ಯಂತ ಹೆಸರುವಾಸಿಯಾಗಿದೆ. ಹಲವಾರು ಮಂದಿ ಖ್ಯಾತನಾಮರು, ಪ್ರಖ್ಯಾತರು ಇದೇ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರು. ಈ ನಡುವೆ ಬಲಪಂಥೀಯ ಸಂಘಟನೆಗಳು ಜೆಎನ್ಯೂ ವಿರುದ್ಧ ಹಲವಾರು ಆರೋಪಗಳನ್ನು ಎತ್ತುತ್ತಲೇ ಇದ್ದಾರೆ ಮಾತ್ರವಲ್ಲ, ಜೆಎನ್ಯೂ ಎಂಬ ಸಿನಿಮಾವೊಂದು ಬಿಡುಗಡೆಗೂ ಸಿದ್ಧವಾಗಿದೆ. ಸದ್ಯ ಎಡ ಮತ್ತು ಬಲ ಪಂಥಗಳ ನಡುವೆ ಜಿದ್ದಾಜಿದ್ದಿನ ಕಣವಾಗಿ ಜೆಎನ್ಯೂ ಮಾರ್ಪಟ್ಟಿದೆ.

ಈ ನಡುವೆ ವಿಶ್ವವಿದ್ಯಾನಿಲಯಕ್ಕೆ ಈ ವರ್ಷ ನಡೆದ ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಎಡರಂಗ ಬೆಂಬಲಿತ ವಿದ್ಯಾರ್ಥಿಗಳು ಜಯಭೇರಿ ಬಾರಿಸಿದ್ದು, ಆರೆಸ್ಸೆಸ್‌ ಪೋಷಿತ ಎಬಿವಿಪಿ ಸಂಘಟನೆಯು ತೀವ್ರ ಸೋಲನುಭವಿಸಿತ್ತು. ಈ ಸುದ್ದಿಯನ್ನು ವರದಿ ಮಾಡುವ ಭರದಲ್ಲಿ ಹಲವಾರು ಕನ್ನಡ ಚಾನೆಲ್‌ ಗಳು ನಕಲಿ ಸುದ್ದಿಯನ್ನು ಪ್ರಕಟಿಸಿವೆ.

ಕರ್ನಾಟಕದ ಪ್ರಮುಖ ಮಾಧ್ಯಮ ಸುವರ್ಣ ನ್ಯೂಸ್‌ ಮತ್ತು ಬಲಪಂಥೀಯ ಮುಖವಾಣಿ ಹೊಸದಿಗಂತ ಎಂಬ ಪತ್ರಿಕೆಗಳು ಜೆಎನ್ಯೂ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಎಬಿವಿಪಿ ಪಡೆದಿದೆ ಎಂಬ ಸುದ್ದಿಯನ್ನು ಹರಿಬಿಟ್ಟಿದೆ. ಹಲವಾರು ಮಂದಿ ಬಲಪಂಥೀಯ ಕಾರ್ಯಕರ್ತರು ಈ ಸುದ್ದಿಯನ್ನು ಸಾಮಾಜಿಕ ತಾಣದಾದ್ಯಂತ ಹಂಚಿಕೊಂಡಿದ್ದಾರೆ.

ಈ ಮಾಧ್ಯಮಗಳು ಈ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದಂತೆಯೇ, ಈ ಹಿಂದೆ ಹಲವಾರು ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿರುವ ಆರೋಪ ಹೊತ್ತಿರುವ ಪೋಸ್ಟ್‌ ಕಾರ್ಡ್‌ ನ ಸಾಮಾಜಿಕ ತಾಣದ ಪೇಜ್‌ ಗಳಲ್ಲೂ ಎಬಿವಿಪಿ ಸಂಪೂರ್ಣ ಜಯಭೇರಿ ಬಾರಿಸಿದೆ ಎಂಬ ಫೋಟೊ ಪ್ರಸಾರ ಮಾಡಲಾಗಿತ್ತು. ಈ ಪೋಸ್ಟರ್‌ ನಲ್ಲಿ "ಜೆಎನ್‌ಯುನಲ್ಲಿ ಬದಲಾವಣೆಯ ಗಾಳಿ, ಅಧ್ಯಕ್ಷ ಸ್ಥಾನಕ್ಕೆ ನಡೆದ ವಿದ್ಯಾರ್ಥಿ ಘಟಕದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಬಿವಿಪಿ. ದೇಶವನ್ನು ತುಂಡುತುಂಡು (ತುಕ್ಡೆ ತುಕ್ಡೆ) ಮಾಡುತ್ತೇವೆಂದು ಘೋಷಣೆ ಕೂಗಿದ ಜೆಎನ್‌ಯುನಲ್ಲಿ ಮೊಳಗಲಿದೆ ಭಾರತ ಮಾತಾಕಿ ಜೈ ಘೋಷಣೆ, ವಿದ್ಯಾರ್ಥಿ ನಾಯಕರಿಗೆ ಮತ್ತು ಎಲ್ಲಾ ಕಾರ್ಯಕರ್ತರ ಒಗ್ಗಟ್ಟಿನ ಪ್ರಯತ್ನಗಳಿಗೆ ಅಭಿನಂದನೆಗಳು" ಎಂದು ಬರೆಯಲಾಗಿದೆ.

