

ಇಂಡಿಗೋ ಏರ್ಲೈನ್ಸ್‌ನಲ್ಲಿ ಇತ್ತೀಚೆಗೆ ಉಂಟಾದ ಬಿಕ್ಕಟ್ಟಿನ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ, ಕೆಲವರು ವಿಮಾನ ನಿಲ್ದಾಣದಲ್ಲಿ ಗರ್ಬಾ ನೃತ್ಯ ಪ್ರದರ್ಶಿಸುವುದನ್ನು ಕಾಣಬಹುದು. ವಿಮಾನ ರದ್ದತಿಯಿಂದಾಗಿ ಅವ್ಯವಸ್ಥೆ ಉಂಟಾದಾಗ, ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಗರ್ಬಾ ನೃತ್ಯ ಪ್ರದರ್ಶಿಸಿದರು ಎಂದು ವೈರಲ್ ವೀಡಿಯೊ ಹೇಳುತ್ತದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ದೇಶದಾದ್ಯಂತ ಇಂಡಿಗೋ ವಿಮಾನಯಾನ ಅಸ್ತವ್ಯಸ್ಥಗೊಂಡಿದೆ. ಫೈಲಟ್ ಗಳ ಕೊರತೆಯಿಂದ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಹೀಗಾಗಿ ಏರ್ಪೋರ್ಟ್ ಗಳು ಅಕ್ಷರಷಃ ಸಂತೆ ಮಾರುಕಟ್ಟೆಯಂತಾಗಿವೆ. ಈ ಮಧ್ಯೆ ಫ್ಲೈಟ್ ಗಾಗಿ ಕಾದು ಬೇಸತ್ತ ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣದಲ್ಲಿ ಗರ್ಭಾ ಡ್ಯಾನ್ಸ್ ಮಾಡಿ ಟೈಂಪಾಸ್ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಸೆಪ್ಟೆಂಬರ್‌ನಲ್ಲಿ, ಸೂರತ್‌ಗೆ ಹೋಗುವ ವಿಮಾನವು ಗೋವಾ ವಿಮಾನ ನಿಲ್ದಾಣದಲ್ಲಿ ವಿಳಂಬವಾಯಿತು, ನಂತರ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ಗರ್ಬಾ ನೃತ್ಯವನ್ನು ಪ್ರದರ್ಶಿಸಿದ ವೀಡಿಯೊ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಬಳಸಿ ಹುಡುಕಿದ್ದೇವೆ. ಈ ಸಂದರ್ಭ ಹಲವಾರು ಸುದ್ದಿ ವೆಬ್‌ಸೈಟ್‌ಗಳಲ್ಲಿ ಸಂಬಂಧಿತ ವರದಿಗಳು ನಮಗೆ ಕಂಡುಬಂದವು. ಸೆಪ್ಟೆಂಬರ್ 30, 2025 ರಂದು ಪಿಟಿಸಿ ನ್ಯೂಸ್ ವರದಿ ಮಾಡಿದ್ದು, ಸೂರತ್‌ಗೆ ಹೋಗುವ ವಿಮಾನ ವಿಳಂಬವಾಗಿದ್ದು, ಪ್ರಯಾಣಿಕರು ಗೋವಾ ವಿಮಾನ ನಿಲ್ದಾಣದಲ್ಲಿ ಗರ್ಬಾ ನೃತ್ಯ ಮಾಡುವಂತೆ ಪ್ರೇರೇಪಿಸಿತು ಎಂದು ಬರೆದುಕೊಂಡಿದೆ. ಇದರಲ್ಲಿ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಕೂಡ ಇದೆ.
ವೈರಲ್ ವೀಡಿಯೊಗೆ ಸಂಬಂಧಿಸಿದ ವರದಿಯನ್ನು ನಾವು NDTV ವೆಬ್‌ಸೈಟ್‌ನಲ್ಲಿ ಕಂಡುಕೊಂಡಿದ್ದೇವೆ. ಸೆಪ್ಟೆಂಬರ್ 30, 2025 ರಂದು ಪ್ರಕಟವಾದ ವರದಿಯಲ್ಲಿ, ಸೂರತ್‌ಗೆ ಹೋಗುವ ವಿಮಾನ ವಿಳಂಬವಾದ ನಂತರ ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಗೋವಾ ವಿಮಾನ ನಿಲ್ದಾಣದಲ್ಲಿ ಗರ್ಬಾ ನೃತ್ಯವನ್ನು ಪ್ರದರ್ಶಿಸಲು ಪ್ರಾರಂಭಿಸಿದರು ಎಂದು ಹೇಳಲಾಗಿದೆ.
ಮಿಡ್ ಡೇ ಕೂಡ ಸೆಪ್ಟೆಂಬರ್ 30, 2025 ರಂದು ಫೇಸ್‌ಬುಕ್‌ನಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಪ್ರಸ್ತುತ ಪರಿಸ್ಥಿತಿಗಿಂತ ಹಿಂದಿನದು ಎಂದು ದೃಢಪಡಿಸಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಗರ್ಬಾ ಪ್ರದರ್ಶಿಸುತ್ತಿರುವ ವೈರಲ್ ವೀಡಿಯೊ ಹಳೆಯದಾಗಿದ್ದು, ಪ್ರಸ್ತುತ ಇಂಡಿಗೊ ಬಿಕ್ಕಟ್ಟಿಗೆ ಸಂಬಂಧಿಸಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.