
ಎರಡು ಆಘಾತಕಾರಿಯಾಗಿ ಕಿಕ್ಕಿರಿದು ತುಂಬಿದ್ದ ರೈಲುಗಳು, ಒಂದು ಸೇತುವೆಯ ಕೆಳಗೆ ಮತ್ತು ಇನ್ನೊಂದು ಸೇತುವೆಯ ಮೇಲೆ ಹಾದುಹೋಗುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಪಾಕಿಸ್ತಾನದಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ರೈಲುಗಳನ್ನು ನೋಡಿದಾಗ ಇದರಲ್ಲಿ ಜನರು ತುಂಬಿ ತುಳುಕುತ್ತಿರುವುದನ್ನು ಕಾಣಬಹುದು, ಜನರು ಛಾವಣಿಗಳ ಮೇಲೆ ಕುಳಿತು, ಬಾಗಿಲುಗಳಲ್ಲಿ ನೇತಾನಡಿಕೊಂಡಿದ್ದಾರೆ. ‘‘ವಿಶ್ವದ ಸೂಪರ್ ಪವರ್ ದೇಶ ಪಾಕಿಸ್ತಾನಿ ರೈಲ್ವೆ ಪರಿಸ್ಥಿತಿ ಹೇಗಿದೆ ನೋಡಿ’’ ಎಂದು ಫೇಸ್ಬುಕ್ ಬಳಕೆದಾರರೊಬ್ಬರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಪಾಕಿಸ್ತಾನಕ್ಕೆ ಸಂಬಂಧಪಟ್ಟ ವೀಡಿಯೊ ಅಲ್ಲ ಬದಲಾಗಿ ಬಾಂಗ್ಲಾದೇಶದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಏಪ್ರಿಲ್ 2024 ರ ಹಲವಾರು ಸುದ್ದಿ ವರದಿಗಳು ನಮಗೆ ಸಿಕ್ಕವು. ಏಪ್ರಿಲ್ 14, 2024 ರ NDTV ವರದಿಯ ಪ್ರಕಾರ, ಈದ್ ಹಬ್ಬದ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಎರಡು ಕಿಕ್ಕಿರಿದ ರೈಲುಗಳು ವೀಡಿಯೊದಲ್ಲಿ ಕಂಡುಬರುತ್ತವೆ.
ಏಪ್ರಿಲ್ 14, 2024 ರಂದು ನವಭಾರತ್ ಟೈಮ್ಸ್ ಸೇರಿದಂತೆ ಹಲವಾರು ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳು ಈ ವೀಡಿಯೊವನ್ನು ವರದಿ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ವರದಿಯ ಪ್ರಕಾರ, ಈ ವೀಡಿಯೊ ಬಾಂಗ್ಲಾದೇಶದಿಂದ ಬಂದಿದೆ, ಅಲ್ಲಿ ಈದ್ ಉಲ್-ಫಿತರ್‌ಗಾಗಿ ತಮ್ಮ ಹಳ್ಳಿಗಳಿಗೆ ಹಿಂತಿರುಗಲು ಮುಂಗಡ ಬುಕ್ಕಿಂಗ್ ಪಡೆಯಲು ಸಾಧ್ಯವಾಗದ ಪ್ರಯಾಣಿಕರು ರೈಲುಗಳ ಮೇಲೆ ಕುಳಿತುಕೊಂಡು ಸಾಗಿದರು ಎಂಬ ಮಾಹಿತಿ ಇದೆ. ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಅನೇಕ ಮಾಧ್ಯಮ ಇದೇ ವರದಿಯನ್ನು ಪ್ರಕಟಿಸಿರುವುದು ಇಲ್ಲಿ, ಇಲ್ಲಿ ನೋಡಬಹುದು.
ಸ್ಟಾಕ್ ಫೋಟೋ ವೆಬ್‌ಸೈಟ್ ಅಲಾಮಿಯಲ್ಲಿರುವ ಬಾಂಗ್ಲಾದೇಶದ ರೈಲುಗಳ ಛಾಯಾಚಿತ್ರದ ಪ್ರಕಾರ, ವೈರಲ್ ವೀಡಿಯೊದಲ್ಲಿನ ರೈಲು ದೃಶ್ಯವು ಬಾಂಗ್ಲಾದೇಶದ ರೈಲಿನ ಚಿತ್ರದೊಂದಿಗೆ ಹೊಂದಿಕೆಯಾಗುತ್ತದೆ, ಇದು ಅದರ ಮೂಲವನ್ನು ಮತ್ತಷ್ಟು ದೃಢಪಡಿಸುತ್ತದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನದ ರೈಲಿನ ಪರಿಸ್ಥಿತಿ ಎಂದು ವೈರಲ್ ಆಗುತ್ತಿರುವ ವೀಡಿಯೊ ಬಾಂಗ್ಲಾದೇಶದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.