

ಮಹಾತ್ಮ ಗಾಂಧಿಯವರ ಪ್ರತಿಮೆಯ ತಲೆಯನ್ನು ಕಿತ್ತುಹಾಕಿರುವ ಫೋಟೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪ್ರತಿಮೆಯಿಂದ ತಲೆಯನ್ನು ತೆಗೆದು ಹತ್ತಿರದಲ್ಲಿ ಇರಿಸಿರುವುದನ್ನು ಕಾಣಬಹುದು. ಇದು ಬಾಂಗ್ಲಾದೇಶದ್ದು ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಬಾಪು, ಬಾಂಗ್ಲಾದೇಶಕ್ಕೆ ಸುಸ್ವಾಗತ. ಅವರಿಗೆ 55 ಕೋಟಿ ರೂಪಾಯಿಗಳನ್ನು ನೀಡಲು ಅವರು ಉಪವಾಸ ಸತ್ಯಾಗ್ರಹ ಮಾಡಿದರು. ಅವರು ಹಿಂದೂಗಳಿಂದ ಸಂಪೂರ್ಣ ಅಹಿಂಸೆಯನ್ನು ಒತ್ತಾಯಿಸಿದರು ಮತ್ತು ಮುಸ್ಲಿಮರು ತಮ್ಮ ಧರ್ಮವನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಬೆಂಬಲಿಸಿದರು. ಅವರು "ತುಷ್ಟೀಕರಣದ ಪಿತಾಮಹ" ಆಗಿದ್ದರು. ಇಂದು ಬಾಂಗ್ಲಾದೇಶಿಯರು ಗಾಂಧೀಜಿಯವರ ಶಿರಚ್ಛೇದ (STSJ) ಮಾಡುವ ಮೂಲಕ ಅವರಿಗೆ ತಮ್ಮ ಗೌರವವನ್ನು ಸಲ್ಲಿಸಿದ್ದಾರೆ. ಅಭಿನಂದನೆಗಳು ಬಾಪು. ತಲೆ ಇಲ್ಲದ ಗಾಂಧಿಗಿರಿ ಚಿರಾಯುವಾಗಲಿ!’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ತಿಳಿದುಬಂದಿದೆ. ಇದು ಬಾಂಗ್ಲಾದೇಶದ್ದಲ್ಲ, ಪಶ್ಚಿಮ ಬಂಗಾಳದ ಚಾಕುಲಿಯಾದಲ್ಲಿ ನಡೆದ ಎಸ್‌ಐಆರ್ ಪ್ರತಿಭಟನೆಯ ಸಂದರ್ಭದಲ್ಲಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ಫೋಟೋ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ನಲ್ಲಿ ಹುಡುಕಿದ್ದೇವೆ. ಆಗ ಜನವರಿ 16 ರಂದು ಡಿಸಿಬಿ ನ್ಯೂಸ್‌ನ ಯೂಟ್ಯೂಬ್ ಪುಟದಲ್ಲಿ ಬಂಗಾಳಿ ಭಾಷೆಯ ವೀಡಿಯೊ ವರದಿ ಕಂಡುಬಂತು. "ಬಂಗಾಳದಲ್ಲಿ ಪ್ರತಿಭಟನೆಯ ಸಮಯದಲ್ಲಿ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ನಂತರ ಕೀವರ್ಡ್ ಹುಡುಕಾಟ ನಡೆಸಿದಾಗ ವೈರಲ್ ಫೋಟೋದೊಂದಿಗೆ ಜನವರಿ 16 ರಂದು ಎಬಿಪಿ ಬಂಗಾಳಿ ಪ್ರಕಟಿಸಿದ ವರದಿಗೆ ಸಿಕ್ಕಿತು. ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದ ಚಾಕುಲಿಯಾದಲ್ಲಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿ ಹೇಳುತ್ತದೆ. ಎಸ್‌ಐಆರ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಚಾಕುಲಿಯಾ, ಗೋಲ್ಪೋಖರ್‌ನಲ್ಲಿರುವ ಬಿಡಿಒ ಕಚೇರಿ ಸಂಖ್ಯೆ 2 ರ ಧ್ವಂಸದೊಂದಿಗೆ ಗಾಂಧಿ ಪ್ರತಿಮೆಯನ್ನು ಸಹ ಧ್ವಂಸಗೊಳಿಸಲಾಗಿದೆ ಎಂಬ ಮಾಹಿತಿ ಇದರಲ್ಲಿದೆ.
ಬಂಗಾಳಿ ಮಾಧ್ಯಮ ಸಂಸ್ಥೆ ಕೆಟಿವಿ, ಚಕುಲಿಯಾದಲ್ಲಿ ಬಿಡಿಒ ಕಚೇರಿಯನ್ನು ಧ್ವಂಸಗೊಳಿಸಿರುವ ದೃಶ್ಯಗಳನ್ನು ಒಳಗೊಂಡಿರುವ ವೀಡಿಯೊ ವರದಿಯನ್ನು ಹಂಚಿಕೊಂಡಿದೆ. ವರದಿಯು ವೈರಲ್ ಫೋಟೋದಲ್ಲಿನ ಗಾಂಧಿ ಪ್ರತಿಮೆಯ ದೃಶ್ಯಗಳನ್ನು ಸಹ ಒಳಗೊಂಡಿದೆ.
ಅಲ್ಲದೆ ನಾವು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಗಾಂಧಿ ಪ್ರತಿಮೆ ಧ್ವಂಸ ಘಟನೆಗಳು ನಡೆದಿವೆಯೇ ಎಂದು ಪರಿಶೀಲಿಸಿದ್ದೇವೆ. ಅಂತಹ ಯಾವುದೇ ವರದಿಗಳು ನಮಗೆ ಸಿಗಲಿಲ್ಲ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಾಂಗ್ಲಾದೇಶದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ವೈರಲ್ ಆಗುತ್ತಿರುವ ಫೋಟೋ ವಾಸ್ತವವಾಗಿ ಪಶ್ಚಿಮ ಬಂಗಾಳದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.