Fact Check: ತನ್ನ ಮೂರನೇ ಮದುವೆಯಲ್ಲಿ ಮಾಜಿ ಪತ್ನಿ ಕಿರಣ್ ರಾವ್‌ಗೆ ಆಮಿರ್ ಖಾನ್ ಮುತ್ತಿಟ್ಟರೇ? ಸುಳ್ಳು, ಸತ್ಯ ಇಲ್ಲಿದೆ

ನಟ ಆಮಿರ್ ಖಾನ್ ಅವರ ಮೂರನೇ ಮದುವೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೇಗವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಅವರು ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಅವರಿಗೆ ಮುತ್ತಿಡುತ್ತಿರುವ ದೃಶ್ಯ ಕಾಣಬಹುದು.
Fact Check: ತನ್ನ ಮೂರನೇ ಮದುವೆಯಲ್ಲಿ ಮಾಜಿ ಪತ್ನಿ ಕಿರಣ್ ರಾವ್‌ಗೆ ಆಮಿರ್ ಖಾನ್ ಮುತ್ತಿಟ್ಟರೇ? ಸುಳ್ಳು, ಸತ್ಯ ಇಲ್ಲಿದೆ
Published on
2 min read

ನಟ ಆಮಿರ್ ಖಾನ್ ಅವರ ಮೂರನೇ ಮದುವೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೇಗವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಅವರು ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಅವರಿಗೆ ಮುತ್ತಿಡುತ್ತಿರುವ ದೃಶ್ಯ ಕಾಣಬಹುದು. ಈ ವೀಡಿಯೊವನ್ನು ಅವರ ಮೂರನೇ ವಿವಾಹ ಸಮಾರಂಭದ ಭಾಗವೆಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ತನ್ನ ಮೂರನೆಯ ಮದುವೆ ಸಂಭ್ರಮದಲ್ಲಿ ವೇದಿಕೆಯಲ್ಲೇ ತನ್ನ ಎರಡನೇ ಪತ್ನಿ ಕಿರಣ್ ರಾವ್ ಗೆ ಚುಂಬಿಸಿದ ಅಮೀರ್ ಖಾನ್, ಇವನಿಗೆ ಮದುವೆಯಾಗುವ ಹುಚ್ಚು ಇನ್ನೂ ಎರಡು ವರ್ಷಗಳು ಕಳೆದರೆ ಇನ್ನೊಂದು ಮದುವೆ ಕೂಡ ಆಗಬಹುದು. ಇವರೆಲ್ಲಾ ಅನೇಕ ಯುವಕ, ಯುವತಿಯರ ಆರಾಧ್ಯಾ ದೈವಗಳು,ಮತ್ತು ಆದರ್ಶ ಪುರುಷ,ಅದು ಯಾವ ಸೀಮೆಯ ಆದರ್ಶ ಪುರುಷ ಏನು ಆ ದೇವರೇ ಬಲ್ಲ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಇತ್ತೀಚಿನದಲ್ಲ, ಸುಮಾರು ಎರಡು ವರ್ಷಗಳಷ್ಟು ಹಳೆಯದು. 2024 ರಲ್ಲಿ ತಮ್ಮ ಮಗಳು ಇರಾ ಖಾನ್ ಅವರ ವಿವಾಹದ ಸಂದರ್ಭದಲ್ಲಿ ಆಮಿರ್ ಖಾನ್ ತಮ್ಮ ಮಾಜಿ ಪತ್ನಿಗೆ ಮುತ್ತಿಟ್ಟ ವೀಡಿಯೊ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಜೂನ್ 4, 2024 ರಂದು NDTV ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಬಾಲಿವುಡ್ ನಟ ಆಮಿರ್ ಖಾನ್ ಅವರ ಪುತ್ರಿ ಐರಾ ಖಾನ್ ಮತ್ತು ನೂಪುರ್ ಶಿಖರೆ ಅವರ ವಿವಾಹ ಸಮಾರಂಭದಲ್ಲಿ ನಡೆದ ಒಂದು ಆತ್ಮೀಯ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆಯಿತು. ಸಮಾರಂಭಕ್ಕೆ ಆಗಮಿಸಿದ್ದ ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಅವರನ್ನು ಆಮಿರ್ ಖಾನ್ ಆತ್ಮೀಯವಾಗಿ ಸ್ವಾಗತಿಸಿ ಕೆನ್ನೆಗೆ ಮುತ್ತು ನೀಡಿ ಶುಭಾಶಯ ಕೋರಿದರು. 2021ರಲ್ಲಿ ವಿಚ್ಛೇದನ ಪಡೆದಿದ್ದರೂ, ಆಮಿರ್ ಮತ್ತು ಕಿರಣ್ ರಾವ್ ಉತ್ತಮ ಸ್ನೇಹಿತರಾಗಿ ಉಳಿದಿದ್ದು, ಪುತ್ರ ಅಜಾದ್‌ನ ಸಹ-ಪೋಷಕರಾಗಿಯೂ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ. ಐರಾ ಖಾನ್ ಆಮಿರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿಯಾಗಿದ್ದು, ಕುಟುಂಬದ ಎಲ್ಲ ಸದಸ್ಯರು ವಿವಾಹದಲ್ಲಿ ಒಟ್ಟಾಗಿ ಭಾಗವಹಿಸಿದ್ದ ದೃಶ್ಯ ಗಮನ ಸೆಳೆಯಿತು ಎಂದು ಬರೆದುಕೊಂಡಿದೆ.

