Fact Check: ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ಬಂದಿದ್ದಕ್ಕೆ 2022 ರಲ್ಲಿ ಹಾವೇರಿ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ

ಹಾವೇರಿಯ ಈ ರೈತ 2022 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ಬಂದಿದ್ದಕ್ಕೆ ಅಲ್ಲ, ಬದಲಾಗಿ ಸಾಲದಿಂದ ಹಾಗೂ ಅತಿಯಾದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Fact Check: ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ಬಂದಿದ್ದಕ್ಕೆ 2022 ರಲ್ಲಿ ಹಾವೇರಿ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ
Published on
3 min read

ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮಾನಸಿಕವಾಗಿ ಮನನೊಂದು ರೈತರೊಬ್ಬರು 2022 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಎರಡು ವರ್ಷಗಳ ಹಿಂದೆ ನಡೆದಿರುವ ಘಟನೆಯ ಕುರಿತು ಈಗ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಕನ್ನಡದ ಕೆಲವು ಡಿಜಿಟಲ್ ಮಾಧ್ಯಮ ಕೂಡ ಈ ಬಗ್ಗೆ ಸುದ್ದಿ ಪ್ರಕಟಿಸಿದೆ.

ಕನ್ನಡ ನ್ಯೂಸ್‌ ನೌ ನವೆಂಬರ್ 7, 2024ರ ವರದಿಯಲ್ಲಿ ‘‘ಹಾವೇರಿ : ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮಾನಸಿಕವಾಗಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಾವೇರಿ ರೈತರು ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ಚನ್ನಪ್ಪ ಎಂಬುವರ ಪುತ್ರ ರುದ್ರಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿರುವಾಗಿ ರೈತರು ಆರೋಪಿಸಿದ್ದಾರೆ. 8 ವರ್ಷಗಳ ಹಿಂದೆ 4 ಎಕರೆ ಹೊಲದ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮನನೊಂದು ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಾವೇರಿಯ ರೈತರು ಆರೋಪಿಸಿದ್ದಾರೆ. ಸದ್ಯ ರೈತರು ವಕ್ಫ್ ನೋಟಿಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.’’ ಎಂದು ಬರೆಯಲಾಗಿದೆ.

ಹಾಗೆಯೆ ಪಬ್ಲಿಕ್ ಟಿವಿಯ ನವೆಂಬರ್ 7, 2024ರ ವರದಿಯಲ್ಲಿ ಹಾವೇರಿ: ವಕ್ಫ್ ಬೋರ್ಡ್ ಆಸ್ತಿ ಕಿರಿಕಿರಿಗೆ ಬೇಸತ್ತು ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದಲ್ಲಿ ನಡೆದಿದೆ. ಹರನಗಿ ಗ್ರಾಮದ ನಿವಾಸಿ ರುದ್ರಪ್ಪ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು (ನ.7) ಕೇಂದ್ರ ಸಂಸದೀಯ ಜಂಟಿ ಕಮಿಟಿಯ ಮುಂದೆ ಹಾವೇರಿ ರೈತರು ಪ್ರಸ್ತಾಪಿಸಿದ ಬಳಿಕ ಈ ವಿಚಾರ ಈಗ ಮುನ್ನೆಲೆಗೆ ಬಂದಿದೆ’’ ಎಂದಿದೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಹಾವೇರಿಯ ಈ ರೈತ 2022 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ಬಂದಿದ್ದಕ್ಕೆ ಅಲ್ಲ, ಬದಲಾಗಿ ಸಾಲದಿಂದ ಹಾಗೂ ಅತಿಯಾದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿಜಾಂಶವನ್ನು ತಿಳಿಯಲು ನಾವು ಕೆಲವು ಪ್ರಮುಖ ಕೀವರ್ಡ್‌ಗಲನ್ನು ಬಳಸಿ ಗೂಗಲ್​ನಲ್ಲಿ ಹುಡುಕಾಟ ನಡೆಸಿದೆವು. ಈ ಸಂದರ್ಭ ಯಾವುದೇ ವರದಿಗಳು ಕಂಡುಬಂದಿಲ್ಲ. ಆದರೆ ನಮಗೆ ಎಕ್ಸ್‌ ಖಾತೆಯಲ್ಲಿ ಹಾವೇರಿ ಎಸ್‌ಪಿ ಹಂಚಿಕೊಂಡಿದ್ದ ಪತ್ರಿಕಾ ಪ್ರಕಟಣೆ ಲಭ್ಯವಾಯಿತು.

ನವೆಂಬರ್ 7, 2024ರಂದು ಹಾವೇರಿ ಎಸ್‌ಪಿಯವರ ಎಕ್ಸ್ ಪೋಸ್ಟ್ ನಲ್ಲಿ ‘‘ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ರೀತಿಯ ಯಾವುದೇ ಘಟನೆ ವರದಿಯಾಗಿಲ್ಲ. ಇಲ್ಲಿ ಉಲ್ಲೇಖಿಸಿರುವ ರೈತ ರುದ್ರಪ್ಪ ಚನ್ನಪ್ಪ ಬಾಳಿಕಾಯಿ ಆತ್ಮಹತ್ಯೆ ಪ್ರಕರಣ ದಿನಾಂಕ 06/01/2022 ರಂದು ವರದಿಯಾಗಿದ್ದು, ಸಾಲ ಮತ್ತು ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದೂರು ಪಿಎಸ್‌ನಲ್ಲಿ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿದೆ. ಈಗಾಗಲೇ ಅಂತಿಮ ವರದಿ ಸಲ್ಲಿಸಲಾಗಿದೆ’’ ಎಂದು ಶೀರ್ಷಿಕೆ ಬರೆದು ಪತ್ರಿಕಾ ಪ್ರಕಟಣೆ ನೀಡಲಾಗಿದೆ.

