ಹಿಜ್ಬುಲ್ಲಾ ವಿರುದ್ಧ ಇಸ್ರೇಲ್‌ನ ಸಮರ ಮತ್ತಷ್ಟು ತೀವ್ರಗೊಂಡಿದ್ದು, ಲೆಬನಾನ್‌ನಲ್ಲಿ ಕಳೆದ ಒಂದು ವಾರದಲ್ಲಿ 700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಬೈರೂತ್ನಲ್ಲಿ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಭಾರೀ ದೊಡ್ಡ ವಾಯುದಾಳಿ ನಡೆಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಿಜ್ಬುಲ್ಲಾ -ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಅನೇಕ ವೀಡಿಯೊಗಳು ಹರಿದಾಡುತ್ತಿವೆ.
ಲೆಬನಾನ್‌ನ ಜನವಸತಿ ಪ್ರದೇಶಗಳಲ್ಲಿ ಹಿಜ್ಬುಲ್ಲಾ ಭಯೋತ್ಪಾದಕರು ಅಡಗಿಸಿಟ್ಟ ಸ್ಫೋಟಕಗಳನ್ನು ಇಸ್ರೇಲ್ ನಾಶ ಮಾಡಿದೆ ಎಂದು ಹೇಳುವ ವೀಡಿಯೊ ವೈರಲ್ ಆಗುತ್ತಿದೆ. ಕಟ್ಟಗಳ ಜೊತೆಗೆ ಎಲ್ಲ ಶಸ್ತ್ರಾಸ್ತ್ರಗಳು ಬೆಂಕಿಗೆ ಆಹುತಿಯಾಗಿವೆ ಎಂದು ಹೇಳುತ್ತಿದ್ದಾರೆ.
ಸೆಪ್ಟೆಂಬರ್ 27, 2024 ರಂದು ಎಕ್ಸ್ ಬಳಕೆದಾರರೊಬ್ಬರು ಈ ವೀಡಿಯೊ ಹಂಚಿಕೊಂಡಿದ್ದು, ‘‘ಇಸ್ರೇಲ್‌ನ ವಾಯುಪಡೆಯ ವೈಮಾನಿಕ ದಾಳಿಯಿಂದಾಗಿ, ವಸತಿ ಪ್ರದೇಶದಲ್ಲಿ ಹಿಜ್ಬುಲ್ಲಾ ಭಯೋತ್ಪಾದಕರು ಮರೆಮಾಡಿದ ಸಂಪೂರ್ಣ ಶಸ್ತ್ರಾಸ್ತ್ರಗಳು ಕಟ್ಟಡಗಳ ಜೊತೆಗೆ ಜ್ವಾಲೆಯಾಗಿವೆ. ಅದೊಂದು ಭಯಾನಕ ದೃಶ್ಯ. ಈ ಕೋಮುವಾದಿ ಭಯೋತ್ಪಾದಕರು ತನ್ನ ರಕ್ತಸಿಕ್ತ ಇತಿಹಾಸದಿಂದ ಎಂದಿಗೂ ಕಲಿಯುವುದಿಲ್ಲ,’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಮತ್ತೊಂದು ಖಾತೆಯಿಂದ ಕೂಡ ಇದೇ ವೀಡಿಯೊ ಅಪ್ಲೋಡ್ ಆಗಿದೆ. ಇವರು ‘‘ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ, ಜನರ ಮನೆಗಳಲ್ಲಿ ಹಿಜ್ಬುಲ್ಲಾ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳು ಸ್ಫೋಟಗೊಂಡು ಆಕಾಶದಲ್ಲಿ ಬೆಂಕಿಯ ಗರಿಗಳಾಗಿ ಮಾರ್ಪಟ್ಟವು.’’ ಎಂದು ಹೇಳಿಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಈ ವೀಡಿಯೊಕ್ಕು ಹಿಜ್ಬುಲ್ಲಾ -ಇಸ್ರೇಲ್ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಕಂಡುಬಂದಿದೆ. ಅಸಲಿಗೆ ಇದರಲ್ಲಿ ಎರಡು ವೀಡಿಯೊವನ್ನು ಮರ್ಜ್ ಮಾಡಿ ಅಪ್ಲೋಡ್ ಮಾಡಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದೆವು. ಆಗ ಇದರಲ್ಲಿ ಎರಡು ವೀಡಿಯೊಗಳನ್ನು ಒಟ್ಟಿಗೆ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಮೊದಲ ಎರಡು ಸೆಕೆಂಡ್ ಇರುವ ವೀಡಿಯೊ ನೋಡಲು ಪಟಾಕಿ ಸಿಡಿಯುತ್ತಿರುವಂತೆ ಕಾಣುತ್ತದೆ. ನಂತರ ಇರುವ ಎರಡನೇ ವೀಡಿಯೊದಲ್ಲಿ ಬೆಂಕಿ ಇರಿಯುವುದು ಕಾಣುತ್ತದೆ. ಈ ಅನುಮಾನದ ಮೇರೆಗೆ ನಾವು ಎರಡನ್ನೂ ಪ್ರತ್ಯೇಕ ಫೋಟೋಗಳನ್ನಾಗಿ ಪರಿವರ್ತಿಸಿ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆ ಸಮಯದಲ್ಲಿ, ಈ ವೀಡಿಯೊ ಲೆಬನಾನ್‌ನದ್ದಲ್ಲ ಎಂಬುದು ಸ್ಪಷ್ಟವಾಯಿತು.
