Fact Check: ದೀಪು ದಾಸ್ ಹತ್ಯೆಯ ಆರೋಪಿ ವಿದ್ಯುತ್ ತಂತಿ ಮೇಲೆ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆ? ಸುಳ್ಳು, ಸತ್ಯ ಇಲ್ಲಿದೆ

ದೀಪು ದಾಸ್ ಅವರ ಹತ್ಯೆಯ ಪ್ರಮುಖ ಆರೋಪಿ ಹಸನ್ ಶಹದತ್ ವಿದ್ಯುತ್ ತಂತಿಯ ಮೇಲೆ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಹೇಳಿಕೊಂಡು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
Fact Check: ದೀಪು ದಾಸ್ ಹತ್ಯೆಯ ಆರೋಪಿ ವಿದ್ಯುತ್ ತಂತಿ ಮೇಲೆ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆ? ಸುಳ್ಳು, ಸತ್ಯ ಇಲ್ಲಿದೆ
Published on
2 min read

ಡಿಸೆಂಬರ್ 2025 ರಲ್ಲಿ, ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯ ಭಾಲುಕಾದಲ್ಲಿ ಗಾರ್ಮೆಂಟ್ಸ್ ಕೆಲಸಗಾರ ದೀಪು ಚಂದ್ರ ದಾಸ್ ಅವರನ್ನು ಥಳಿಸಿ ಸುಟ್ಟು ಹಾಕಲಾಯಿತು. ಈ ಕೊಲೆ ಬಾಂಗ್ಲಾದೇಶ ಮತ್ತು ಭಾರತ ಸೇರಿದಂತೆ ಜಗತ್ತನ್ನು ಬೆಚ್ಚಿಬೀಳಿಸಿತು. ಇದೀಗ, ದೀಪು ದಾಸ್ ಅವರ ಹತ್ಯೆಯ ಪ್ರಮುಖ ಆರೋಪಿ ಹಸನ್ ಶಹದತ್ ವಿದ್ಯುತ್ ತಂತಿಯ ಮೇಲೆ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಹೇಳಿಕೊಂಡು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ತಂತಿಯ ಮೇಲೆ ಅರ್ಧ ಮತ್ತು ಪಕ್ಕದ ಛಾವಣಿಯ ಮೇಲೆ ಅರ್ಧ ಬಿದ್ದಿರುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ದೀಪು ದಾಸ್ ಅವರ ಹತ್ಯೆ ನೆನಪಿದೆಯೇ?. ಹತ್ಯೆಯ ಪ್ರಮುಖ ಆರೋಪಿ ಹಸನ್ ಸಹದತ್ ಇಂದು ವಿದ್ಯುತ್ ತಂತಿಗೆ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಪರಿಚಿತ ಸಹೋದರರೇ, ಈ ಭಯವನ್ನು ಸೃಷ್ಟಿಸಿದ್ದಕ್ಕಾಗಿ ಮತ್ತು ನ್ಯಾಯವನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಬಾಂಗ್ಲಾದೇಶದ ಪಬ್ನಾದಲ್ಲಿ ಇತ್ತೀಚೆಗೆ ನಡೆದ ಅಪಘಾತದ್ದಾಗಿದ್ದು, ದೀಪು ದಾಸ್ ಹತ್ಯೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ, ಇದೇ ಘಟನೆಯ ಫೋಟೋ ಬಾಂಗ್ಲಾದ ಸ್ಥಳೀಯ ಮಾಧ್ಯಮ ಪಬ್ನಾ ಮೀಡಿಯಾ ಫೇಸ್‌ಬುಕ್ ಪುಟದಲ್ಲಿ ಜೂನ್ 18 ರಂದು ಹಂಚಿಕೊಂಡಿರುವುದು ಕಂಡುಬಂದಿದೆ.

ಈ ಪುಟದಲ್ಲಿರುವ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದ ಪಬ್ನಾ ಜಿಲ್ಲೆಯ ಅತ್ಘಾರಿಯಾದ ಡೆಬೊಟ್ಟರ್ ಬಜಾರ್‌ನಲ್ಲಿ ಈ ಘಟನೆ ನಡೆದಿದ್ದು, ಶಹಾದತ್ ಎಂಬ 30 ವರ್ಷದ ಯುವಕ ವಿದ್ಯುತ್ ಸ್ಪರ್ಶಿಸಿ ದುರಂತವಾಗಿ ಸಾವನ್ನಪ್ಪಿದ್ದಾನೆ. ಈ ವಿಷಯದ ಕುರಿತು ಕೀವರ್ಡ್ ಹುಡುಕಾಟ ನಡೆಸಿದಾಗ BDNews24.com ಮತ್ತು Kaler Kantho ನಂತಹ ಬಹು ಬಾಂಗ್ಲಾದೇಶಿ ಸುದ್ದಿ ಸಂಸ್ಥೆಗಳಿಂದ ವರದಿಗಳು ಸಿಕ್ಕವು.

