Fact Check: ಅಂಗಡಿಯನ್ನು ಧ್ವಂಸಗೊಳಿಸುತ್ತಿದ್ದವರಿಗೆ ಆರ್ಮಿಯವರು ಗನ್ ಪಾಯಿಂಟ್ ತೋರಿದ ವೀಡಿಯೊ ಭಾರತದ್ದಲ್ಲ

ವೈರಲ್ ವೀಡಿಯೊ ಭಾರತದ್ದಲ್ಲ. ಇದು ಬಾಂಗ್ಲಾದೇಶದ ಫರೀದ್‌ಪುರದಲ್ಲಿ ಒಂದು ರಾಜಕೀಯ ಪಕ್ಷದ ಬೆಂಬಲಿಗರು ಅಂಗಡಿಯನ್ನು ಧ್ವಂಸಗೊಳಿಸಿರುವಾಗ ನಡೆದ ಘಟನೆ ಆಗಿದೆ.
Fact Check: ಅಂಗಡಿಯನ್ನು ಧ್ವಂಸಗೊಳಿಸುತ್ತಿದ್ದವರಿಗೆ ಆರ್ಮಿಯವರು ಗನ್ ಪಾಯಿಂಟ್ ತೋರಿದ ವೀಡಿಯೊ ಭಾರತದ್ದಲ್ಲ
Published on
2 min read

ಸಾಮಾಜಿಕ ಜಾಲತಾಣಗಳಲ್ಲಿ ಸಿಸಿಟಿವಿ ದೃಶ್ಯಾವಳಿಯೊಂದು ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಇಬ್ಬರು ಯುವಕರು ಆಯುಧಗಳಿಂದ ಮುಚ್ಚಿದ ಅಂಗಡಿಯನ್ನು ಧ್ವಂಸಗೊಳಿಸುತ್ತಿರುವುದನ್ನು ಕಾಣಬಹುದು. ಈ ನಡುವೆ ಇಬ್ಬರು ಸೇನಾ ಸಿಬ್ಬಂದಿಗಳು ತಮ್ಮ ವಾಹನವನ್ನು ನಿಲ್ಲಿಸಿ ಅವರ ಮೇಲೆ ಗನ್‌ಪಾಯಿಂಟ್‌ ತೋರಿಸಿ ನೆಲದ ಮೇಲೆ ಕುಳಿತುಕೊಳ್ಳಲು ಹೇಳುತ್ತಾರೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಭಾರತದಲ್ಲಿ ನಡೆದ ಘಟನೆ, ಇದು ಭಾರತೀಯ ಸೇನೆಯ ತಾಕತ್ತು ಎಂದು ಬರೆದುಕೊಳ್ಳುತ್ತಿದ್ದಾರೆ.

