Fact Check: 154 ವರ್ಷದ ಸನ್ಯಾಸಿಯೊಬ್ಬರು ಹಿಮಾಲಯದಿಂದ ಮಹಾ ಕುಂಭಮೇಳಕ್ಕೆ ಬಂದಿದ್ದಾರಾ?

ಹಿರಿಯ ಸ್ವಾಮೀಜಿಯೊಬ್ಬರಿಗೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸ್ವಾಮೀಜಿಗೆ 154 ವರ್ಷ ಎಂದು ಹೇಳಲಾಗುತ್ತಿದ್ದು, ಮಹಾಕುಂಭಮೇಳದಲ್ಲಿ ಭಾಗವಹಿಸಲು ಹಿಮಾಲಯದಿಂದ ಬಂದಿದ್ದಾರೆ ಎಂದು ಪೋಸ್ಟ್‌ ವೈರಲ್ ಆಗುತ್ತಿದೆ.
Fact Check: 154 ವರ್ಷದ ಸನ್ಯಾಸಿಯೊಬ್ಬರು ಹಿಮಾಲಯದಿಂದ ಮಹಾ ಕುಂಭಮೇಳಕ್ಕೆ ಬಂದಿದ್ದಾರಾ?
Published on
2 min read

ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳ ಅದ್ಧೂರಿಯಾಗಿ ನಡೆಯುತ್ತಿದೆ. ಈ ಕುಂಭಮೇಳಕ್ಕೆ ಪ್ರಪಂಚದಾದ್ಯಂತ ಯೋಗಿಗಳು, ಸ್ವಾಮಿಗಳು, ಸಾಧುಗಳು ಮತ್ತು ಅಘೋರಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನವನ್ನು ಮಾಡಲಾಗುತ್ತದೆ. ಇದರ ಮಧ್ಯೆ ಹಿರಿಯ ಸ್ವಾಮೀಜಿಯೊಬ್ಬರಿಗೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸ್ವಾಮೀಜಿಗೆ 154 ವರ್ಷ ಎಂದು ಹೇಳಲಾಗುತ್ತಿದ್ದು, ಮಹಾಕುಂಭಮೇಳದಲ್ಲಿ ಭಾಗವಹಿಸಲು ಹಿಮಾಲಯದಿಂದ ಬಂದಿದ್ದಾರೆ ಎಂದು ಪೋಸ್ಟ್‌ ವೈರಲ್ ಆಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘154 ವರ್ಷ wow.. ಗ್ರೇಟ್ ನಾಗ ಸಾಧು ಹಿಮಾಲಯದಿಂದ ಇಳಿದು ಕುಂಭ ಮೇಳಕ್ಕೆ ಆಗಮನ’’ ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಸುಮಾರು ಮೂರು ತಿಂಗಳಷ್ಟು ಹಳೆಯದ್ದಾಗಿದೆ. 2025ರ ಕುಂಭಮೇಳಕ್ಕೂ ಇದಕ್ಕು ಯಾವುದೇ ಸಂಬಂಧವಿಲ್ಲ. ಈ ವೀಡಿಯೊದಲ್ಲಿ ಇರುವವರ ಹೆಸರು ಸಂತ ಸಿಯಾರಾಮ್ ಬಾಬಾ. ಅವರು ಡಿಸೆಂಬರ್ 2024 ರಲ್ಲಿ ಮಧ್ಯಪ್ರದೇಶದ ಭಟ್ಟಯನ್ ಭುಜುರ್ಗ್‌ನಲ್ಲಿರುವ ಅವರ ಆಶ್ರಮದಲ್ಲಿ ಶಿವಾಯಕಮ್ ಅನ್ನು ಪಡೆದರು.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಪಡೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಇದೇ ವೈರಲ್ ವೀಡಿಯೊವನ್ನು ಡಿಸೆಂಬರ್ 11, 2024 ರಂದು ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿರುವುದು ಕಂಡುಬಂತು. ‘‘ಸಿಯಾರಾಮ್ ಬಾಬಾ ಇಂದು ಮೋಕ್ಷದ ಏಕಾದಶಿಯ ಶುಭ ದಿನದಂದು ತಮ್ಮ ಸ್ವರ್ಗೀಯ ನಿವಾಸಕ್ಕೆ ತೆರಳಿದರು. ಓಂ ಶಾಂತಿ. ಭಗವಾನ್ ಶ್ರೀ ರಾಮನ ಮೇಲಿನ ಅವರ ಭಕ್ತಿ ಯಾವಾಗಲೂ ನಮ್ಮ ಹೃದಯದಲ್ಲಿರುತ್ತದೆ. ಜೈ ಜೈ ಶ್ರೀ ರಾಮ್’’ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಮಹಾಕುಂಭ ಆರಂಭಕ್ಕೂ ಮುನ್ನವೇ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಇವೇ ಎಂಬುದು ಈ ಮೂಲಕ ಸ್ಪಷ್ಟವಾಯಿತು. ಮಹಾಕುಂಭ ಶುರುವಾಗಿರುವುದು ಜನವರಿ 13, 2025 ರಂದು. ಇದಕ್ಕೂ ಮುನ್ನವೇ ಈ ವೀಡಿಯೊ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಡಿಸೆಂಬರ್​ನಲ್ಲಿ ಇದೇ ವೀಡಿಯೊವನ್ನು ಹಂಚಿಕೊಂಡು ಸಿಯಾರಾಮ್ ಬಾಬಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವುದು ನಮಗೆ ಕಂಡುಬಂದಿದೆ. ಇದೇವೇಳೆ ನಮಗೆ ಈ ವೀಡಿಯೊದ ಮೂಲ ಆವೃತ್ತಿಯೂ ಸಿಕ್ಕಿತು. ಬ್ಲಾಗರ್ ಆಗಿರುವ ವಿಕೆನ್ ಕುಶ್ವಾ ಎಂಬವರು ಈ ವೀಡಿಯೊವನ್ನು 11 ಅಕ್ಟೋಬರ್ 2024 ರಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಕೆನ್ ಕುಶ್ವಾ ಅವರ ಪ್ರೊಫೈಲ್‌ನಲ್ಲಿ ಸಿಯಾರಾಮ್ ಬಾಬಾ ಅವರ ಅನೇಕ ವೀಡಿಯೊಗಳಿವೆ.

