Fact Check: ಟರ್ಕಿಯಲ್ಲಿ ಕಟ್ಟಡ ಧ್ವಂಸಗೊಳಿಸುವ ವೀಡಿಯೊವನ್ನು ವೆನೆಜುವೆಲಾ ಭೂಕಂಪದ ದೃಶ್ಯವೆಂದು ಹಂಚಿಕೊಳ್ಳಲಾಗಿದೆ

ಜೂನ್ 24 ರಂದು ವೆನೆಜುವೆಲಾದಲ್ಲಿ ಸಂಭವಿಸಿದ ಪ್ರಬಲ ಸರಣಿ ಭೂಕಂಪಗಳಲ್ಲಿ ಸಾವಿನ ಸಂಖ್ಯೆ 1,000 ಕ್ಕೆ ತಲುಪಿದ್ದು, 50,000 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಒಂದು ಎತ್ತರದ ಕಟ್ಟಡ ಉರುಳಿ ಬೀಳುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Fact Check: ಟರ್ಕಿಯಲ್ಲಿ ಕಟ್ಟಡ ಧ್ವಂಸಗೊಳಿಸುವ ವೀಡಿಯೊವನ್ನು ವೆನೆಜುವೆಲಾ ಭೂಕಂಪದ ದೃಶ್ಯವೆಂದು ಹಂಚಿಕೊಳ್ಳಲಾಗಿದೆ
Published on
2 min read

ಜೂನ್ 24 ರಂದು ವೆನೆಜುವೆಲಾದಲ್ಲಿ ಸಂಭವಿಸಿದ ಪ್ರಬಲ ಸರಣಿ ಭೂಕಂಪಗಳಲ್ಲಿ ಸಾವಿನ ಸಂಖ್ಯೆ 1,000 ಕ್ಕೆ ತಲುಪಿದ್ದು, 50,000 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಅಧಿಕೃತ ವರದಿಗಳು ತಿಳಿಸಿವೆ. ಕಂಪನವು ದೇಶದ ಹಲವಾರು ಭಾಗಗಳಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದೆ. ಈ ಹಿನ್ನೆಲೆಯಲ್ಲಿ, ಒಂದು ಎತ್ತರದ ಕಟ್ಟಡ ಉರುಳಿ ಬೀಳುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ವೆನೆಜುವೆಲಾ: ವೆನೆಜುವೆಲಾದಲ್ಲಿ ಭೂಕಂಪ: ಸಾವಿನ ಸಂಖ್ಯೆ 188ಕ್ಕೆ ಏರಿಕೆ, 1,520 ಕ್ಕೂ ಹೆಚ್ಚು ಜನರಿಗೆ ಗಾಯ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2023 ರಲ್ಲಿ ಟರ್ಕಿಯಲ್ಲಿ ಸಂಭವಿಸಿದ ಭೂಕಂಪದ ನಂತರ ಕಟ್ಟಡವನ್ನು ಧ್ವಂಸ ಮಾಡುತ್ತಿರುವುದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ವಿವಿಧ ಟರ್ಕಿಶ್ ಸುದ್ದಿ ವೆಬ್‌ಸೈಟ್‌ಗಳಲ್ಲಿ ಇದೇ ದೃಶ್ಯಗಳನ್ನು ಹಾಗೂ ಅದರ ಸ್ಕ್ರೀನ್‌ಶಾಟ್‌ಗಳನ್ನು ಕಂಡುಕೊಂಡೆವು.

ಟರ್ಕಿಯ ಕಹ್ರಾಮನ್ಮರಾಸ್ ನಗರದಲ್ಲಿ ಅಪಾರ್ಟ್ಮೆಂಟ್ ಕಟ್ಟಡವನ್ನು ನಿಯಂತ್ರಿತವಾಗಿ ಕೆಡವುವ ದೃಶ್ಯವನ್ನು ಸೆರೆಹಿಡಿಯುವ ವೀಡಿಯೊವನ್ನು ಅಕ್ಟೋಬರ್ 1, 2023 ರಂದು ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದಾರೆ ಎಂದು ವರದಿಗಳು ವಿವರಿಸಿವೆ. ಆ ವರ್ಷದ ಫೆಬ್ರವರಿ 6 ರಂದು ದೇಶವನ್ನು ಅಪ್ಪಳಿಸಿದ 7.8 ತೀವ್ರತೆಯ ಭೂಕಂಪದ ಸಮಯದಲ್ಲಿ ಕಟ್ಟಡವು ತೀವ್ರವಾಗಿ ಹಾನಿಗೊಳಗಾಯಿತು ಎಂಬ ಮಾಹಿತಿ ಇದರಲ್ಲಿದೆ.

