

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಒಬ್ಬ ಪುರುಷ ಮತ್ತು ಮಹಿಳೆಯೊಬ್ಬರು ಅಸಹನೀಯವಾಗಿ ಅಳುತ್ತಿರುವುದನ್ನು ಕಾಣಬಹುದು. ಬಾಂಗ್ಲಾದೇಶದ ಹಿಂದೂ ಮಹಿಳೆಯನ್ನು ತನ್ನ ತಂದೆಯ ಮುಂದೆಯೇ ಕ್ರೂರವಾಗಿ ಅತ್ಯಾಚಾರ ಮಾಡಲಾಗಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಹೃದಯವಿದ್ರಾವಕ ದೃಶ್ಯ: ತನ್ನ ತಂದೆಯ ಮುಂದೆಯೇ ಮುಸ್ಲಿಮರಿಂದ ಅತ್ಯಾಚಾರಕ್ಕೊಳಗಾದ ಬಾಂಗ್ಲಾದೇಶದ ಹಿಂದೂ ಹುಡುಗಿಯೊಬ್ಬಳು ಘಟನೆಯನ್ನು ಇತರರಿಗೆ ಹೇಳುತ್ತಿರುವಾಗ ಅವಳ ತಂದೆ ಅಳುತ್ತಾಳೆ. ಇದಕ್ಕಿಂತ ಕ್ರೂರವಾದದ್ದು ಇನ್ನೊಂದಿದೆ?’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಬಾಂಗ್ಲಾದೇಶದಲ್ಲಿ ಸಾಲ ಮರುಪಾವತಿಸದಿದ್ದಕ್ಕಾಗಿ ಹಲ್ಲೆಗೊಳಗಾದ ದಂಪತಿಗಳ ವೀಡಿಯೊ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಮೇ 15 ರಂದು ಬಾಂಗ್ಲಾದೇಶದ ಸ್ಥಳೀಯ ಮಾಧ್ಯಮ ಡ್ರಿಸ್ಟಿಕಾನ್ ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಅದೇ ವೀಡಿಯೊ ಕಂಡುಬಂದಿದೆ. ಕಂತಿನ ಹಣವನ್ನು ಸ್ವೀಕರಿಸದ ನಂತರ ಎನ್‌ಜಿಒ ಕಾರ್ಯಕರ್ತನೊಬ್ಬ ಗೃಹಿಣಿಯೊಬ್ಬಳನ್ನು ವಿವಸ್ತ್ರಗೊಳಿಸಿದ್ದಾನೆ ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೇಳಲಾಗಿದೆ.
ಹಾಗೆಯೆ ಬಾಂಗ್ಲಾದ ಮತ್ತೊಂದು ಸ್ಥಳೀಯ ವೆಬ್ಸೈಟ್ Cumilla Protidin ಮೇ 13 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ವರದಿ ಮಾಡಿದ್ದು, ನಗರದ ರಾಜಧಾನಿ ಕೊಮಿಲ್ಲಾದ ಗೋಲ್‌ಪಟ್ಟಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಕಂತು ಪಾವತಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ 'ಪಲ್ಲಿ ಮಂಗಲ್ ಖಾರಾ' ಎಂಬ ಸರ್ಕಾರೇತರ ಸಂಸ್ಥೆಯ ಕೆಲವು ಕ್ಷೇತ್ರ ಕಾರ್ಯಕರ್ತರು ದಂಪತಿಗಳನ್ನು ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಅದು ಹೇಳಿದೆ.
ರಿನಾ ರಾಣಿ ಸಹಾ ಪಲ್ಲಿ ಮಂಗಲ್ ಕಾರ್ಯಕ್ರಮದಿಂದ 80,000 ಟಕಾ ಸಾಲವನ್ನು ಪಡೆದರು. ಅವರು ತಿಂಗಳಿಗೆ 8,000 ಟಕಾದಂತೆ ಆರು ಕಂತುಗಳನ್ನು ಪಾವತಿಸಿದರು, ಆದರೆ ಮುಂದಿನ ಮೂರು ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಏಪ್ರಿಲ್ 30 ರಂದು ಕೊಮಿಲ್ಲಾ ನಗರದ ಗೋಲ್ಪಟ್ಟಿ ಪ್ರದೇಶದ ಬಳಿ ನಡೆದಿದೆ. ಘಟನೆ ನಡೆದ ಕೆಲವು ಗಂಟೆಗಳ ನಂತರ ಪತಿ ಶ್ಯಾಮಲ್ ಚಂದ್ರ ಸರ್ಕಾರ್ ಕೊಮಿಲ್ಲಾ ಕೊಟ್ವಾಲಿ ಮಾದರಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು. ದೂರಿನಲ್ಲಿ ನಾಲ್ವರು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ - ಮೀರಜ್ ಹೊಸೇನ್, ರಹೀದ್, ಇತಿ ದೇಬ್ನಾಥ್ ಮತ್ತು ರೋಕ್ಸಾನಾ ಅಖ್ತರ್.
ದೈನಿಕ್ ಸೋಕಲ್ ಎಂಬ ಫೇಸ್‌ಬುಕ್ ಪುಟದಿಂದ ಅಪ್‌ಲೋಡ್ ಮಾಡಲಾದ ಬಲಿಪಶುವಿನೊಂದಿಗಿನ ಸಂದರ್ಶನದ ಕ್ಲಿಪ್‌ನಲ್ಲಿ, ಸಾಲವನ್ನು ಪಾವತಿಸದ ಕಾರಣಕ್ಕಾಗಿ ನಾಲ್ಕು ಎನ್‌ಜಿಒ ನೌಕರರು ತನ್ನ ಮೇಲೆ ಹೇಗೆ ಹಲ್ಲೆ ನಡೆಸಿದರು ಎಂಬುದರ ಕುರಿತು ಸಂತ್ರಸ್ತೆ ಮಾತನಾಡುತ್ತಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಾಂಗ್ಲಾದಲ್ಲಿ ಹಿಂದೂ ಹುಡುಗಿಯೊಬ್ಬಳನ್ನು ತನ್ನ ತಂದೆಯ ಮುಂದೆಯೇ ಮುಸ್ಲಿಮರು ಅತ್ಯಾಚಾರ ಮಾಡಿದರು ಎಂದ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ವಾಸ್ತವದಲ್ಲಿ, ಸಾಲ ಮರುಪಾವತಿಸದಿದ್ದಕ್ಕಾಗಿ ಹಲ್ಲೆಗೊಳಗಾದ ದಂಪತಿಗಳ ವೀಡಿಯೊ ಇದಾಗಿದೆ.