ಇದು ಮಾತ್ರವಲ್ಲದೇ, ಹಲವು ಪೋಸ್ಟರ್‌ ಗಳಲ್ಲಿ ಕಳೆದ ವರ್ಷ ದಿಲ್ಲಿ ಯುನಿವರ್ಸಿಟಿಯಲ್ಲಿ ನಡೆದ ಚುನಾವಣೆಯಲ್ಲಿ ಎಬಿವಿಪಿ ಜಯಗಳಿಸಿದ್ದ ಫೋಟೊಗಳನ್ನು ಬಳಸಲಾಗಿದೆ.

(Facebook Post 1, Facebook Post 2)

ಫ್ಯಾಕ್ಟ್‌ ಚೆಕ್

ರವಿವಾರ ರಾತ್ರಿ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ (JNUSU) ಚುನಾವಣೆಯ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಗಳು ನಾಲ್ಕು ಸ್ಥಾನವನ್ನೂ ತಮ್ಮದಾಗಿಸಿಕೊಂಡಿವೆ. ಮೂರು ಸ್ಥಾನಗಳನ್ನು ಯುನೈಟೆಡ್‌ ಲೆಫ್ಟ್‌ ಪ್ಯಾನಲ್‌ ಗೆದ್ದುಕೊಂಡರೆ BAPSA ಒಂದು ಸ್ಥಾನವನ್ನು ಗಳಿಸಿಕೊಂಡಿದೆ. ಎಬಿವಿಪಿ ಸ್ಫರ್ಧಿಸಿದ್ದ ಎಲ್ಲಾ ಸ್ಥಾನಗಳನ್ನೂ ಕಳೆದುಕೊಂಡಿದೆ.

ಅಧ್ಯಕ್ಷ ಸ್ಥಾನವನ್ನು ಎಡ ವಿದ್ಯಾರ್ಥಿ ಒಕ್ಕೂಟದ ಧನಂಜಯ ಗೆದ್ದುಕೊಂಡರೆ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಿರ್ಸಾ ಅಂಬೇಡ್ಕರ್ ಪುಲೆ ಸ್ಟೂಡೆಂಡ್ ಅಸೋಸಿಯೇಷನ್(BAPSA) ನ ಪ್ರಿಯಾಂಶಿ ಆರ್ಯಾ ಗೆದ್ದುಕೊಂಡಿದ್ದಾರೆ. ಉಪಾಧ್ಯಕ್ಷರಾಗಿ ಎಸ್‌ಎಫ್‌ಐನ ಅವಿಜಿತ್‌ ಘೋಷ್‌ ಆಯ್ಕೆಯಾದರೆ ಸಹಕಾರ್ಯದರ್ಶಿ ಸ್ಥಾನಕ್ಕೆ ಎಡ ಒಕ್ಕೂಟದ ಮುಹಮ್ಮದ್‌ ಸಾಜಿದ್‌ ಆಯ್ಕೆಯಾಗಿದ್ದಾರೆ.

ಈ ಸುದ್ದಿಗಳು ಪ್ರಮುಖ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗುವ ವೇಳೆಗಾಗಲೇ ಕರ್ನಾಟಕದ ಸುವರ್ಣ ನ್ಯೂಸ್‌ ಮತ್ತು ಹೊಸದಿಗಂತ ಎಬಿವಿಪಿ ಜಯಭೇರಿ ಬಾರಿಸಿದೆ ಎಂಬ ಸುದ್ದಿಯನ್ನು ಪ್ರಕಟಿಸಿತ್ತು. ಬಳಿಕ ತಮ್ಮ ಪ್ರಮಾದದ ಅರಿವಾಗಿ, ಸುದ್ದಿಯನ್ನು ತಿದ್ದಲಾಗಿದೆ. ಎಬಿವಿಪಿ 2024ರ ಜೆಎನ್ಯೂ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ.

Related Stories

No stories found.
logo
South Check
southcheck.in