

ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿ ಹೊತ್ತಿಕೊಂಡ ಕಟ್ಟಡದ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದು ಇಸ್ರೇಲ್ ನಿಂದ ಬಂದಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹೆಜ್ಬೊಲ್ಲಾ ಇಸ್ರೇಲಿ ಮಿಲಿಟರಿ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿದ್ದು, ಈ ವೀಡಿಯೊ ಆ ದಾಳಿಯದ್ದೇ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಹಿಜ್ಬುಲ್ಲಾಹ್ ಯುದ್ದಪರಾಧಿ ಇಸ್ರೇಲ್ ನ ಮಿಲಿಟರಿ ಕೇಂದ್ರ ಕಚೇರಿಗೆ ದಾಳಿ ಮಾಡಿದ ಪರಿಣಾಮ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಇಸ್ರೇಲ್‌ನದ್ದಲ್ಲ, ಬದಲಾಗಿ ಅಮೆರಿಕದ ನ್ಯೂಯಾರ್ಕ್ ನಗರದ ಮ್ಯಾನ್‌ಹ್ಯಾಟನ್‌ನಲ್ಲಿನ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟ ನಡೆಸಿದ್ದೇವೆ. ಈ ಸಂದರ್ಭ FDNY Response Videos ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು ಏಪ್ರಿಲ್ 12 ರಂದು ಹಂಚಿಕೊಳ್ಳಲಾಗಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಈ ವೀಡಿಯೊ ನ್ಯೂಯಾರ್ಕ್ ನಗರದ ಮ್ಯಾನ್‌ಹ್ಯಾಟನ್‌ನಿಂದ ಬಂದಿದೆ. ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಲ್ಲಿರುವ ಆರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಈ ಮಾಹಿತಿಯ ಆಧಾರದ ಮೇಲೆ, ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, abc7ny ವೆಬ್‌ಸೈಟ್‌ನಲ್ಲಿ ಹಕ್ಕಿಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡೆವು. ಈ ವರದಿಯನ್ನು ಏಪ್ರಿಲ್ 12 ರಂದು ಪ್ರಕಟಿಸಲಾಗಿದ್ದು, "ಮ್ಯಾನ್‌ಹ್ಯಾಟನ್‌ನ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಹೆಣಗಾಡಿದರು. ಬೆಳಿಗ್ಗೆ 6 ಗಂಟೆ ಸುಮಾರಿಗೆ ಆರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ತುರ್ತು ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಅಗ್ನಿಶಾಮಕ ದಳದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದಾಗ್ಯೂ, ಬೇರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ." ಎಂಬ ಮಾಹಿತಿ ಇದರಲ್ಲಿದೆ.
ಈ ಸುದ್ದಿಯಲ್ಲಿ ವರದಿಗಾರ್ತಿಯೊಬ್ಬರು ವೈರಲ್ ವೀಡಿಯೊದಲ್ಲಿರುವ ಅದೇ ಕಟ್ಟದ ಎದುರು ನಿಂತು ವರದಿ ಮಾಡುತ್ತಿರುವುದನ್ನೂ ಕಾಣಬಹುದು.
Daily Dispatch ಎಂಬ ವೆಬ್‌ಸೈಟ್‌ನಲ್ಲಿ ಕೂಡ ಏಪ್ರಿಲ್ 13 ರಂದು ವೈರಲ್ ವೀಡಿಯೊದಲ್ಲಿರುವ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿದ್ದು, ‘‘ಮ್ಯಾನ್‌ಹ್ಯಾಟನ್‌ನ ಅಪಾರ್ಟ್‌ಮೆಂಟ್ ಕಟ್ಟಡವೊಂದರಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭಾರಿ ಬೆಂಕಿಯನ್ನು ಅಗ್ನಿಶಾಮಕ ದಳದವರು ನಂದಿಸಿದ್ದಾರೆ. ಚೆಲ್ಸಿಯಾದ ವೆಸ್ಟ್ 22 ಮತ್ತು 23 ನೇ ಬೀದಿಗಳ ನಡುವಿನ 7 ನೇ ಅವೆನ್ಯೂದಲ್ಲಿರುವ ಆರು ಅಂತಸ್ತಿನ ಕಟ್ಟಡದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು’’ ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಇಸ್ರೇಲಿ ಮಿಲಿಟರಿ ಪ್ರಧಾನ ಕಚೇರಿಯ ಮೇಲೆ ಹೆಜ್ಬೊಲ್ಲಾ ದಾಳಿಯನ್ನು ತೋರಿಸುವುದಾಗಿ ಹೇಳಿಕೊಳ್ಳುವ ವೈರಲ್ ವೀಡಿಯೊ ನ್ಯೂಯಾರ್ಕ್ ನಗರದ ಮ್ಯಾನ್‌ಹ್ಯಾಟನ್‌ನಿಂದ ಬಂದಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.