Fact Check: ಹಿಂದೂ ಮಹಿಳೆಯೊಂದಿಗೆ ಶಾಪಿಂಗ್‌ ಬರುವ ಮುಸ್ಲಿಂ ಪುರುಷರಿಗೆ ಶೇ. 10-50 ರಷ್ಟು ಡಿಸ್ಕೌಂಟ್: ವೈರಲ್ ಪೋಸ್ಟ್​ನ ನಿಜಾಂಶ ಇಲ್ಲಿದೆ

ಹಿಂದೂ ಮಹಿಳೆಯರೊಂದಿಗೆ ಶಾಪಿಂಗ್‌ಗೆ ಬರುವ ಮುಸ್ಲಿಂ ಪುರುಷರಿಗೆ ಶೇಕಡಾ 10 ರಿಂದ 50 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಬ್ಯಾನರ್‌ನ ಮೇಲೆ ಬರೆಯಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗುತ್ತಿದೆ.
Fact Check: ಹಿಂದೂ ಮಹಿಳೆಯೊಂದಿಗೆ ಶಾಪಿಂಗ್‌ ಬರುವ ಮುಸ್ಲಿಂ ಪುರುಷರಿಗೆ ಶೇ. 10-50 ರಷ್ಟು ಡಿಸ್ಕೌಂಟ್: ವೈರಲ್ ಪೋಸ್ಟ್​ನ ನಿಜಾಂಶ ಇಲ್ಲಿದೆ
Published on
2 min read

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ನ ಫೋಟೋ ಒಂದು ಹಂಚಿಕೊಳ್ಳಲಾಗುತ್ತಿದ್ದು, ಇದು ಕರ್ನಾಟಕದ ಮಾಲ್‌ನ ಬ್ಯಾನರ್ ಎಂದು ಹೇಳಲಾಗುತ್ತಿದೆ. ಈ ಬ್ಯಾನರ್‌ನ ಮೇಲೆ ಸೀರೆಯನ್ನು ಧರಿಸಿದ ಮಹಿಳೆ ಮತ್ತು ಅವಳ ಪಕ್ಕದಲ್ಲಿ ಇಸ್ಲಾಮಿಕ್ ಕ್ಯಾಪ್ ಧರಿಸಿದ ವ್ಯಕ್ತಿ ನಿಂತಿದ್ದಾರೆ. ಜೊತೆಗೆ ಹಿಂದೂ ಮಹಿಳೆಯರೊಂದಿಗೆ ಶಾಪಿಂಗ್‌ಗೆ ಬರುವ ಮುಸ್ಲಿಂ ಪುರುಷರಿಗೆ ಶೇಕಡಾ 10 ರಿಂದ 50 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಬ್ಯಾನರ್‌ನ ಮೇಲೆ ಬರೆಯಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗುತ್ತಿದೆ.

ಫೇಸ್‌ಬುಕ್ ಬಳಕೆದಾರರೊಬ್ಬರು ಈ ಪೋಸ್ಟರ್‌ನ ಚಿತ್ರವನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ, ‘‘ಹಿಂದೂ ಹುಡುಗಿ/ಮಹಿಳೆಯೊಂದಿಗೆ ಯಾವುದೇ ಮುಸ್ಲಿಂ ಪುರುಷನು ಶೇ. 10 ರಿಂದ 50 ರಷ್ಟು ರಿಯಾಯಿತಿಯನ್ನು ಪಡೆಯುತ್ತಾನೆ ಎಂದು ಬೋರ್ಡ್ ಮೇಲೆ ಕನ್ನಡದಲ್ಲಿ ಬರೆಯಲಾಗಿದೆ. ಲವ್ ಜಿಹಾದ್‌ಗೆ ಇದಕ್ಕಿಂತ ಹೆಚ್ಚಿನ ಮುಕ್ತ ಆಹ್ವಾನವನ್ನು ನಾನು ನೋಡಿಲ್ಲ".

