Fact Check: ವ್ಯಾಪಾರಿಯೊಬ್ಬಳು ಅಳುತ್ತಾ ಗ್ರಾಹಕರ ಪಾದಗಳನ್ನು ಹಿಡಿದಿರುವ ವೀಡಿಯೊದ ಅಸಲಿ ಕಥೆ ಇಲ್ಲಿದೆ ನೋಡಿ

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ, ಇದರಲ್ಲಿ ಒಬ್ಬ ಮಹಿಳಾ ವ್ಯಾಪಾರಿ ಇನ್ನೊಬ್ಬ ಮಹಿಳೆಯ ಪಾದಗಳನ್ನು ಹಿಡಿದುಕೊಂಡು ಅಳುತ್ತಿರುವುದನ್ನು ತೋರಿಸಲಾಗಿದೆ, ಆ ಮಹಿಳೆಯನ್ನು ಗ್ರಾಹಕ ಎಂದು ಹೇಳಲಾಗುತ್ತದೆ.
Fact Check: ವ್ಯಾಪಾರಿಯೊಬ್ಬಳು ಅಳುತ್ತಾ ಗ್ರಾಹಕರ ಪಾದಗಳನ್ನು ಹಿಡಿದಿರುವ ವೀಡಿಯೊದ ಅಸಲಿ ಕಥೆ ಇಲ್ಲಿದೆ ನೋಡಿ
Published on
1 min read

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ, ಇದರಲ್ಲಿ ಒಬ್ಬ ಮಹಿಳಾ ವ್ಯಾಪಾರಿ ಇನ್ನೊಬ್ಬ ಮಹಿಳೆಯ ಪಾದಗಳನ್ನು ಹಿಡಿದುಕೊಂಡು ಅಳುತ್ತಿರುವುದನ್ನು ತೋರಿಸಲಾಗಿದೆ, ಆ ಮಹಿಳೆಯನ್ನು ಗ್ರಾಹಕ ಎಂದು ಹೇಳಲಾಗುತ್ತದೆ. ಆ ಮಹಿಳೆ ಅಂಗಡಿಯಲ್ಲಿ ಶಾಪಿಂಗ್​ಗೆಂದು ಬಂದು ಗಂಟೆಗಟ್ಟಲೆ ಕಳೆದಳು. ಆದರೆ, ಕೊನೆಯಲ್ಲಿ, ಒಂದೇ ಒಂದು ವಸ್ತುವನ್ನು ಖರೀದಿಸಲಿಲ್ಲ. ಇದರ ನಂತರ, ಅಂಗಡಿಯವಳು ಆಕೆಯ ಕಾಲು ಹಿಡಿದು ವಸ್ತು ಖರೀದಿಸುವಂತೆ ಕಣ್ಣೀರು ಹಾಕಿಕೊಂಡಳು ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಗಂಟೆಗಟ್ಟಲೆ ಶಾಪಿಂಗ್ ಪೋಸ್ ಬಳಿಕ ಏನನ್ನೂ ಖರೀದಿಸದೇ ಹೋಗುತ್ತಿದ್ದ ಗ್ರಾಹಕಿಯ ಕಾಲಿಗೆ ಬಿದ್ದು ಏನಾದರೂ ಖರೀದಿಸಿ ಎಂದು ಮಹಿಳಾ ವ್ಯಾಪಾರಿಯೊಬ್ಬರು ಕಣ್ಣೀರು ಹಾಕುತ್ತಾ ಗೋಗರೆಯುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ತಿಳಿದುಬಂದಿದೆ. ಇದು ಯಾವುದೇ ನೈಜ ಘಟನೆಯ ವೀಡಿಯೊ ಅಲ್ಲ, ಬದಲಾಗಿ ಸ್ಕ್ರಿಪ್ಟ್ ಮಾಡಲಾದ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, carry_wear_by_besties_ks ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ವೈರಲ್ ವೀಡಿಯೊ ಕಂಡುಬಂದಿದೆ. ಇದನ್ನು ಜನವರಿ 9 ರಂದು ಪೋಸ್ಟ್ ಮಾಡಲಾಗಿದೆ. ಇವರ ಪ್ರೊಫೈಲ್​ನಲ್ಲಿ ಜನವರಿ 7 ರಂದು ಇದೇ ವೈರಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ಅಪ್‌ಲೋಡ್ ಮಾಡಲಾಗಿದೆ. ವೀಡಿಯೊದ ಶೀರ್ಷಿಕೆಯಲ್ಲಿ "ತಮಾಷೆ" ಮತ್ತು "ಹಾಸ್ಯ ವೀಡಿಯೊ" ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಲಾಗಿದೆ.

ಈ ಖಾತೆಯಲ್ಲಿ ಈ ಇಬ್ಬರು ಮಹಿಳೆಯರು ಜೊತೆಯಾಗಿ ಮಾಡಿರುವ ಹಲವಾರು ವೀಡಿಯೊಗಳಿವೆ. ಈ ಎಲ್ಲಾ ವೀಡಿಯೊಗಳು ಸ್ಕ್ರಿಪ್ಟ್ ಮಾಡಲ್ಪಟ್ಟಿವೆ. ಅಷ್ಟೇ ಅಲ್ಲದೆ ವೈರಲ್ ವೀಡಿಯೊವನ್ನು ಚಿತ್ರೀಕರಿಸುವ ಸಮಯದಲ್ಲಿ ತೆಗೆದ ವೀಡಿಯೊವನ್ನು ಸಹ ಈ ಖಾತೆಗೆ ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ, ಇಬ್ಬರೂ ಮಹಿಳೆಯರು ನಟಿಸುವುದು ಮತ್ತು ನಗುವುದು ಕಂಡುಬರುತ್ತದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗುತ್ತಿರುವ ವೀಡಿಯೊ ನೈಜವಾಗಿ ನಡೆದ ಘಟನೆಯದ್ದಲ್ಲ, ಬದಲಾಗಿ ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Related Stories

No stories found.
logo
South Check
southcheck.in