ಮಲ್ಲಿಕಾರ್ಜುನ ಎಂಬವರು ಸೆಪ್ಟೆಂಬರ್ 17, 2024 ರಂದು ತಮ್ಮ ಎಕ್ಸ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, ‘ಭಾರತೀಯ ಸೈನಿಕರು ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂಬುದನ್ನು ತಪ್ಪದೆ ಅರ್ಥ ಮಾಡಿಕೊಳ್ಳಿ. ಏಕೆಂದರೆ ಜಿಹಾದಿಗಳಿಗೆ ನಮ್ಮ ಹೆಮ್ಮೆಯ ಖಡಕ್ ಸೈನಿಕರು ಮಾತ್ರ ಬುದ್ಧಿ ಕಲಿಸಬಲ್ಲರು. ಜಾಗೋ ಭಾರತ್ ಭಾರತೀಯ ಸನಾತನ ಹಿಂದೂ ನಾವೆಲ್ಲ ಒಂದು. ಜಿಹಾದಿಗಳ ಹುಟ್ಟಡಗಿಸಲು ಬಿಜೆಪಿ ಭಾರತ ದೇಶಕ್ಕೆ, ಬಹಳ ಮುಖ್ಯವಾಗಿ ಬೇಕಾಗಿದೆ.’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ನಿರಂಜನ್ ಗುಪ್ತಾ ಎಂಬವರು ಕೂಡ ಇದೇ ವೀಡಿಯೊವನ್ನು ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ‘ನಮ್ಮ ಭಾರತೀಯ ಸೇನೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ಇಬ್ಬರು ಯಾವ ಉದ್ದೇಶಕ್ಕಾಗಿ ಇಲ್ಲಿಗೆ ಬಂದು ಧ್ವಂಸ ಮಾಡಲು ಪ್ರಾರಂಭಿಸಿದರು ಎಂಬುದು ನನಗೆ ತಿಳಿದಿಲ್ಲ. ಆದರೆ ಭಾರತೀಯ ಸೇನೆಯು ಹಾದು ಹೋಗುವಾಗ ಏನಾಯಿತು ಎಂಬುದು ನೀವೇ ವಿಡಿಯೋದಲ್ಲಿ ನೋಡಿ. ದೇಶಕ್ಕೆ ಸೇನೆ ಎಷ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಿ.’ ಎಂದು ವೀಡಿಯೊಕ್ಕೆ ಶೀರ್ಷಿಕೆ ನೀಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ಅಸಲಿಗೆ ಈ ಭಾರತದ್ದೇ ಅಲ್ಲ. ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆಯಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟಗಳನ್ನು ನಡೆಸಿದ್ದೇವೆ. ಆಗ ಬಾಂಗ್ಲಾದೇಶದ ಮಾಧ್ಯಮ ಜಮುನಾ ಟಿವಿ ಆಗಸ್ಟ್ 17, 2024 ರಂದು ತನ್ನ ಯೂಟ್ಯೂಬ್‌ನಲ್ಲಿ ವೀಡಿಯೊದ ದೀರ್ಘ ಆವೃತ್ತಿಯನ್ನು ಪ್ರಕಟಿಸಿರುವುದು ನಮಗೆ ಸಿಕ್ಕಿದೆ. ವೀಡಿಯೊದ ಶೀರ್ಷಿಕೆ ಮತ್ತು ವಿವರಣೆಯು ಫರೀದ್‌ಪುರದಲ್ಲಿ ಈ ಘಟನೆ ನಡೆದಿದೆ ಎಂದು ಸೂಚಿಸುತ್ತದೆ, ಅಂಗಡಿಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಸೇನೆಯು ಪುರುಷರನ್ನು ಬಂಧಿಸಿದೆ ಎಂಬ ಮಾಹಿತಿ ಇದರಲ್ಲಿದೆ.

ಈ ಮಾಹಿತಿಯನ್ನು ತೆಗೆದುಕೊಂಡು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ ಬಾಂಗ್ಲಾದೇಶದ ವೆಬ್​ಸೈಟ್ ಢಾಕಾ ಪೋಸ್ಟ್ ಆಗಸ್ಟ್ 17, 2024 ರಂದು ಈ ಕುರಿತು ಸುದ್ದಿ ಪ್ರಕಟಿಸಿರುವುದು ಸಿಕ್ಕಿತು. ‘ಆಗಸ್ಟ್ 14 ರಂದು ಫರೀದ್‌ಪುರದ ಬೋಲ್ಮರಿಯಲ್ಲಿ ಬಿಎನ್​​ಪಿ ಬಣಗಳ ನಡುವಿನ ಗಲಾಟೆಯ ಸಂದರ್ಭ ಬಾಂಗ್ಲಾದೇಶ ಸೇನೆಯು ಈ ವ್ಯಕ್ತಿಗಳನ್ನು ಬಂಧಿಸಿದೆ. ಒಂದು ಪಕ್ಷದ ಕಾರ್ಯಕರ್ತರು ಇನ್ನೊಂದು ಪಕ್ಷದ ಅಂಗಡಿಗಳನ್ನು ಧ್ವಂಸಗೊಳಿಸಲು ಮುಂದಾದಾಗ ಈ ಘಟನೆ ಸಂಭವಿಸಿದೆ. ಬಂಧಿತ ವ್ಯಕ್ತಿಗಳನ್ನು ಮೊಹಮ್ಮದ್ ತುತುಲ್ ಹೊಸೈನ್(28) ಮತ್ತು ದುಖು ಮಿಯಾ(30) ಎಂದು ಗುರುತಿಸಲಾಗಿದೆ. ವೈರಲ್ ವೀಡಿಯೊದಲ್ಲಿರುವ ಇಬ್ಬರನ್ನು ಸೇನೆಯು ಬಂಧಿಸಿ ಪೊಲೀಸರಿಗೆ ಒಪ್ಪಿಸಿದೆ ಎಂದು ಬೋಲ್ಮರಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಶಾಹಿದುಲ್ ಇಸ್ಲಾಂ ಹೇಳಿದ್ದಾರೆ’ ಎಂದು ವರದಿಯಲ್ಲಿದೆ.

