Fact Check: ಟ್ರಕ್‌ನ ಮುಂದೆ ಹಾರಿ ಮಗುವಿನ ಜೀವ ಉಳಿಸಿದ ಡೆಲಿವರಿ ಬಾಯ್‌? ಸುಳ್ಳು, ಸತ್ಯ ಇಲ್ಲಿದೆ

ಟ್ರಕ್‌ನ ಮುಂದೆ ಹಾರಿ ಮಗುವಿನ ಜೀವ ಉಳಿಸುವ ಡೆಲಿವರಿ ಬಾಯ್‌ನ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಡೆಲಿವರಿ ಬಾಯ್ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್‌ನ ಮುಂದೆ ತನ್ನ ಜೀವವನ್ನೇ ಪಣಕ್ಕಿಟ್ಟು ಹಾರುತ್ತಾನೆ ಮತ್ತು ಒಂದು ಪುಟ್ಟ ಮಗುವನ್ನು ಸುರಕ್ಷಿತವಾಗಿ ರಕ್ಷಿಸುತ್ತಾನೆ.
Fact Check: ಟ್ರಕ್‌ನ ಮುಂದೆ ಹಾರಿ ಮಗುವಿನ ಜೀವ ಉಳಿಸಿದ ಡೆಲಿವರಿ ಬಾಯ್‌? ಸುಳ್ಳು, ಸತ್ಯ ಇಲ್ಲಿದೆ
Published on
2 min read

ಟ್ರಕ್‌ನ ಮುಂದೆ ಹಾರಿ ಮಗುವಿನ ಜೀವ ಉಳಿಸುವ ಡೆಲಿವರಿ ಬಾಯ್‌ನ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಡೆಲಿವರಿ ಬಾಯ್ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್‌ನ ಮುಂದೆ ತನ್ನ ಜೀವವನ್ನೇ ಪಣಕ್ಕಿಟ್ಟು ಹಾರುತ್ತಾನೆ ಮತ್ತು ಒಂದು ಪುಟ್ಟ ಮಗುವನ್ನು ಸುರಕ್ಷಿತವಾಗಿ ರಕ್ಷಿಸುತ್ತಾನೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮಗುವಿನ ಜೀವ ಉಳಿಸಿದ ಡೆಲಿವರಿ ಬಾಯ್!. ಪಾಲ್ಘರ್‌ನಲ್ಲಿ ಹೃದಯಸ್ಪರ್ಶಿ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ರಸ್ತೆ ದಾಟುತ್ತಿದ್ದ ಮಗುವಿನ ಕಡೆಗೆ ವೇಗವಾಗಿ ಟ್ರಕ್ ಬರುತ್ತಿರುವುದು ಕಾಣಿಸುತ್ತದೆ. ಅಷ್ಟರಲ್ಲೇ ಅಲ್ಲಿದ್ದ ಡೆಲಿವರಿ ಬಾಯ್ ಕ್ಷಣಾರ್ಧದಲ್ಲಿ ಚುರುಕಾಗಿ ಪ್ರತಿಕ್ರಿಯಿಸಿ ಮಗುವನ್ನು ಸುರಕ್ಷಿತವಾಗಿ ಎಳೆದು ಅಪಾಯದಿಂದ ಪಾರು ಮಾಡುತ್ತಾನೆ. ಈ ದೃಶ್ಯ ಕಂಡು ಸ್ಥಳದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಡೆಲಿವರಿ ಬಾಯ್‌ನ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನಿಜವಾಗಿ ನಡೆದ ಘಟನೆ ಅಲ್ಲ, ಬದಲಾಗಿ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್‌ನಲ್ಲಿ ಹುಡುಕಿದೆವು. ಈ ವೇಳೆ, ಇಂತಹ ಘಟನೆಗೆ ಸಂಬಂಧಿಸಿದ ಯಾವುದೇ ವರದಿ ವಿಶ್ವಾಸಾರ್ಹ ಸುದ್ದಿವಾಹಿನಿ ಅಥವಾ ಸುದ್ದಿ ವೆಬ್‌ಸೈಟ್‌ಗಳಲ್ಲಿ ಕಂಡುಬರಲಿಲ್ಲ. ಅಲ್ಲದೆ, ಸಂಬಂಧಿತ ಕೀವರ್ಡ್‌ಗಳ ಮೂಲಕ ಹುಡುಕಿದಾಗಲೂ ಯಾವುದೇ ವಿಶ್ವಾಸಾರ್ಹ ವರದಿ ಸಿಗಲಿಲ್ಲ.

