

ಈ ವರ್ಷ ಅಯೋಧ್ಯೆಯಲ್ಲಿ ಅದ್ದೂರಿ ದೀಪಾವಳಿ ಆಚರಣೆ ಮಾಡಲಾಯಿತು. 26 ಲಕ್ಷಕ್ಕೂ ಹೆಚ್ಚು ದೀಪಗಳು ಸರಯು ನದಿಯ ಘಾಟ್‌ಗಳನ್ನು ಬೆಳಗಿಸುವುದರೊಂದಿಗೆ 2,000 ಕ್ಕೂ ಹೆಚ್ಚು ಜನರು ಒಟ್ಟಾಗಿ ಆರತಿ ಮಾಡುವ ಮೂಲಕ ಅಪೂರ್ಣ ಕ್ಷಣಕ್ಕೆ ಸಾಕ್ಷಿಯಾಯಿತು. ಇದರ ನಡುವೆ, ಪ್ರಕಾಶಿತ ನಗರದೃಶ್ಯವನ್ನು ತೋರಿಸುವ ಅದ್ಭುತವಾದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಅಯೋಧ್ಯೆಯ ದೀಪೋತ್ಸವ ಆಚರಣೆಯ ಸಮಯದಲ್ಲಿ ಸೆರೆಹಿಡಿಯಲಾಗಿದೆದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘26 ಲಕ್ಷ ಹಣತೆಗಳ ದೀಪಗಳು ಒಮ್ಮೆಲೆ ಬೆಳಗಿದಾಗ ಅಯೋದ್ಯೆಯ ವೈಭವ ಈ ರೀತಿಯಾಗಿರುತ್ತೆ. ವಿಶ್ವದಾಖಲೆ ಬರೆದ ಅಯೋಧ್ಯಾ ದೀಪೋತ್ಸವ. 26 ಲಕ್ಷ ಹಣತೆಗಳೊಂದಿಗೆ ಬೆಳಗಿದ ರಾಮನಗರಿ. ಶ್ರೀ ರಾಮನ ಕಾಲದ ಅಯೋಧ್ಯೆ ಹೀಗೆ ಇತ್ತೇನೊ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಚಿತ್ರವು ನಿಜವಲ್ಲ, ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.
ನಿಜಾಂಶವನ್ನು ತಿಳಿಯಲು ಮೊದಲಿಗೆ, ಹಬ್ಬಗಳಂದು ಅಯೋಧ್ಯೆಯ ಸರಯು ನದಿ ದಂಡೆಯಲ್ಲಿ ದೀಪಾಲಂಕಾರ ಮಾಡಿದಾಗ, ಅದರ ಹಲವಾರು ಫೋಟೋಗಳು ಮತ್ತು ವಿಡಿಯೋಗಳನ್ನು ನಾವು ನೋಡಿದ್ದೇವೆ. ಆದರೆ, ವೈರಲ್ ಚಿತ್ರಕ್ಕೆ ಹೊಂದಿಕೆಯಾಗುವ ಸ್ಥಳ ಸಿಗಲಿಲ್ಲ. ಅಕ್ಟೋಬರ್ 20 ರಂದು ಹಿಂದೂಸ್ತಾನ್ ಟೈಮ್ಸ್ ‘‘ದೀಪಾವಳಿ ಹಬ್ಬದ ಆಚರಣೆಯ ಭಾಗವಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಯೋಧ್ಯೆಯ ರಾಮ ಮಂದಿರ ಅಲಂಕಾರಿಕ ದೀಪಗಳಿಂದ ಬೆಳಗುತ್ತಿದೆ’’ ಎಂದು ಫೋಟೋ ಗ್ಯಾಲರಿಯನ್ನು ಪ್ರಕಟಿಸಿದೆ. ಇದರ ಜೊತೆಗೆ ಇನ್ನೂ ಕೆಲ ವರದಿಗಳನ್ನು ನೋಡಿದ್ದೇವೆ. ಆದರೆ, ವೈರಲ್ ಫೋಟೋ ಯಾವುದೇ ಸುದ್ದಿ ವರದಿಯಲ್ಲಿ ಕಾಣಿಸಿಕೊಂಡಿಲ್ಲ.
ಬಳಿಕ ನಾವು, ವೈರಲ್ ಪೋಸ್ಟ್‌ನಲ್ಲಿರುವ ಚಿತ್ರವನ್ನು ಎಚ್ಚರಿಕೆಯಿಂದ ಗಮನಿಸಿದಾಗ ಇದರಲ್ಲಿ ಕುಶಲತೆಯಿಂದ ಮಾಡಲ್ಪಟ್ಟಿರಬಹುದು ಅಥವಾ AI- ರಚಿತವಾಗಿರಬಹುದು ಎಂದು ಸುಳಿವು ನೀಡಿತು. ಉದಾಹರಣೆಗೆ, ಹೆಚ್ಚುವರಿ ಹೊಳಪು ವಿನ್ಯಾಸ ಮತ್ತು ರೋಡ್ನ ತುದಿ ನೈಜ್ಯತೆಗೆ ದೂರವಾಗಿತ್ತು. ಇದರಿಂದ ಸೂಚನೆಯನ್ನು ತೆಗೆದುಕೊಂಡು ನಾವು AI- ಪತ್ತೆ ಸಾಧನದಲ್ಲಿ ಪರಿಶೀಲಿಸಿದ್ದೇವೆ. SightEngine, AI-ವಿಷಯ ಪತ್ತೆ ಸಾಧನ ಈ ಫೋಟೋ 95% ರಷ್ಟು AI-ರಚಿತವಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಅದೇ ರೀತಿ, WasitAI ಉಪಕರಣವು ಚಿತ್ರ ಅಥವಾ ಅದರ ಗಮನಾರ್ಹ ಭಾಗಗಳು AI-ರಚಿತವಾಗಿದೆ ಎಂದು ಹೇಳಿದೆ.
ಈ ವೈರಲ್ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಅಕ್ಟೋಬರ್ 20, 2025 ರಂದು @WallzByAI ಎಂಬ AI ಕಲಾವಿದ, ಈ ಫೋಟೋವನ್ನು ಹಂಚಿಕೊಂಡಿರುವುದು ಸಿಕ್ಕಿದೆ. ಇವರ ಖಾತೆಯಲ್ಲಿ ಎಐಯಿಂದ ರಚಿಸಿದ ಅನೇಕ ದೇವರ ಫೋಟೋಗಳಿವೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ದೀಪಾವಳಿಯ ಸಂದರ್ಭದಲ್ಲಿ ಅಯೋಧ್ಯೆಯ ಸರಯು ನದಿ ದಂಡೆಯು 26 ಲಕ್ಷಕ್ಕೂ ಹೆಚ್ಚು ದೀಪಗಳಿಂದ ಬೆಳಗಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಹಂಚಿಕೊಂಡ ಚಿತ್ರವು ಸ್ಪಷ್ಟವಾಗಿ AI-ರಚಿತವಾಗಿದೆ.