

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಾಗಿ 2,550 ಕೇಂದ್ರ ಪಡೆಗಳ ಕಂಪನಿಗಳನ್ನು ನಿಯೋಜಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಕೇಂದ್ರ ಪಡೆಗಳು ರಾಜ್ಯ ಪೊಲೀಸರ ಸಹಯೋಗದೊಂದಿಗೆ ಗಸ್ತು ತಿರುಗಲಿವೆ. ಏತನ್ಮಧ್ಯೆ, ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ಪಡೆಗಳ ನಡುವೆ ಘರ್ಷಣೆ ನಡೆದಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಸಮವಸ್ತ್ರದಲ್ಲಿರುವ ಜನರು ಮತ್ತು ಇತರರು ರಸ್ತೆಯಲ್ಲಿ ಓಡುತ್ತಿರುವುದನ್ನು ಕಾಣಬಹುದು. ಒಂದು ಹಂತದಲ್ಲಿ, ಒಬ್ಬ ಪೊಲೀಸ್ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದ ಹೌರಾದಲ್ಲಿ, ಬಂಗಾಳ ಪೊಲೀಸರು ಅರೆಸೈನಿಕ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಮಾರ್ಚ್ 10 ರಂದು ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಪಡೆಗಳ ಸದಸ್ಯರು ನಡೆಸಿದ ಸೆಕ್ರೆಟರಿಯೇಟ್ ಮಾರ್ಚ್ ಸಮಯದಲ್ಲಿ ನಡೆದ ಘರ್ಷಣೆಯಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ, ಹೌರಾ ನಗರ ಪೊಲೀಸರ ಅಧಿಕೃತ ಎಕ್ಸ್ ಪುಟದಲ್ಲಿ ಇದೇ ರೀತಿಯ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಇದು ಮಾರ್ಚ್ 10 ರಂದು ರಾಜ್ಯದ ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಪಡೆ ನಡೆಸಿದ ಸೆಕ್ರೆಟರಿಯೇಟ್ ಮಾರ್ಚ್‌ನ ವೀಡಿಯೊವಾಗಿದ್ದು, ಈಗ ಅದನ್ನು ತಪ್ಪು ರೀತಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು X ಪೋಸ್ಟ್ ಸ್ಪಷ್ಟಪಡಿಸುತ್ತದೆ. ಇದು ಸೆಕ್ರೆಟರಿಯೇಟ್ ಮಾರ್ಚ್ ಅನ್ನು ಪೊಲೀಸರು ನಿಯಂತ್ರಿಸುತ್ತಿರುವ ದೃಶ್ಯವಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಹೌರಾ ಪೊಲೀಸ್ ಎಕ್ಸ್-ಪೋಸ್ಟ್‌ನಲ್ಲಿ ಒದಗಿಸಲಾದ ಮಾಹಿತಿಯ ಆಧಾರದ ಮೇಲೆ, ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಪಡೆ ಸದಸ್ಯರು ನಬನ್ನಾ ಎಂದೂ ಕರೆಯಲ್ಪಡುವ ಸಚಿವಾಲಯಕ್ಕೆ ನಡೆಸಿದ ಮೆರವಣಿಗೆಯನ್ನು ನಾವು ತನಿಖೆ ಮಾಡಿದ್ದೇವೆ. ಆಗ ಮಾರ್ಚ್ 10 ರಂದು, ಎಬಿಪಿ ಆನಂದ ಇನ್‌ಸ್ಟಾಗ್ರಾಮ್ ಪುಟವು ಘರ್ಷಣೆಯ ಬಗ್ಗೆ ಬಾಂಗ್ಲಾ ಭಾಷೆಯಲ್ಲಿ ವೀಡಿಯೊ ವರದಿಯನ್ನು ಹಂಚಿಕೊಂಡಿರುವುದು ಸಿಕ್ಕಿತು. ವರದಿಯ ಪ್ರಕಾರ, ನಾಗರಿಕ ರಕ್ಷಣಾ ಸದಸ್ಯರು ಸಚಿವಾಲಯಕ್ಕೆ ನಡೆಸಿದ ಮೆರವಣಿಗೆ ಘರ್ಷಣೆಗೆ ಕಾರಣವಾಯಿತು. ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು ಎಂದು ವರದಿ ಹೇಳುತ್ತದೆ.
ಮಾರ್ಚ್ 11 ರಂದು, ಎಬಿಪಿ ಆನಂದ ಯೂಟ್ಯೂಬ್ ಚಾನೆಲ್ನಲ್ಲಿಯೂ ಸೆಕ್ರೆಟರಿಯೇಟ್ ಮಾರ್ಚ್‌ಗೆ ಸಂಬಂಧಿಸಿದ ವರದಿಯನ್ನು ಹಂಚಿಕೊಂಡಿದೆ. ಈ ವರದಿಯಲ್ಲಿ, ವೈರಲ್ ವೀಡಿಯೊ ರೆಕಾರ್ಡ್ ಮಾಡಿದ ಅದೇ ಸ್ಥಳದಲ್ಲಿ ನಾಗರಿಕ ರಕ್ಷಣಾ ಸ್ವಯಂಸೇವಕರೊಬ್ಬರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು. ವೀಡಿಯೊದ ವಿವರಣೆಯ ಪ್ರಕಾರ, ಈ ಘಟನೆ ಹೌರಾದ ತೆಲ್ಕಲ್ ಘಾಟ್ ಬಳಿ ನಡೆದಿದೆ.
ಮಾರ್ಚ್ 11 ರಂದು, EKHON DIGANTA PATRIKA ತನ್ನ ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ವೀಡಿಯೊದಂತೆಯೇ ಇರುವ ದೃಶ್ಯಗಳನ್ನು ಹೊಂದಿರುವ ದೀರ್ಘ ವೀಡಿಯೊಗಳನ್ನು ಹಂಚಿಕೊಂಡಿದೆ. ಐದು ನಿಮಿಷಗಳಿಗಿಂತ ಹೆಚ್ಚು ಅವಧಿಯ ವೀಡಿಯೊದ 2.57 ನಿಮಿಷಗಳಲ್ಲಿ ವೈರಲ್ ವೀಡಿಯೊ ಪ್ರಾರಂಭವಾಗುತ್ತದೆ. ವೀಡಿಯೊದ ಶೀರ್ಷಿಕೆಯ ಪ್ರಕಾರ, ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಪಡೆಯ ಸ್ವಯಂಸೇವಕರು ವೇತನ ಹೆಚ್ಚಳ ಮತ್ತು ಉದ್ಯೋಗ ಕ್ರಮಬದ್ಧಗೊಳಿಸುವಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಚಿವಾಲಯಕ್ಕೆ ಮೆರವಣಿಗೆ ನಡೆಸಿದರು. ಮೆರವಣಿಗೆ ಸಚಿವಾಲಯ ತಲುಪುವ ಮೊದಲು ಪೊಲೀಸರು ಪ್ರತಿಭಟನಾಕಾರರನ್ನು ತಡೆದರು ಎಂದು ವೀಡಿಯೊದ ಶೀರ್ಷಿಕೆ ಹೇಳುತ್ತದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪ್ರಸಾರವಾಗುತ್ತಿರುವ ವೀಡಿಯೊ ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಪಡೆಗಳ ಸದಸ್ಯರು ನಡೆಸಿದ ಸಚಿವಾಲಯದ ಮೆರವಣಿಗೆಯ ಸಮಯದಲ್ಲಿ ನಡೆದ ಘರ್ಷಣೆಯದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.