

ವ್ಯಕ್ತಿಯೊಬ್ಬ ಕಿರುಚಾಡುತ್ತ ಅಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರ ಜೊತೆಗೆ ಹಲವಾರು ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಸಹ ಅಳುತ್ತಿರುವುದನ್ನು ಕಾಣಬಹುದು. ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿಗಳ ವಸಾಹತುವಿನಲ್ಲಿ ನಡೆದ ಬುಲ್ಡೋಜರ್ ಕಾರ್ಯಾಚರಣೆಯ ವೀಡಿಯೊ ಇದಾಗಿದೆ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳ: ಅರಣ್ಯ ಇಲಾಖೆಯ ಭೂಮಿಯಲ್ಲಿ ನಿರ್ಮಿಸಲಾದ ಅಕ್ರಮ ಬಾಂಗ್ಲಾದೇಶಿ ವಸಾಹತುಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ಮುಂದುವರೆದಿದೆ. ಬಂಗಾಳದಲ್ಲಿ 15 ವರ್ಷಗಳಿಂದ ಹಿಂದೂಗಳಿಗೆ ಕಿರುಕುಳ ನೀಡುತ್ತಿರುವ ಜಿಹಾದಿಗಳು ಇಂದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಜಿಹಾದಿಗಳು ವೇಶ್ಯೆಯರಂತೆ ಅಳುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊಗೂ ಪಶ್ಚಿಮ ಬಂಗಾಳಕ್ಕೂ ಯಾವುದೇ ಸಂಬಂಧವಿಲ್ಲ. ಇದು ಬಾಂಗ್ಲಾದೇಶದ ಮೀರ್ಪುರದಲ್ಲಿ ಅಕ್ರಮ ಅತಿಕ್ರಮಣಗಳ ವಿರುದ್ಧ ಕೈಗೊಂಡ ಕ್ರಮದ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ "ಖಾನ್ ವಸ್ತ್ರ" ಎಂಬ ಅಂಗಡಿಯನ್ನು ಕಾಣಬಹುದು. ಬಂಗಾಳಿ ಭಾಷೆಯಲ್ಲಿ ವಿಳಾಸ: ಮಿರ್ಪುರ್, ಬಾಂಗ್ಲಾದೇಶ ಎಂದಿದೆ. ಅಲ್ಲದೆ ಬಾಂಗ್ಲಾದೇಶದ ಸುದ್ದಿ ಸಂಸ್ಥೆ "ಕಲೇರ್ ಕಾಂತೋ ಡಿಜಿಟಲ್" ನ ಮೈಕ್ರೊಫೋನ್ ಅನ್ನು ಸಹ ವೀಡಿಯೊದಲ್ಲಿ ಕಾಣಬಹುದು.
ಬಳಿಕ ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಈ ಘಟನೆಯ ಸಂಪೂರ್ಣ ಲೈವ್ ವೀಡಿಯೊ 'ಕಲೇರ್ ಕಾಂತೋ ಡಿಜಿಟಲ್' ನ ಫೇಸ್‌ಬುಕ್ ಪುಟದಲ್ಲಿರುವುದು ಕಂಡುಬಂತು. ಮೇ 20 ರ ಈ ಲೈವ್ ವೀಡಿಯೊದಲ್ಲಿ, ಭಾರೀ ಪೊಲೀಸ್ ಭದ್ರತೆಯ ಸಮ್ಮುಖದಲ್ಲಿ ರಸ್ತೆ ಬದಿಯ ಅಂಗಡಿಗಳನ್ನು ಕೆಡವಲಾಗುತ್ತಿರುವುದನ್ನು ತೋರಿಸಲಾಗಿದೆ.
ವರದಿಯ ಪ್ರಕಾರ, ಈ ಘಟನೆ ಬಾಂಗ್ಲಾದೇಶದ ಮಿರ್ಪುರದಲ್ಲಿ ನಡೆದಿದ್ದು, ಬೌನಿಯಾಬಾದ್ ಕೊಳೆಗೇರಿ ಪ್ರದೇಶದಲ್ಲಿ ಅಕ್ರಮ ಅತಿಕ್ರಮಣಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡರು. ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಮತ್ತು ನಿವಾಸಿಗಳ ನಡುವೆ ಘರ್ಷಣೆಗಳು ನಡೆದವು. ವೈರಲ್ ವೀಡಿಯೊದಲ್ಲಿ ಕಂಡುಬರುವ ಜನರನ್ನು ವರದಿಯು ಸಹ ತೋರಿಸುತ್ತದೆ. ಇದರಲ್ಲಿ ಸುಮಾರು 10 ನಿಮಿಷಗಳ ವೀಡಿಯೊ ಇದ್ದು, ವೈರಲ್ ವೀಡಿಯೊದ ಭಾಗವನ್ನು 6 ನಿಮಿಷಗಳ ನಂತರ ಕಾಣಬಹುದು. ವೈರಲ್ ವೀಡಿಯೊದಲ್ಲಿ ಅಳುವ ಅದೇ ವ್ಯಕ್ತಿ ಮತ್ತು ಮಕ್ಕಳನ್ನು ಇಲ್ಲೂ ಕಾಣಬಹುದು.
ಮೇ 20 ರಂದು ಪ್ರೋಥೊಮಾಲೊ ವರದಿ ಮಾಡಿದ ಪ್ರಕಾರ, ಆ ಪ್ರದೇಶದಲ್ಲಿನ ಸರ್ಕಾರಿ ಭೂಮಿಯಿಂದ ಅಕ್ರಮ ಒತ್ತುವರಿಗಳನ್ನು ತೆಗೆದುಹಾಕಲು ಆಡಳಿತವು ಈ ಕ್ರಮ ಕೈಗೊಂಡಿತ್ತು. ಈ ದಾಳಿಯ ಸಮಯದಲ್ಲಿ, ಕೆಲವು ಪೊಲೀಸ್ ಅಧಿಕಾರಿಗಳು ಸ್ಥಳೀಯರಿಂದ ಗಾಯಗೊಂಡರು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪಶ್ಚಿಮ ಬಂಗಾಳದಲ್ಲಿ ಅಕ್ರಮ ಬಾಂಗ್ಲಾದೇಶಿ ವಸಾಹತುಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಬಾಂಗ್ಲಾದೇಶದಿಂದ ಬಂದಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.