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಪೋಸ್ಟರ್ ಕರ್ನಾಟಕದ ಯಾವುದೇ ಮಾಲ್‌ನದ್ದಲ್ಲ, ಬದಲಾಗಿ ತೆಲಂಗಾಣದ ಹಳೆಯ ಪೋಸ್ಟರ್ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್ ಲೆನ್ಸ್ ಬಳಸಿ ಫೋಟೋವನ್ನು ಹುಡುಕಿದ್ದೇವೆ. ಆಗ ಪೋಸ್ಟರ್‌ನಲ್ಲಿ ತೆಲುಗು ಭಾಷೆ ಬರೆದಿರುವುದು ಗೊತ್ತಾಗಿದೆ. ಈ ಅಕ್ಷರವನ್ನು ಕಾಪಿ ಮಾಡಿ ಇಂಗ್ಲಿಷ್​ಗೆ ಅನುವಾದಿಸಿದ್ದೇವೆ. ಇದರಲ್ಲಿ ಮುಸ್ಲಿಂ ಯುವಕರು ಹಿಂದೂ ಹುಡುಗಿಯೊಂದಿಗೆ ಬಂದರೆ ಅವರಿಗೆ ರಿಯಾಯಿತಿ ನೀಡಲಾಗುವುದು ಎಂದು ಬರೆದಿಲ್ಲ. ಬದಲಿಗೆ ರಂಜಾನ್‌ಗೆ 10 ರಿಂದ 50 ಪ್ರತಿಶತದಷ್ಟು ರಿಯಾಯಿತಿಯನ್ನು ಘೋಷಿಸುತ್ತಿದ್ದೇವೆ. ಮೇ 20 ರಿಂದ ಜೂನ್ 5 ರವರೆಗೆ ರಿಯಾಯಿತಿ ಲಭ್ಯವಿರುತ್ತದೆ ಎಂದು ಬ್ಯಾನರ್​​​ನಲ್ಲಿದೆ.

ತೆಲುಗಿನ ಬ್ಯಾನರ್​ನ ಕೆಳಗೆ ತೆಲಂಗಾಣದ CMR ಶಾಪಿಂಗ್ ಮಾಲ್‌ನ ವಿವಿಧ ಶಾಖೆಗಳ ಹೆಸರುಗಳನ್ನು ಬರೆಯಲಾಗಿದೆ. ಸಿಕಂದರಾಬಾದ್, ಮಲ್ಕಾಜ್‌ಗಿರಿ, ಸಿದ್ದಿಪೇಟೆ ಮತ್ತು ಮಹಬೂಬ್‌ನಗರದ ಮಂಜು ಥಿಯೇಟರ್ ಬಳಿಯ ಪಟ್ನಿ ಸೆಂಟರ್‌ನಲ್ಲಿರುವ ಸಿಎಂಆರ್ ಶಾಖೆಗಳ ಬಗ್ಗೆ ಬ್ಯಾನರ್‌ನಲ್ಲಿ ಮಾಹಿತಿ ಇತ್ತು. ಮಾಲ್‌ಗೆ ಮುಸ್ಲಿಂ ಯುವಕರೊಂದಿಗೆ ಹಿಂದೂ ಹುಡುಗಿಯರು ಬಂದರೆ ರಿಯಾಯಿತಿ ನೀಡಲಾಗುವುದು ಎಂದು ಬೋರ್ಡ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.

