Fact Check: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಗೆ ಐಶ್ವರ್ಯಾ ರೈ ಆಗಮಿಸಿದ್ದರೇ? ಸುಳ್ಳು, ಸತ್ಯ ಇಲ್ಲಿದೆ

ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಮದುವೆಗೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳ ಜೊತೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Fact Check: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಗೆ ಐಶ್ವರ್ಯಾ ರೈ ಆಗಮಿಸಿದ್ದರೇ? ಸುಳ್ಳು, ಸತ್ಯ ಇಲ್ಲಿದೆ
Published on
2 min read

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಐಶಾರಾಮಿ ಐಟಿಸಿ ರೆಸಾರ್ಟ್​​ನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಇವರ ಮದುವೆ ಫೋಟೋಗಳು ಒಂದೊಂದೆ ಹರಿದಾಡುತ್ತಿದೆ. ಈ ಮಧ್ಯೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಹೂವಿನಿಂದ ಅಲಂಕಾರಗೊಂಡಿರುವ ಕಾರ್ಯಕ್ರಮವೊಂದಕ್ಕೆ ಅವರ ಮಗಳ ಜೊತೆ ಆಗಮಿಸುತ್ತಿರುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇವರು ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಮದುವೆಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರಶ್ಮಿಕಾ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಟಿ ಐಶ್ವರ್ಯ ರೈ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2023 ರಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ಸಮಾರಂಭಕ್ಕೆ ಐಶ್ವರ್ಯಾ ಅವರು ಮಗಳು ಆರಾಧ್ಯ ಜೊತೆ ಆಗಮನಿಸಿದ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಆಗ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಜನವರಿ 20, 2023 ರಂದು ಎನ್​ಡಿಟಿವಿ ಸುದ್ದಿ ಪ್ರಕಟಿಸಿರುವುದು ಸಿಕ್ಕಿತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ಅದ್ಭುತ ಅಲಂಕಾರದಲ್ಲಿ ನಡೆದಿದೆ. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಕತ್ರಿನಾ ಕೈಫ್ ಹಾಗೂ ಐಶ್ವರ್ಯಾ ರೈ ಮತ್ತು ಅವರ ಪುತ್ರಿ ಆರಾಧ್ಯ ಬಚ್ಚನ್ ಆಗಮಿಸಿದ ಫೋಟೋಗಳಿಗೆ ಪೋಸ್ ನೀಡಿದರು. ಐಶ್ವರ್ಯಾ ಹಸಿರು ಬಣ್ಣದ ಭವ್ಯ ವರ್ಣಗಳಿಂದ ಕಂಗೊಳಿಸುತ್ತಿದ್ದರು ಎಂದು ಬರೆಯಲಾಗಿದೆ.

ಜನವರಿ 20, 2023 ರಂದು ನ್ಯೂಸ್ 18 ಕೂಡ ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿದ್ದು, ‘‘ಜನವರಿ 19 ರಂದು ಅಂಬಾನಿಯವರ ನಿವಾಸವಾದ ಆಂಟಿಲಿಯಾದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಬಚ್ಚನ್ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಅನೇಕ ಬಾಲಿವುಡ್‌ನ ಗಣ್ಯರು ಭಾಗವಹಿಸಿದ್ದರು. ಹಸಿರು ಮತ್ತು ಚಿನ್ನದ ಬಣ್ಣದ ಅನಾರ್ಕಲಿ ಸೂಟ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ ಆಗಮಿಸಿದ್ದರು’’ ಎಂದು ಬರೆಯಲಾಗಿದೆ.

Mana Stars ಮತ್ತು Bol Bollywood ಕೂಡ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ವೈರಲ್ ವೀಡಿಯೊದ ಪೂರ್ಣ ಆವೃತ್ತಿಯೊಂದಿಗೆ ‘‘ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ನಿಶ್ಚಿತಾರ್ಥ ಸಮಾರಂಭದಲ್ಲಿ ಮಗಳು ಆರಾಧ್ಯ ಬಚ್ಚನ್ ಜೊತೆ ಐಶ್ವರ್ಯಾ ರೈ ಬಚ್ಚನ್’’ ಎಂದು ಬರೆದುಕೊಂಡಿದೆ.

ಇನ್ನು ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಗೆ ಐಶ್ವರ್ಯಾ ರೈ ಆಗಮಿಸಿದ್ದಾರ ಎಂದು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ವರದಿ ಕಂಡುಬಂದಿಲ್ಲ. ಹಾಗೆಯೆ ಈ ಮದುವೆ ಸಮಾರಂಭಕ್ಕೆ ಆಗಮಿಸಿದ ಸೆಲೆಬ್ರೆಟಿ ಲಿಸ್ಟ್ ಅನ್ನು ಹುಡುಕಿದ್ದೇವೆ. ಎನ್​ಡಿಟಿವಿ ಮೂವಿಸ್​ ಸೆಲೆಬ್ರೆಟಿಗಳ ಪಟ್ಟಿಗಳನ್ನು ಹಂಚಿಕೊಂಡಿದ್ದು ಇದರಲ್ಲಿ ಎಲ್ಲೂ ಐಶ್ವರ್ಯಾ ಹೆಸರು ಇಲ್ಲ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಗೆ ಐಶ್ವರ್ಯಾ ರೈ ಆಗಮಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಅಸಲಿಗೆ 2023 ರಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ಸಮಾರಂಭದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Related Stories

No stories found.
logo
South Check
southcheck.in