Fact Check: IPL 2026- ಆರ್​ಸಿಬಿ ಫೈನಲ್​ನಲ್ಲಿ ಗೆದ್ದ ಬಳಿಕ ಡಿಕೆ ಶಿವಕುಮಾರ್ ಸಂಭ್ರಮಾಚರಣೆ ಎಂದು ಹಳೆಯ ವೀಡಿಯೊ ವೈರಲ್

ಡಿಕೆ ಶಿವಕುಮಾರ್ ಅವರು ಆರ್ಸಿಬಿ ಧ್ವಜ ಬೀಸುತ್ತ ಕಾರಿನಲ್ಲಿ ತೆರಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ಐಪಿಎಲ್ 2026 ರಲ್ಲಿ ಆರ್ಸಿಬಿ ಗೆದ್ದ ಸಂದರ್ಭಕ್ಕೆ ಲಿಂಕ್ ಮಾಡಲಾಗುತ್ತಿದೆ.
Fact Check: IPL 2026- ಆರ್​ಸಿಬಿ ಫೈನಲ್​ನಲ್ಲಿ ಗೆದ್ದ ಬಳಿಕ ಡಿಕೆ ಶಿವಕುಮಾರ್ ಸಂಭ್ರಮಾಚರಣೆ ಎಂದು ಹಳೆಯ ವೀಡಿಯೊ ವೈರಲ್
Published on
2 min read

ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿಯನ್ನು ಗೆದ್ದುಕೊಂಡಿತು. ಐಪಿಎಲ್ ಇತಿಹಾಸದಲ್ಲಿ ಸತತವಾಗಿ ಎರಡನೇ ಬಾರಿ ಆರ್​ಸಿಬಿ ಕಪ್ ಗೆದ್ದ ಬಳಿಕ ತವರಿನಲ್ಲಿ ಸಂಭ್ರಮ ಮನೆಮಾಡಿದೆ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದರ ಬೆನ್ನಲ್ಲೇ ಜೂನ್ 3 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆ ಶಿವಕುಮಾರ್ ಅವರು ಆರ್​ಸಿಬಿ ಧ್ವಜ ಬೀಸುತ್ತ ಕಾರಿನಲ್ಲಿ ತೆರಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ಐಪಿಎಲ್ 2026 ರಲ್ಲಿ ಆರ್​ಸಿಬಿ ಗೆದ್ದ ಸಂದರ್ಭಕ್ಕೆ ಲಿಂಕ್ ಮಾಡಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಆರ್​ಸಿಬಿ ಎರಡನೇ ಬಾರಿ ಕಪ್ ಎತ್ತಿದ ಬಳಿಕ ನಮ್ಮ ಹೊಸ ಸಿಎಂ ಡಿಕೆಶಿ ಸಂಭ್ರಮ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಕಳೆದ ವರ್ಷ ಆರ್​ಸಿಬಿ ಪ್ರಶಸ್ತಿ ಗೆದ್ದ ಬಳಿಕ ಬೆಂಗಳೂರಿನಲ್ಲಿ ಆಯೋಜಿಸಿದ ವಿಜಯೋತ್ಸವದ ಸಂದರ್ಭದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಇದೇ ವೈರಲ್ ವೀಡಿಯೊವನ್ನು ಜೂನ್ 4, 2025 ರಂದು ಟಿವಿ9 ಕನ್ನಡ ತನ್ನ ಯೂಟ್ಯೂಬ್ ಚಾಲೆನ್​ನಲ್ಲಿ ‘‘RCB flag ಹಿಡ್ದು ಕಾರಿನಲ್ಲಿ ವಿಧಾನಸೌಧದತ್ತ ಬಂದ DCM DKS’’ ಎಂದು ಬರೆದುಕೊಂಡಿದೆ.

ಜೂನ್ 4, 2025 ರಂದು ಒರಿಸ್ಸಾ ಪೋಸ್ಟ್​ ಪ್ರಕಟಿಸಿದ ವರದಿಯಲ್ಲಿ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಕಂಡುಕೊಂಡಿದ್ದೇವೆ. ‘‘ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬುಧವಾರ ಇಲ್ಲಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ವೈಯಕ್ತಿಕವಾಗಿ ಸ್ವಾಗತಿಸಿದರು. ಅವರು ಪ್ರತಿಯೊಬ್ಬ ಆಟಗಾರರಿಗೂ ಹೂಗುಚ್ಛಗಳನ್ನು ನೀಡಿದರು. ಡಿವೈಸಿಎಂ ಶಿವಕುಮಾರ್ ಅವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ವಿಶೇಷವಾಗಿ ಸ್ವಾಗತಿಸಿದರು, ಅವರಿಗೆ ಆರ್‌ಸಿಬಿ ತಂಡದ ಧ್ವಜ ಮತ್ತು ಕನ್ನಡ ಧ್ವಜ ಎರಡನ್ನೂ ನೀಡಿದರು. ವಿರಾಟ್ ಕೊಹ್ಲಿ ಧ್ವಜಗಳನ್ನು ಸಂತೋಷದಿಂದ ಸ್ವೀಕರಿಸಿದರು ಮತ್ತು ಡಿವೈಸಿಎಂ ಅವರೊಂದಿಗೆ ಛಾಯಾಚಿತ್ರಗಳಿಗೆ ಪೋಸ್ ನೀಡಿದರು. ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಶಿವಕುಮಾರ್ ತಮ್ಮ ಕಾರಿನಿಂದ ಆರ್‌ಸಿಬಿ ಧ್ವಜವನ್ನು ಬೀಸುತ್ತಿರುವುದು ಕೂಡ ಕಂಡುಬಂದಿತು.’’ ಎಂದು ಬರೆಯಲಾಗಿದೆ.

ಜೂನ್ 2025 ರಲ್ಲಿ ಇದೇ ವೀಡಿಯೊವನ್ನು ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

ಐಪಿಎಲ್ 2025ರ ಫೈನಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು. ಇದರಲ್ಲಿ ಆರ್​ಸಿಬಿ 6 ರನ್​ಗಳ ಜಯ ಸಾಧಿಸಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. ಮೊದಲ ಟ್ರೋಫಿ ಗೆದ್ದ ಖುಷಿಯಲ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್ ಹಾಗೂ ಕೆಎಸ್‌ಸಿಎ ವಿಜಯೋತ್ಸವ ಹಮ್ಮಿಕೊಂಡಿತ್ತು. ಆದರೆ, ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಆರ್​ಸಿಬಿ ಫೈನಲ್​ನಲ್ಲಿ ಗೆದ್ದ ಬಳಿಕ ಡಿಕೆ ಶಿವಕುಮಾರ್ ಸಂಭ್ರಮಾಚರಣೆ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಹಳೆಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in