Ensonhaber.com ಕೂಡ ಅಕ್ಟೋಬರ್ 1, 2023 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಜೊತೆ ಸುದ್ದಿ ಪ್ರಕಟಿಸಿದ್ದು, 2023ರ ಭೂಕಂಪದಿಂದ ತೀವ್ರ ಹಾನಿಗೊಳಗಾದ ಟರ್ಕಿಯ ಕಹ್ರಾಮನ್ಮಾರಾಶ್ ನಗರದಲ್ಲಿ ಅಪಾಯಕಾರಿಯಾದ ಕಟ್ಟಡಗಳ ನಿಯಂತ್ರಿತ ಧ್ವಂಸ ಕಾರ್ಯ ಇನ್ನೂ ಮುಂದುವರಿದಿದೆ. ಈ ವೇಳೆ ಒನಿಕಿಶುಬಾತ್ ಜಿಲ್ಲೆಯ ಉಂಗುಟ್ ಪ್ರದೇಶದಲ್ಲಿದ್ದ 15 ಮಹಡಿಯ ಬಾತಿ ಶೆಹಿರ್ ಪಾರ್ಕ್ ವಸತಿ ಕಟ್ಟಡವನ್ನು ನಿಯಂತ್ರಿತವಾಗಿ ನೆಲಸಮಗೊಳಿಸಲಾಯಿತು. ಆದರೆ ಸಾಮಾನ್ಯವಾಗಿ ಒಳಭಾಗಕ್ಕೆ ಕುಸಿಯುವ ಬದಲು, ಕಟ್ಟಡವು ಸಂಪೂರ್ಣವಾಗಿ ಮುಂಭಾಗಕ್ಕೆ ಉರುಳಿದ ಕಾರಣ ಸ್ಥಳದಲ್ಲಿದ್ದ ಜನರು ಕೆಲಕಾಲ ಆತಂಕಕ್ಕೊಳಗಾದರು. ಘಟನೆಯನ್ನು ವೀಕ್ಷಿಸುತ್ತಿದ್ದ ಹಲವರು ಈ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದಾರೆ. ಭೂಕಂಪದ ಬಳಿಕ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಪಾಯಕಾರಿಯಾದ ಕಟ್ಟಡಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಕಾರ್ಯವನ್ನು ಟರ್ಕಿ ಅಧಿಕಾರಿಗಳು ಮುಂದುವರಿಸಿದ್ದಾರೆ ಎಂಬ ಮಾಹಿತಿ ಇದರಲ್ಲಿದೆ.

ಅಕ್ಟೋಬರ್ 1, 2023 ರಂದು ಇಹ್ಲಾಸ್ ನ್ಯೂಸ್ ಏಜೆನ್ಸಿ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಜೊತೆಗೆ ಸುದ್ದಿ ಪ್ರಕಟಿಸಿದ್ದು, ಇದು ಕಟ್ಟಡವು ನಿರೀಕ್ಷೆಗಳಿಗೆ ವಿರುದ್ಧವಾಗಿ ಕುಸಿದಿದ್ದರಿಂದ ಕೆಡವುವಿಕೆಯು ನೋಡುಗರನ್ನು ಸ್ವಲ್ಪ ಸಮಯದವರೆಗೆ ಭಯಭೀತಗೊಳಿಸಿತು ಎಂದು ವರದಿ ಮಾಡಿದೆ. ಸಂಸ್ಥೆಯು ಆ ಗಗನಚುಂಬಿ ಕಟ್ಟಡವನ್ನು ಉಂಗುಟ್ ನೆರೆಹೊರೆಯಲ್ಲಿರುವ 15 ಅಂತಸ್ತಿನ ಬಾತಿ ಶೆಹಿರ್ ಪಾರ್ಕ್ ಕಟ್ಟಡ ಎಂದು ಗುರುತಿಸಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, 2023 ರಲ್ಲಿ ಟರ್ಕಿಯಲ್ಲಿ ಸಂಭಂವಿಸಿದ ಭೂಕಂಪದ ನಂತರ ಅಲ್ಲಿ ಕಟ್ಟಡ ಧ್ವಂಸಗೊಳಿಸುವ ವೀಡಿಯೊವನ್ನು ಸದ್ಯ ವೆನೆಜುವೆಲಾ ಭೂಕಂಪದ ದೃಶ್ಯವೆಂದು ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in