ಈ ವರದಿಗಳ ಪ್ರಕಾರ, ಜೂನ್ 18 ರಂದು ಪಬ್ನಾದ ಅತ್ಘಾರಿಯಾದ ದೇವೋತ್ತರ್ ಬಜಾರ್ ಪ್ರದೇಶದಲ್ಲಿ ಕಟ್ಟಡದ ಮೇಲ್ಛಾವಣಿಯ ಮೇಲೆ ಸಂಗ್ರಹವಾದ ನೀರನ್ನು ತೆಗೆಯುವಾಗ ವಿದ್ಯುತ್ ಸ್ಪರ್ಶಿಸಿ 30 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಮೃತ ಶಹಾದತ್ ಹೊಸೇನ್, ಚಂದ್ವಾ ಒಕ್ಕೂಟದ ಕದಮಡಂಗಾ ಗ್ರಾಮದ ನಿವಾಸಿಯಾಗಿದ್ದು, ಮೊಹಮ್ಮದ್ ಜಬ್ಬಾರ್ ಹೊಸೇನ್ ಅವರ ಪುತ್ರ.

ಈ ಘಟನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಲ್-ಅರಾಫಾ ಇಸ್ಲಾಮಿ ಬ್ಯಾಂಕ್ ಏಜೆಂಟ್ ಕಟ್ಟಡದ ಛಾವಣಿಯ ಮೇಲೆ ನಡೆದಿದೆ. ಛಾವಣಿಯ ಮೇಲೆ ಸಂಗ್ರಹವಾಗಿದ್ದ ನೀರನ್ನು ತೆಗೆಯುತ್ತಿದ್ದಾಗ, ಶಹಾದತ್ ಕಟ್ಟಡದ ಮೂಲಕ ಹಾದುಹೋಗುತ್ತಿದ್ದ ಮುಖ್ಯ ವಿದ್ಯುತ್ ತಂತಿಗೆ ತಗುಲಿದರು. ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಮಾಹಿತಿ ಪಡೆದ ಅತ್ಘಾರಿಯಾ ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ತಲುಪಿ ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡಿದ್ದ ಅವರ ದೇಹವನ್ನು ಹೊರತೆಗೆದರು. ಇವರು ದೆಬೊಟ್ಟರ್ ಬಜಾರ್‌ನಲ್ಲಿರುವ 'ಅಕುಲ್ ಸ್ಟೋರ್' ಎಂಬ ವ್ಯಾಪಾರ ಸಂಸ್ಥೆಯ ಉದ್ಯೋಗಿಯಾಗಿದ್ದರು.

ಈ ವರ್ಷದ ಜನವರಿ 8 ರಂದು ಡೈಲಿ ಸ್ಟಾರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವರದಿ ಪ್ರಕಟವಾಗುವ ಹೊತ್ತಿಗೆ ದೀಪು ದಾಸ್ ಕೊಲೆ ಪ್ರಕರಣದಲ್ಲಿ ಒಟ್ಟು 21 ಜನರನ್ನು ಬಂಧಿಸಲಾಗಿದೆ. ಆದರೆ, ಆ ಕೊಲೆಯಲ್ಲಿ ಪಬ್ನಾ ಜಿಲ್ಲೆಯ ಶಹಾದತ್ ಹೊಸೇನ್ ಹೆಸರು ಕಂಡುಬಂದಿಲ್ಲ.

ಶಹಾದತ್ ಸಾವಿನ ಕುರಿತಾದ ವರದಿಗಳ ಪರಿಶೀಲನೆಯಲ್ಲಿ ದೀಪು ದಾಸ್ ಹತ್ಯೆಯಲ್ಲಿ ಅವರ ಪಾತ್ರದ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

ಹುಡುಕಾಟದ ವೇಳೆ ನಮಗೆ ಬಾಂಗ್ಲಾದೇಶದ ಫ್ಯಾಕ್ಟ್​ಚೆಕ್ ವೆಬ್​ಸೈಟ್ Rumor Scanner ಇದೇ ವೈರಲ್ ಕ್ಲೈಮ್ ಕುರಿತು ವರದಿ ಮಾಡಿರುವುದು ಸಿಕ್ಕಿತು. ಇದರಲ್ಲಿ Rumor Scanner ತಂಡ ಶಹಾದತ್ ಕೆಸಲ ಮಾಡುತ್ತಿದ್ದ ಅಂಗಡಿಯ ಮಾಲೀಕ ಮೊಹಮ್ಮದ್ ಅಕುಲ್ ಅವರನ್ನು ಸಂಪರ್ಕಿಸಿದೆ. "ಶಹಾದತ್ ನಮ್ಮ ಸೋದರಳಿಯ. ಅವರ ಮನೆ ಪಬ್ನಾ ಜಿಲ್ಲೆಯಲ್ಲಿದೆ. ಪ್ರಸಾರವಾಗುತ್ತಿರುವ ಹೇಳಿಕೆ ಸುಳ್ಳು. ಅವರು ಕಳೆದ ಮೂರು-ನಾಲ್ಕು ವರ್ಷಗಳಿಂದ ಮೈಮೆನ್‌ಸಿಂಗ್‌ಗೆ ಹೋಗಿಲ್ಲ" ಎಂದು ರೂಮರ್ ಸ್ಕ್ಯಾನರ್‌ಗೆ ಅವರು ಹೇಳಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಾಂಗ್ಲಾದ ಪಬ್ನಾದಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕನೊಬ್ಬ ಸಾವನ್ನಪ್ಪಿದ ಘಟನೆಯನ್ನು ಯಾವುದೇ ಪುರಾವೆಗಳಿಲ್ಲದೆ ದೀಪು ದಾಸ್ ಹತ್ಯೆಗೆ ಜೋಡಿಸಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in