ಇನ್ನು ಇವರ ನಿಧನದ ಸುದ್ದಿಯನ್ನು ಖಚಿತ ಪಡಿಸಿಕೊಳ್ಳಲು ಸಂಬಂಧಪಟ್ಟ ಕೀವರ್ಡ್ ಮೂಲಕ ಗೂಗಲ್​ನಲ್ಲಿ ಸರ್ಚ್ ಮಾಡಿದ್ದೇವೆ. ಆಗ The Economic Times ಡಿಸೆಂಬರ್ 11, 2024 ರಂದು ‘‘ಸಿಯಾರಾಮ್ ಬಾಬಾ ಅವರು 95 ರಲ್ಲಿ ಮೋಕ್ಷದ ಏಕಾದಶಿ ಮತ್ತು ಗೀತಾ ಜಯಂತಿಯಂದು ನಿಧನರಾದರು’’ ಎಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಭಗವಾನ್ ಹನುಮಾನ್ ಮತ್ತು ನರ್ಮದಾ ನದಿಯ ಮೇಲಿನ ಭಕ್ತಿಗೆ ಹೆಸರುವಾಸಿಯಾದ ಪೂಜ್ಯ ಆಧ್ಯಾತ್ಮಿಕ ವ್ಯಕ್ತಿ ಸಿಯಾರಾಮ್ ಬಾಬಾ ಅವರು ಬುಧವಾರ 95 ನೇ ವಯಸ್ಸಿನಲ್ಲಿ ನಿಧನರಾದರು. ಭಟ್ಟಯನ್ ಬುಜುರ್ಗ್‌ನಲ್ಲಿರುವ ಅವರ ಆಶ್ರಮದಲ್ಲಿ ಬೆಳಿಗ್ಗೆ 6:10 ಕ್ಕೆ ಕೊನೆಯುಸಿರೆಳೆದರು. ಕಳೆದ ಹತ್ತು ದಿನಗಳಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಆರಂಭದಲ್ಲಿ ಸನವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದಾಗ್ಯೂ, ಆಧ್ಯಾತ್ಮಿಕ ನಾಯಕನು ತಾನು ಆಶ್ರಮಕ್ಕೆ ಮರಳಿ ಅಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರಿಂದ ಆರೈಕೆ ಪಡೆಯುತ್ತಿದ್ದರು’’ ಎಂದು ಬರೆಯಲಾಗಿದೆ.

Money Control ಕೂಡ ಡಿಸೆಂಬರ್ 11, 2024 ರಂದು, ಸಂತ ಸಿಯಾರಾಮ್ ಬಾಬಾ 11 ಡಿಸೆಂಬರ್ 2024 ರಂದು ಮೋಕ್ಷ ಏಕಾದಶಿಯಂದು ನಿಧನರಾದರು ಎಂದು ಸುದ್ದಿ ಪ್ರಕಟಿಸಿದೆ. ಅವರು ಮಧ್ಯಪ್ರದೇಶದ ನರ್ಮದಾ ನದಿಯ ದಡದಲ್ಲಿರುವ ಭಟ್ಟಯಾನ್ ಭುಜುರ್ಗ್‌ನಲ್ಲಿರುವ ತಮ್ಮ ಆಶ್ರಮದಲ್ಲಿ ತಂಗುತ್ತಿದ್ದರು. ಆದರೆ.. ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಅವರ ವಯಸ್ಸು 154 ವರ್ಷ ಎಂದು ಯಾವುದೇ ಸುದ್ದಿ ಲೇಖನವೂ ಉಲ್ಲೇಖಿಸಿಲ್ಲ. ಅವರ ವಯಸ್ಸು 95 ಎಂದು ಬರೆಯಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ 154 ವರ್ಷದ ಸನ್ಯಾಸಿಯೊಬ್ಬರು ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಹಿಮಾಲಯದಿಂದ ಬಂದಿದ್ದರು ಎಂಬ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Related Stories

No stories found.
logo
South Check
southcheck.in