24hourskhobor ಕೂಡ ಈ ಘಟನೆಯ ಕುರಿತು ವಿಸ್ತಾರವಾಗಿ ಸುದ್ದಿ ವರದಿ ಮಾಡಿದೆ. ಬಾಂಗ್ಲಾದೇಶದ ಫರೀದ್‌ಪುರ ಜಿಲ್ಲೆಯ ಬೋಲ್ಮರಿ ಉಪಜಿಲಾದಲ್ಲಿ ಈ ಘಟನೆ ಸಂಭವಿಸಿದೆ. ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ಎರಡು ಬಣಗಳ ನಡುವೆ ವಿವಾದವಿದೆ ಎಂದು ವರದಿಗಳು ತಿಳಿಸಿವೆ. ಇದರ ಪರಿಣಾಮವಾಗಿ, ಒಂದು ಬಣದ ಕಾರ್ಯಕರ್ತರು ಫರೀದ್‌ಪುರದಲ್ಲಿರುವ ಬೋಲ್ಮರಿ ಉಪಜಿಲಾ ಬಿಎನ್‌ಪಿ ಅಧ್ಯಕ್ಷ ಮತ್ತು ಜಾತ್ಯತಾಬಾದಿ ಸ್ವಚ್ಛಸೇಬಕ್ ದಳದ ಉಪಜಿಲ್ಲಾ ಶಾಖೆಯ ಸಂಚಾಲಕ ಸಂಜಯ್ ಸಹಾ ಅವರ ಅಂಗಡಿಯ ಮೇಲೆ ದಾಳಿ ಮಾಡಿದರು. ಈ ಸಂದರ್ಭದಲ್ಲಿ ಬಾಂಗ್ಲಾದೇಶ ಸೇನೆಯ ಯೋಧರು ದಾಳಿಕೋರರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಯುವ ದಳದ ಕಾರ್ಯಕರ್ತರಾದ ಮೊಹಮ್ಮದ್ ತುತುಲ್ ಹುಸೇನ್ ಮತ್ತು ದುಖು ಮಿಯಾ ಎಂದು ಗುರುತಿಸಲಾಗಿದೆ ಎಂದು ವರದಿಯಲ್ಲಿದೆ.

ಹೀಗಾಗಿ ಈ ವೈರಲ್ ವೀಡಿಯೊ ಭಾರತದ್ದಲ್ಲ ಅಥವಾ ಭಾರತೀಯ ಸೇನೆಗೆ ಸಂಬಂಧಿಸಿದ್ದಲ್ಲ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ. ಇದು ಬಾಂಗ್ಲಾದೇಶದ ಫರೀದ್‌ಪುರದಲ್ಲಿ ಒಂದು ರಾಜಕೀಯ ಪಕ್ಷದ ಬೆಂಬಲಿಗರು ಅಂಗಡಿಯನ್ನು ಧ್ವಂಸಗೊಳಿಸಿರುವಾಗ ನಡೆದ ಘಟನೆ ಆಗಿದೆ.

Related Stories

No stories found.
logo
South Check
southcheck.in