Fact Check: ಅಫ್ಘಾನಿಸ್ತಾನ ಯುದ್ಧದ ನಡುವೆ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿ ಭಾರತಕ್ಕೆ ಗೌರವ ಸಲ್ಲಿಸಿದ್ದು ನಿಜವೇ?

ಅಫ್ಘಾನಿಸ್ತಾನದಲ್ಲಿ ಯುದ್ಧದ ಮಧ್ಯೆ ತ್ರಿವರ್ಣ ಧ್ವಜ ಹಾರಿಸುವುದನ್ನು ಮತ್ತು ರಾಷ್ಟ್ರಗೀತೆ ಹಾಡುವುದನ್ನು ಚಿತ್ರಿಸುವ ಈ ವೀಡಿಯೊವನ್ನು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
Fact Check: ಅಫ್ಘಾನಿಸ್ತಾನ ಯುದ್ಧದ ನಡುವೆ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿ ಭಾರತಕ್ಕೆ ಗೌರವ ಸಲ್ಲಿಸಿದ್ದು ನಿಜವೇ?
Published on
2 min read

ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಕೆಲವರು ಮಸೀದಿಯ ಎದುರು ಭಾರತೀಯ ಧ್ವಜವನ್ನು ಹಾರಿಸುತ್ತಿರುವುದನ್ನು ತೋರಿಸಲಾಗಿದೆ, ನಂತರ ರಾಷ್ಟ್ರಗೀತೆ "ಜನ ಗಣ ಮನ" ಹಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಯುದ್ಧದ ಮಧ್ಯೆ ತ್ರಿವರ್ಣ ಧ್ವಜ ಹಾರಿಸುವುದನ್ನು ಮತ್ತು ರಾಷ್ಟ್ರಗೀತೆ ಹಾಡುವುದನ್ನು ಚಿತ್ರಿಸುವ ಈ ವೀಡಿಯೊವನ್ನು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಅಫ್ಘಾನಿಸ್ತಾನ ಯುದ್ಧದ ನಡುವೆ ಕೂಡ ತ್ರಿವರ್ಣ ಧ್ವಜ ಹಾರಿಸಿ ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಎಲ್ಲರೂ ಸೇರಿಕೊಂಡು ಜನಗಣಮನ ಗೀತೆಯನ್ನ ಹಾಡಿ ಭಾರತಕ್ಕೆ ಗೌರವ ಸಲ್ಲಿಸಿದ ಕ್ಷಣಗಳು. ಇಲ್ಲಿರುವ ದೇಶದ್ರೋಹಿಗಳು ಇವರನ್ನು ನೋಡಿ ಆದ್ರೂ ಕಲಿತುಕೊಳ್ಳಿರೋ. ಭಾರತ್ ಮಾತಾಕಿ ಜೈ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಇರುವ ದಾರುಲ್ ಉಲೂಮ್ ದೇವ್ಬಂದ್ ಎಂಬ ಇಸ್ಲಾಮಿಕ್ ಸೆಮಿನರಿಯಲ್ಲಿ ಜನವರಿ 26 ರಂದು ನಡೆದ ಗಣರಾಜ್ಯೋತ್ಸವದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಆದ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಆಗ ಜರ್ನಲ್ ಮಿರರ್ ಮತ್ತು IBC24 ನ್ಯೂಸ್ ಜನವರಿ 26 ಮತ್ತು 27 ರಂದು ದಿಯೋಬಂದ್‌ನಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣ ಎಂದು ಹೇಳಿಕೊಂಡು ಈ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿತು.

ದಿ ಅಬ್ಸರ್ವರ್ ಪೋಸ್ಟ್‌ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಜನವರಿ 27 ರಂದು, ‘‘ಗಣರಾಜ್ಯೋತ್ಸವದಂದು ದಾರುಲ್ ಉಲೂಮ್ ದಿಯೋಬಂದ್‌ನ ಒಂದು ವೀಡಿಯೊ ವೈರಲ್ ಆಗಿದ್ದು, ಸೆಮಿನರಿಯಲ್ಲಿ ರಾಷ್ಟ್ರಗೀತೆ ನುಡಿಸುತ್ತಿರುವುದನ್ನು ಇದು ತೋರಿಸುತ್ತದೆ. ವಿದ್ಯಾರ್ಥಿಗಳು ಮತ್ತು ಹಾಜರಿದ್ದವರು ಗೀತೆಯ ಸಮಯದಲ್ಲಿ ಗೌರವಯುತವಾಗಿ ಎದ್ದು ನಿಂತಿರುವುದನ್ನು ಕಾಣಬಹುದು. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದ್ದು, ದೇಶಾದ್ಯಂತ ಗಮನ ಸೆಳೆಯುತ್ತಿದೆ.’’ ಎಂಬ ಶೀರ್ಷಿಕೆಯೊಂದಿಗೆ ಇದೇ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಇದೇವೇಳೆ ನವಭಾರತ್ ಟೈಮ್ಸ್ ಕೂಡ ಜನವರಿ 27 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಈ ಘಟನೆಯ ಬಗ್ಗೆ ವರದಿ ಮಾಡಿದ್ದನ್ನು ನಾವು ಗಮನಿಸಿದ್ದೇವೆ. ಜನವರಿ 26, 2026 ರ ಗಣರಾಜ್ಯೋತ್ಸವದಂದು ಸಹರಾನ್‌ಪುರದ ದಾರುಲ್ ಉಲೂಮ್ ದಿಯೋಬಂದ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು ಮತ್ತು ರಾಷ್ಟ್ರಗೀತೆಯನ್ನು ನುಡಿಸಲಾಯಿತು ಎಂಬ ಮಾಹಿತಿ ಇದರಲ್ಲಿದೆ. ಇದಲ್ಲದೆ, ಸೆಮಿನರಿಗೆ ಸಂಬಂಧಿಸಿದ ತಜ್ಞರೊಬ್ಬರು ಹೇಳಿದ್ದನ್ನು ವರದಿ ಉಲ್ಲೇಖಿಸಿದೆ: "ದಾರುಲ್ ಉಲೂಮ್‌ನಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಹೊಸದೇನಲ್ಲ. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂತಹ ಸಂದರ್ಭಗಳಲ್ಲಿ, ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ ಮತ್ತು ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ."

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊ ಅಫ್ಘಾನಿಸ್ತಾನದ್ದಲ್ಲ ಎಂಬುದು ಸ್ಪಷ್ಟವಾಗಿ ತೋರಿಸುತ್ತದೆ. ಜನವರಿ 26 ರ ಗಣರಾಜ್ಯೋತ್ಸವದಂದು ದಾರುಲ್ ಉಲೂಮ್ ದಿಯೋಬಂದ್‌ನಲ್ಲಿ ಧ್ವಜಾರೋಹಣ ಮತ್ತು ರಾಷ್ಟ್ರಗೀತೆ ಹಾಡುವುದನ್ನು ವೀಡಿಯೊದಲ್ಲಿ ಚಿತ್ರಿಸಲಾಗಿದೆ. ಆದ್ದರಿಂದ, ಈ ಹಕ್ಕು ಸುಳ್ಳು.

Related Stories

No stories found.
logo
South Check
southcheck.in