ಪರಿಶೀಲನೆಯ ವೇಳೆ ai_nature_of_beauty_01 ಎಂಬ ಇನ್‌ಸ್ಟಾಗ್ರಾಂ ಬಳಕೆದಾರರ ಖಾತೆಯಲ್ಲಿ ಜುಲೈ 12ರಂದು ಈ ವೀಡಿಯೊ ಅಪ್‌ಲೋಡ್ ಮಾಡಿರುವುದು ಕಂಡುಬಂತು. ವಿಡಿಯೋದ ಶೀರ್ಷಿಕೆಯಲ್ಲಿ ವಿಶೇಷ ಮಾಹಿತಿ ನೀಡಲಾಗಿಲ್ಲ. ಆದರೆ ಆ ಖಾತೆಯನ್ನು ಪರಿಶೀಲಿಸಿದಾಗ, ಇದೇ ರೀತಿಯ ಅನೇಕ AI ಮೂಲಕ ರಚಿಸಲಾದ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂಬುದು ಗೊತ್ತಾಯಿತು.

ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, AI ನಿರ್ಮಿತ ವೀಡಿಯೊಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಲವು ದೋಷಗಳು ಇದಲ್ಲಿಯೂ ಕಂಡುಬಂದವು. ಉದಾಹರಣೆಗೆ, ವೀಡಿಯೊದ ಹಿನ್ನೆಲೆ ಅಸಹಜವಾಗಿ ಮಸುಕಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳ ವೇಗವೂ ನೈಜವಾಗಿ ಕಾಣಿಸುವುದಿಲ್ಲ. ರಸ್ತೆಯಲ್ಲಿ ಸಾಗುತ್ತಿರುವ ಇತರೆ ವಾಹನಗಳ ನಂಬರ್ ಪ್ಲೇಟ್‌ಗಳು ಸಂಪೂರ್ಣವಾಗಿ ಬ್ಲರ್ ಆಗಿವೆ ಮತ್ತು ಬೈಕ್ ಸವಾರರ ಮುಖಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ವೀಡಿಯೊದ ಕೊನೆಯ ಭಾಗದಲ್ಲಿ, ಡೆಲಿವರಿ ಬಾಯ್ ಮಗುವನ್ನು ಎತ್ತಿಕೊಂಡು ರಸ್ತೆಗೆ ಬೀಳುವಾಗ ಮಗುವಿನ ದೇಹದ ಒಂದು ಭಾಗ ಟ್ರಕ್‌ನ ಚಕ್ರಗಳಿಗೆ ಅತ್ಯಂತ ಸಮೀಪದಲ್ಲಿದ್ದರೂ ಯಾವುದೇ ಹಾನಿಯಾಗುವುದಿಲ್ಲ.

ಹೀಗಾಗಿ ನಾವು ಈ ವೀಡಿಯೊವನ್ನು Hive Moderation AI ಡಿಟೆಕ್ಷನ್ ಟೂಲ್‌ನಲ್ಲಿ ಪರೀಕ್ಷಿಸಿದೆವು. ಈ ಟೂಲ್ ತನ್ನ ವಿಶ್ಲೇಷಣೆಯಲ್ಲಿ 96.1 ಶೇಕಡಾ ಸ್ಕೋರ್‌ನೊಂದಿಗೆ ವೈರಲ್ ವೀಡಿಯೊ AI ಮೂಲಕ ರಚಿಸಲ್ಪಟ್ಟಿರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಹಾಗೆಯೆ ಸೈಟ್​ಎಂಜಿನ್​ನಲ್ಲಿ ಪರೀಕ್ಷಿಸಿದಾಗ ಇದು ಕೂಡ ಈ ವೀಡಿಯೊ ಶೇ. 98 ರಷ್ಟು ಎಐಯಿಂದ ಕೂಡಿದೆ ಎಂದು ಹೇಳಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಟ್ರಕ್‌ನ ಮುಂದೆ ಹಾರಿ ಮಗುವಿನ ಜೀವ ಉಳಿಸಿದ ಡೆಲಿವರಿ ಬಾಯ್‌ನ ವೈರಲ್ ವೀಡಿಯೊ ನೈಜ ಘಟನೆಯದ್ದಲ್ಲ. ಇದು AI ಮೂಲಕ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in