Fact Check: ನೇಪಾಳದ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಆನೆಯೊಂದು ರಕ್ಷಿಸಿತೇ? ಸುಳ್ಳು, ಸತ್ಯ ಇಲ್ಲಿದೆ

ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಆನೆಯೊಂದು ಮನುಷ್ಯನನ್ನು ರಕ್ಷಿಸಿದ ಪವಾಡದ ದೃಶ್ಯಗಳನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Fact Check: ನೇಪಾಳದ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಆನೆಯೊಂದು ರಕ್ಷಿಸಿತೇ? ಸುಳ್ಳು, ಸತ್ಯ ಇಲ್ಲಿದೆ
Published on
2 min read

ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಆನೆಯೊಂದು ಮನುಷ್ಯನನ್ನು ರಕ್ಷಿಸಿದ ಪವಾಡದ ದೃಶ್ಯಗಳನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ನೇಪಾಳದಲ್ಲಿ ನಡೆದ ಘಟನೆ, ಪ್ರವಾದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ ಆನೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ನೇಪಾಳ ಪ್ರವಾಹಕ್ಕೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಈ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟ ನಡೆಸಿದಾಗ, ಈ ದೃಶ್ಯಗಳು ಹಳೆಯವು ಎಂದು ನಮಗೆ ಕಂಡುಬಂದಿದೆ. ಈ ದೃಶ್ಯಗಳನ್ನು ಆಗಸ್ಟ್ 7 ರಂದು ಯೂಟ್ಯೂಬ್ ಚಾನೆಲ್ ಆಜ್ ಬಾಂಗ್ಲಾ ಪ್ರಕಟಿಸಿರುವುದು ಸಿಕ್ಕಿದೆ.

ಆದ್ದರಿಂದ ಈ ವೀಡಿಯೊಕ್ಕೂ ಆಗಸ್ಟ್ 26 ರಂದು ನೇಪಾಳವನ್ನು ಅಪ್ಪಳಿಸಿದ ಪ್ರವಾಹಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ವೀಡಿಯೊದ ಶೀರ್ಷಿಕೆಯು ಇದು ಅಸ್ಸಾಂ ಅನ್ನು ಅಪ್ಪಳಿಸಿದ ಪ್ರವಾಹದಿಂದ ಬಂದವು ಎಂದು ಹೇಳುತ್ತದೆ. ಕಳೆದ ತಿಂಗಳು ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು.

ಹಾಗೆಯೆ ಇದೇ ವೀಡಿಯೊವನ್ನು ಆಗಸ್ಟ್ 7 ರಂದು ಮನುಷೇರ್ ಸಾಥೆ ಸಿಪಿಐಎಂ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಘಟನೆ ಅಸ್ಸಾಂನಲ್ಲಿ ನಡೆದಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಆದಾಗ್ಯೂ ಈ ಚಿತ್ರಗಳು ಅಸ್ಸಾಂಗೆ ಸಂಬಂಧಿಸಿವೆ ಎಂದು ಸಾಬೀತುಪಡಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿ ನಮಗೆ ಸಿಕ್ಕಿಲ್ಲ.

ಮತ್ತೊಂದೆಡೆ, ಈ ವೀಡಿಯೊಗಳ ಕಾಮೆಂಟ್ ಬಾಕ್ಸ್‌ನಲ್ಲಿ ಅನೇಕ ಜನರು ಇದು AI- ರಚಿತವಾಗಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ನಾವು ವೈರಲ್ ವೀಡಿಯೊವನ್ನು ಹೈವ್ ಮಾಡರೇಶನ್ ಎಂಬ AI ಪತ್ತೆ ಸಾಧನದೊಂದಿಗೆ ವಿಶ್ಲೇಷಿಸಿದ್ದೇವೆ. ಈ ಉಪಕರಣವು ಶೇಕಡಾ 54 ರಷ್ಟು ಅಂಕಗಳನ್ನು ನೀಡಿದ್ದು, ವೀಡಿಯೊವು AI- ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ಒಳಗೊಂಡಿರಬಹುದು ಎಂದು ಸೂಚಿಸುತ್ತದೆ.

ಒಟ್ಟಾರೆ, ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದ ಸಮಯದಲ್ಲಿ ಆನೆಯೊಂದು ಮನುಷ್ಯನನ್ನು ರಕ್ಷಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತಿಲ್ಲ. ಈ ವೀಡಿಯೊ ಪ್ರವಾಹಕ್ಕೂ ಮೊದಲು ಆನ್‌ಲೈನ್‌ನಲ್ಲಿತ್ತು ಮತ್ತು ಸುಳ್ಳು ಹಕ್ಕಿನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

logo
South Check
southcheck.in