ಜೂನ್ 4, 2024 ರಂದು ABP Live ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿದ್ದು, ನಟ ಆಮಿರ್ ಖಾನ್ ತಮ್ಮ ಪುತ್ರಿ ಐರಾ ಖಾನ್ ಅವರ ವಿವಾಹದಲ್ಲಿ ಮಾಜಿ ಪತ್ನಿ ಕಿರಣ್ ರಾವ್ ಅವರ ಕೆನ್ನೆಗೆ ಮುತ್ತಿಟ್ಟಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿ ಅನೇಕ ನೆಟ್ಟಿಗರು, "ಇಷ್ಟು ಪ್ರೀತಿಯಿದ್ದರೆ ವಿಚ್ಛೇದನ ಏಕೆ?" ಎಂದು ಪ್ರಶ್ನಿಸಿದ್ದಾರೆ. ಕೆಲವರು ಇವರ ಸ್ನೇಹಪೂರ್ಣ ಸಂಬಂಧವನ್ನು ಮೆಚ್ಚಿದರೆ, ಇನ್ನೂ ಕೆಲವರು ವಿಚ್ಛೇದನದ ನಂತರವೂ ಇಂತಹ ಆತ್ಮೀಯತೆ ಆಶ್ಚರ್ಯಕರ ಎಂದು ಪ್ರತಿಕ್ರಿಯಿಸಿದ್ದಾರೆ.

ಜೂನ್ 4, 2024 ರಂದು ಬಾಲಿವುಡ್ ಕಂಟ್ರಿ ತನ್ನ ಯೂಟ್ಯೂಬ್ ಚಾಲೆನ್​ನಲ್ಲಿ ವೈರಲ್ ವೀಡಿಯೊವನ್ನು ಹಂಚಿಕೊಂಡು, ‘‘ಮಗಳ ಮದುವೆಯಲ್ಲಿ ಮಾಜಿ ಪತ್ನಿ ಕಿರಣ್ ರಾವ್ ಗೆ ಮುತ್ತಿಟ್ಟ ಆಮಿರ್ ಖಾನ್’’ ಎಂದು ಬರೆದುಕೊಂಡಿದೆ.

ಜೂನ್ 2024 ರಲ್ಲಿ ತಮ್ಮ ಮಗಳು ಇರಾ ಖಾನ್ ಅವರ ವಿವಾಹದ ಸಂದರ್ಭದಲ್ಲಿ ಆಮಿರ್ ಖಾನ್ ಕಿರಣ್ ರಾವ್​ಗೆ ಮುತ್ತಿಟ್ಟ ವೀಡಿಯೊ ಎಂದು ಹಲವು ಮಾಧ್ಯಮ ಇದೇ ವೀಡಿಯೊವನ್ನು ಹಂಚಿಕೊಂಡಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಸಂದರ್ಭ ಏನು?

ಆಮಿರ್ ಖಾನ್ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಜುಲೈ 5, 2026 ರಂದು ಗೌರಿ ಸ್ಪ್ರಾಟ್ ಜೊತೆ ಮೂರನೇ ವಿವಾಹವಾದರು. ಇದು ಖಾಸಗಿ ಸಮಾರಂಭವಾಗಿತ್ತು, ಕುಟುಂಬ ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಈ ದಂಪತಿಗಳು ಎರಡು ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಆಮಿರ್ ಖಾನ್ ಮೊದಲು ರೀನಾ ದತ್ತಾ ಅವರನ್ನು 1993 ರಲ್ಲಿ ವಿವಾಹವಾದರು ಮತ್ತು 2002 ರಲ್ಲಿ ಬೇರ್ಪಟ್ಟರು. ಅವರಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬಳಿಕ 2005 ರಲ್ಲಿ ಕಿರಣ್ ರಾವ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು ಮತ್ತು 2021 ರಲ್ಲಿ ಬೇರ್ಪಟ್ಟರು. ಅವರಿಗೆ ಆಜಾದ್ ರಾವ್ ಎಂಬ ಮಗನಿದ್ದಾನೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಆಮಿರ್ ಖಾನ್ ಅವರ ಮೂರನೇ ವಿವಾಹ ಸಮಾರಂಭದದ್ದು ಎಂದು ಹೇಳಿಕೊಳ್ಳುವ ವೈರಲ್ ವೀಡಿಯೊ ಸುಳ್ಳು ಎಂಬುದು ಕಂಡುಹಿಡಿದಿದೆ. ಇದು ವಾಸ್ತವವಾಗಿ 2024 ರದ್ದಾಗಿದೆ.

logo
South Check
southcheck.in