ಗೂಗಲ್​​ನ ರಿವರ್ಸ್ ಸರ್ಚ್ ಇಮೇಜ್ ಟೂಲ್ ಅನ್ನು ಬಳಸಿಕೊಂಡು ಹುಡುಕಿದಾಗ, ಈ ಫೋಟೋಗೆ ಸಂಬಂಧಿಸಿದಂತೆ 2019 ರ ಹಲವಾರು ಸುದ್ದಿಗಳನ್ನು ನಾವು ಕಂಡುಕೊಂಡಿದ್ದೇವೆ. ವರದಿಗಳ ಪ್ರಕಾರ, ಈ ಬ್ಯಾನರ್ ತೆಲಂಗಾಣದಿಂದ ಬಂದಿದ್ದು, ತೆಲಂಗಾಣ ವಿಧಾನಸಭೆ ಸದಸ್ಯ ರಾಜಾ ಸಿಂಗ್ ಅವರು ಸಿಎಂಆರ್ ಶಾಪಿಂಗ್ ಮಾಲ್‌ನ ಈ ವಿವಾದಾತ್ಮಕ ಬ್ಯಾನರ್ ಅನ್ನು ಖಂಡಿಸಿರುವುದು ನಮಗೆ ಸಿಕ್ಕಿದೆ.

ಅಲ್ಲದೆ ಈ ವಿಚಾರದ ಬಗ್ಗೆ 31 ಮೇ 2019 ರಂದು CMR ತೆಲಂಗಾಣ ಶಾಪಿಂಗ್ ಮಾಲ್ ಕ್ಷಮೆ ಕೇಳಿದ ಪೋಸ್ಟ್ ಕೂಡ ನಮಗೆ ಸಿಕ್ಕಿದೆ. ಸಿಎಂಆರ್ ಶಾಪಿಂಗ್ ಮಾಲ್ ಹೊರಡಿಸಿದ ಹೇಳಿಕೆಯಲ್ಲಿ, ‘‘ಇಡೀ ಸಿಎಂಆರ್ ತೆಲಂಗಾಣ ಸಮೂಹದ ಪರವಾಗಿ, ನಾವು ತಪ್ಪಿಗಾಗಿ ಕ್ಷಮೆಯಾಚಿಸುತ್ತೇವೆ. ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವ ಅಥವಾ ಯಾವುದೇ ತಾರತಮ್ಯವನ್ನು ಸೃಷ್ಟಿಸುವ ಉದ್ದೇಶ ನಮಗಿಲ್ಲ. ನಾವು ಎಲ್ಲಾ ಧರ್ಮಗಳನ್ನು- ಸಮುದಾಯವನ್ನು ಬೆಂಬಲಿಸುತ್ತೇವೆ ಮತ್ತು ಗೌರವಿಸುತ್ತೇವೆ. ಎಲ್ಲಾ ಬ್ಯಾನರ್​ಗಳನ್ನು ತೆಗೆದುಹಾಕಲಾಗಿದೆ ಮತ್ತು ಭವಿಷ್ಯದಲ್ಲಿ ಇಂತಹದ್ದೇನೂ ಪುನರಾವರ್ತನೆಯಾಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ.’’ ಎಂದು ಬರೆದುಕೊಂಡಿದೆ.

ಹೀಗಾಗಿ ಸೌತ್ ಚೆಕ್ ತನ್ನ ತನಿಖೆಯಲ್ಲಿ ಈ ಬ್ಯಾನರ್ ಕರ್ನಾಟಕದದ್ದಲ್ಲ ಎಂದು ಕಂಡುಹಿಡಿದಿದೆ. ತೆಲಂಗಾಣದ ಹಳೆಯ ಫೋಟೋವನ್ನು ಕರ್ನಾಟಕದ್ದು ಎಂದು ಸುಳ್ಳು ಹೇಳಿಕೆಯೊಂದಿಗೆ ವೈರಲ್ ಮಾಡಲಾಗುತ್ತಿದೆ. ಜೊತೆಗೆ ಹಿಂದೂ ಯುವತಿಯರು ಮುಸ್ಲಿಂ ಯುವಕರೊಂದಿಗೆ ಮಾಲ್‌ಗೆ ಬಂದರೆ ರಿಯಾಯಿತಿ ನೀಡಲಾಗುವುದು ಎಂದು ಕೂಡ ಬೋರ್ಡ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

Related Stories

No stories found.
logo
South Check
southcheck.in