ಮೊದಲ ವೀಡಿಯೊ:
ಮೊದಲ ಎರಡು ಸೆಕೆಂಡ್ ಇರುವ ವೀಡಿಯೊದ ಸಂಪೂರ್ಣ ಆವೃತ್ತಿಯನ್ನು 9ನೇ ಆಗಸ್ಟ್ 2024 ರಂದು Abd Ellah Arabdji ಎಂಬ ಯೂಟ್ಯೂಬ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವುದು ನಮಗೆ ಸಿಕ್ಕಿದೆ. ಲೆಬನಾನ್ ಮೇಲಿನ ದಾಳಿಯ ಸುಮಾರು ಒಂದರಿಂದ ಒಂದೂವರೆ ತಿಂಗಳ ಮೊದಲೇ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ‘‘ಅಲ್ಜೀರಿಯಾದ ಬೆಂಬಲಿಗರು 103 ನೇ ವಾರ್ಷಿಕೋತ್ಸವವನ್ನು ಆಚರಿಸಿದರು’’ ಎಂಬ ಶೀರ್ಷಿಕೆ ಇದೆ.
ಹಾಗೆಯೆ GeoMundo ಎಂಬ ಯೂಟ್ಯೂಬ್ ಖಾತೆಯಲ್ಲಿ ಕೂಡ ಆಗಸ್ಟ್ 7, 2024 ರಂದು ಪಟಾಕಿ ಸಿಡಿಸುವ ಈ ವೀಡಿಯೊ ಹಂಚಿಕೊಳ್ಳಲಾಗಿದ್ದು, "ಅಲ್ಜೀರಿಯನ್ ಫುಟ್ಬಾಲ್ ಕ್ಲಬ್ ಮೌಲೌಡಿಯಾ ಕ್ಲಬ್ ಆಫ್ ಅಲ್ಜೀರ್ಸ್‌ನ ಬೆಂಬಲಿಗರು ತಮ್ಮ ಕ್ಲಬ್‌ನ 103 ನೇ ವಾರ್ಷಿಕೋತ್ಸವವನ್ನು ಮೂಲಕ ಆಚರಿಸಿದರು" ಎಂಬ ಮಾಹಿತಿ ನೀಡಲಾಗಿದೆ.
ಎರಡನೇ ವೀಡಿಯೊ:
ಎರಡನೇ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ದೃಶ್ಯದ ಫೋಟೋವನ್ನು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದು ಕೂಡ ಕಳೆದ ಆಗಸ್ಟ್ನಲ್ಲಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿರುವುದು ಸಿಕ್ಕಿದೆ. ಅದರಲ್ಲಿರುವ ಮಾಹಿತಿಯ ಪ್ರಕಾರ, ‘‘ವಿದ್ಯುತ್ ದೋಷದಿಂದ ಉಂಟಾದ ಬೆಂಕಿಯಲ್ಲಿ ಇಂಡೋನೇಷ್ಯಾದ ಗುಡಿಮ್‌ನಲ್ಲಿರುವ ಸಂಗುಲಿರಾಂಗ್ ಮಾರುಕಟ್ಟೆ ಸುಟ್ಟು ಬೂದಿಯಾಗಿದೆ'’ ಎಂದು ಬರೆಯಲಾಗಿದೆ. ಈ ವೀಡಿಯೊವನ್ನು ಆಗಸ್ಟ್ 22, 2024 ರಂದು ಅಪ್‌ಲೋಡ್ ಮಾಡಲಾಗಿದೆ.
ಲೆಬನಾನ್ ಮೇಲೆ ಇಸ್ರೇಲ್ ದಾಳಿ ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭವಾಯಿತು. ಆದರೆ, ಈ ಎರಡೂ ವೀಡಿಯೊಗಳನ್ನು ಆಗಸ್ಟ್ 2024 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹೀಗಾಗಿ ಲೆಬನಾನ್- ಇಸ್ರೇಲ್ ದಾಳಿಗೆ ಈ ವೈರಲ್ ವೀಡಿಯೊ ಸಂಬಂಧಿಸಿಲ್ಲ, ಸುಳ್ಳು ಮಾಹಿತಿಯೊಂದಿಗೆ ಎರಡು ವಿಭಿನ್ನ ಸ್ಥಳಗಳಲ್ಲಿ ನಡೆದ ಘಟನೆಗಳ ವೀಡಿಯೊಗಳನ್ನು ಒಟ್ಟಿಗೆ ಸೇರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.