

ಜಬಲ್ಪುರದ ಬಾರ್ಗಿ ಅಣೆಕಟ್ಟಿನಲ್ಲಿ ನಡೆದ ಕ್ರೂಸ್ ಹಡಗು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13 ಕ್ಕೆ ಏರಿದೆ. ಕ್ರೂಸ್ ಪೈಲಟ್, ಸಹಾಯಕ ಮತ್ತು ಟಿಕೆಟ್ ಕೌಂಟರ್ ಉಸ್ತುವಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಪಘಾತದ ಕುರಿತ ಹೊಸ ಮಾಹಿತಿಗಳು ಒಂದೊಂದಾಗಿ ಹೊರಬರುತ್ತಿವೆ. ಏತನ್ಮಧ್ಯೆ, ಭಯಭೀತರಾದ ಜನರು ಮಗುಚಿದ ದೋಣಿಯನ್ನು ಹಿಡಿದಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಜಬಲ್ಪುರ ಕ್ರೂಸ್ ಹಡಗು ಮುಳಿಗಿದ ನಂತರದ ದೃಶ್ಯ ಎಂದು ಹೇಳಲಾಗುತ್ತಿದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಜಬಲ್ಪುರ ಕ್ರೂಸ್ ಹಡಗು ಮುಳುಗಿದ ನಂತರದ ದೃಶ್ಯ. ಬದುಕಿಗಾಗಿ ಜನರ ಚೀರಾಟ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಡಿಸೆಂಬರ್ 2025 ರಲ್ಲಿ ಬಾಂಗ್ಲಾದೇಶದ ರಂಗಮತಿ ಜಿಲ್ಲೆಯ ಕಪ್ಟಾಯ್ ಸರೋವರದಲ್ಲಿ ದೋಣಿ ಮಗುಚಿದ ಘಟನೆಗೆ ಸಂಬಂಧಿಸಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ ಡಿಸೆಂಬರ್ 28, 2025 ರಂದು "ನ್ಯೂಸ್ ರಿಪೋರ್ಟ್ ಟುಡೇ" ಎಂಬ ಸುದ್ದಿವಾಹಿನಿಯಲ್ಲಿ ಪ್ರಕಟವಾದ ಫೇಸ್‌ಬುಕ್ ಪೋಸ್ಟ್‌ನಲ್ಲಿ ದೀರ್ಘ ಆವೃತ್ತಿ ಕಂಡುಬಂದಿದೆ. ಪೋಸ್ಟ್ ಪ್ರಕಾರ, ಈ ಘಟನೆ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ಚಿತ್ತಗಾಂಗ್ ವಿಭಾಗದ ರಂಗಮತಿ ಜಿಲ್ಲೆಯಲ್ಲಿ ಸಂಭವಿಸಿದೆ. ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಕಪ್ತಾಯ್ ಸರೋವರದಲ್ಲಿ ಮಗುಚಿ ಬಿದ್ದಿತು.
ಬಾಂಗ್ಲಾದೇಶ ಟೈಮ್ಸ್ ಡಿಸೆಂಬರ್ 26, 2025 ರಂದು ವೈರಲ್ ವೀಡಿಯೊಕ್ಕೆ ಹೋಲುವ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿದೆ. ವರದಿಯ ಪ್ರಕಾರ, ಈ ಘಟನೆ ಡಿಸೆಂಬರ್ 25 ರಂದು ಸಂಭವಿಸಿದೆ. ರಂಗಮತಿಯ ಕಪ್ತಾಯ್ ಸರೋವರದಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿ ದೋಣಿಯೊಂದು ಮಗುಚಿ ಬಿದ್ದ ಘಟನೆ ಗುರುವಾರ ಸಂಜೆ ಸ್ವಲ್ಪ ಮೊದಲು ಬಾರ್ಕಲ್ ಸಬ್‌ಲಾಂಗ್ ಜಲಮಾರ್ಗ ಚಾನಲ್‌ನ ಶಿಲ್ಚಾರಿಮುಖ ಪ್ರದೇಶದಲ್ಲಿ ನಡೆದಿದೆ.
ಬಾಂಗ್ಲಾದೇಶದ ಸುದ್ದಿ ಸಂಸ್ಥೆ ಬಾಂಗ್ಲಾ ಟ್ರಿಬ್ಯೂನ್ ಘಟನೆಯ ಬಗ್ಗೆ ವಿವರವಾದ ವರದಿಯನ್ನು ಪ್ರಕಟಿಸಿದೆ. ಮರದ ದೋಣಿ ಸುಬಾಲೋಂಗ್ ಬಜಾರ್ ಪ್ರದೇಶದಿಂದ ಹಿಂತಿರುಗುತ್ತಿದ್ದಾಗ ಸಿಲ್ಚಾರಿಮುಖ್ ಪ್ರದೇಶದಲ್ಲಿ ಮಗುಚಿಬಿದ್ದಿದೆ. ಪಕ್ಕದಲ್ಲಿದ್ದವರು ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಘಟನೆ ನಡೆದಾಗ ಹಡಗಿನಲ್ಲಿ 20 ರಿಂದ 22 ಜನರಿದ್ದರು. ಅವರಲ್ಲಿ ಯಾರೂ ಲೈಫ್ ಜಾಕೆಟ್ ಧರಿಸಿರಲಿಲ್ಲ, ಆದರೆ ಯಾವುದೇ ಗಾಯಗಳಾಗಿಲ್ಲ. ದೋಣಿ ಓವರ್‌ಲೋಡ್ ಆಗಿತ್ತು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, 2025 ರಲ್ಲಿ ಬಾಂಗ್ಲಾದೇಶದಲ್ಲಿ ಸಂಭವಿಸಿದ ದೋಣಿ ಅಪಘಾತದ ಘಟನೆಯ ವೀಡಿಯೊವನ್ನು ಈಗ ಜಬಲ್ಪುರ ಕ್ರೂಸ್ ಹಡಗು ಅಪಘಾತಕ್ಕೆ ಸಂಬಂಧಿಸಿ ವೈರಲ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.