ಇನ್ನು ನವಂಬರ್‌ 8, 2024 ರಂದು ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕೃತ ಕರ್ನಾಟಕ ವಾರ್ತೆ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ "ಹಾವೇರಿ ಜಿಲ್ಲೆಯ ಹರಣಗಿ ಗ್ರಾಮದ ರೈತ ಚನ್ನಪ್ಪ ಅವರ ಪುತ್ರ ರುದ್ರಪ್ಪ ಎಂಬವರು ಜಮೀನಿನ ಪಹಣಿಯಲ್ಲಿ ವಕ್ಫ್‌ ಹೆಸರು ನಮೂದು ಆಗಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ 2024, ನವೆಂಬರ್‌ 11 ರಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಹಾವೇರಿ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸಿದ ವೇಳೆ ಇದು ಸುಳ್ಳು ಸುದ್ದಿಯೆಂದು ಸ್ಪಷ್ಟವಾಗಿದೆ. ವಾಸ್ತವವಾಗಿ ರುದ್ರಪ್ಪ ಅವರ ತಂದೆ ಚನ್ನಪ್ಪ ಅವರು ಐಸಿಐಸಿಐ ಬ್ಯಾಂಕ್‌ ಹಾವೇರಿ ಶಾಖೆಯಲ್ಲಿ 3 ಲಕ್ಷ ರೂ. ಹಾಗೂ ಖಾಸಗಿಯಾಗಿ 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಅದರ ಜೊತೆಗೆ ಅತಿಯಾದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರವನ್ನು ನೀಡಲಾಗಿರುತ್ತದೆ. ಈ ಬಗ್ಗೆ ರುದ್ರಪ್ಪ ಅವರ ತಂದೆ ಚನ್ನಪ್ಪ ಅವರೇ ಸ್ಪಷ್ಟಪಡಿಸಿರುವುದಾಗಿ ಹಾವೇರಿ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ" ಎಂದು ಬರೆಯಲಾಗಿದೆ.

2022 ರಲ್ಲಿ ಹಾವೇರಿಯಲ್ಲಿ 56 ರೈತರು ಆತ್ಮಹತ್ಯೆ:

2022 ರಲ್ಲಿ ಹಾವೇರಿಯಲ್ಲಿ ನಡೆದ ರೈತರ ಆತ್ಮಹತ್ಯೆ ಕುರಿತು ನಾವು ಹುಡುಕಿದಾಗ Kannada Aasianet News ನವೆಂಬರ್ 3, 2022 ರಂದು ‘ಬೆಚ್ಚಿ ಬೀಳಿಸುತ್ತಿದೆ ಹಾವೇರಿ ರೈತರ ಆತ್ಮಹತ್ಯೆ, 10 ತಿಂಗಳಲ್ಲಿ 112 ಆತ್ಮಹತ್ಯೆ ಕೇಸ್!’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿರುವುದು ನಮಗೆ ಸಿಕ್ಕಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘2022ನೇ ವರ್ಷ ಭಾರಿ ಮಳೆ ಸುರಿದು ಆದ ಬೆಳೆ ಹಾನಿಗೆ ನೊಂದು ರೈತ ಜೀವ ಕಳೆದುಕೊಳ್ತಿದ್ದಾನೆ. ಸಾಲ ಮಾಡಿ ಬೆಳೆದಿದ್ದ ಪೈರು ನೀರುಪಾಲಾಗಿ ರೈತ ನೇಣಿಗೆ ಕೊರಳೊಡ್ಡುತ್ತಿದ್ದಾನೆ. ಕಳೆದ ಐದಾರು ವರ್ಷಗಳ ಹಿಂದೆ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆಯ ಅನ್ನದಾತರು ಈಗ ಅತಿವೃಷ್ಟಿ ಬೆಳೆ ನಷ್ಟದಿಂದ ಅಕ್ಷರಶಃ ನಲುಗಿ ಹೋಗಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಜೂನ್‌ನಿಂದ ಇಲ್ಲಿಯವರೆಗೆ 56 ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2022ನೇ ಸಾಲಿನಲ್ಲಿ ಈ ವರೆಗೆ ಒಟ್ಟು 112 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.’’ ಎಂದು ಬರೆಯಲಾಗಿದೆ.

ಹೀಗಾಗಿ ವೈರಲ್‌ ಆಗುತ್ತಿರುವ ಸುದ್ದಿ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ರೈತ ರುದ್ರಪ್ಪ 2022 ರಲ್ಲಿ ಆಸ್ತಿ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಿಗೆ ಬೆಳೆ ಹಾನಿಯಾಗಿದ್ದರಿಂದ ಸಾಲ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಸ್ಪಷ್ಟನೆಯಿಂದಲೇ ತಿಳಿದುಬಂದಿದೆ.

Related Stories

No stories found.
logo
South Check
southcheck.in