

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಹುಡುಗಿಯರು ಸೇರಿದಂತೆ ಜನಸಮೂಹ ಬೆಂಕಿಯಲ್ಲಿ ಬಟ್ಟೆಗಳನ್ನು ಸುಟ್ಟು ಸಂತೋಷಪಡುತ್ತಿರುವುದನ್ನು ತೋರಿಸಲಾಗಿದೆ. ಈ ವೀಡಿಯೊ ಇರಾನ್‌ನದ್ದು ಎಂದು ಹೇಳಲಾಗುತ್ತಿದ್ದು, ಇರಾನ್‌ನಲ್ಲಿ ಹಿಜಾಬ್ ಧರಿಸುವ ಕಾನೂನುಬದ್ಧ ಅವಶ್ಯಕತೆಯನ್ನು ರದ್ದುಗೊಳಿಸಲಾಗಿದೆ, ಹೀಗಾಗಿ ಇರಾನಿನ ಜನರು ಬೀದಿಗಿಳಿದು ತಮ್ಮ ಹಿಜಾಬ್‌ಗಳನ್ನು ಸಾಮೂಹಿಕವಾಗಿ ಸುಟ್ಟು ಆಚರಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇರಾನ್ ಹಿಜಾಬ್‌ನ ಕಾನೂನುಬದ್ಧ ಅವಶ್ಯಕತೆಯನ್ನು ರದ್ದುಗೊಳಿಸಿದೆ. ಇರಾನಿನ ಮಹಿಳೆಯರ ದೀರ್ಘ ಹೋರಾಟ ಮತ್ತು ಕ್ರೂರ ಚಿತ್ರಹಿಂಸೆಯ ನಂತರ, ಹಿಜಾಬ್‌ನ ಕಾನೂನುಬದ್ಧ ಅವಶ್ಯಕತೆ ಅಲ್ಲಿಗೆ ಕೊನೆಗೊಂಡಿತು. ಇರಾನಿನ ಮಹಿಳೆಯರು ಬೀದಿಗಿಳಿದು ತಮ್ಮ ಹಿಜಾಬ್‌ಗಳನ್ನು ಸಾಮೂಹಿಕವಾಗಿ ಸುಟ್ಟು ಆಚರಿಸುತ್ತಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಮೂರು ವರ್ಷಗಳ ಹಳೆಯ ವೀಡಿಯೊ ಆಗಿದ್ದು, ಡ್ರೆಸ್ ಕೋಡ್ ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲ್ಪಟ್ಟ 22 ವರ್ಷದ ಮಹಿಳೆ ಮಹ್ಸಾ ಅಮಿನಿ ಸಾವಿನ ನಂತರದ ಪ್ರತಿಭಟನೆಗಳನ್ನು ತೋರಿಸುತ್ತದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಸೆಪ್ಟೆಂಬರ್ 21, 2022 ರಂದು ಸ್ಕೈ ನ್ಯೂಸ್ ವರದಿಯಲ್ಲಿ ನಾವು ಇದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ. "ಇರಾನಿನ ಮಹಿಳೆಯರು ಹಿಜಾಬ್‌ಗಳನ್ನು ಸುಟ್ಟು ಪ್ರತಿಭಟನೆಯಲ್ಲಿ ತಮ್ಮ ಕೂದಲನ್ನು ಕತ್ತರಿಸಿದ್ದಾರೆ. ಕಟ್ಟುನಿಟ್ಟಾದ ಡ್ರೆಸ್ ಕೋಡ್‌ಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸೆಪ್ಟೆಂಬರ್ 13 ರಂದು ದೇಶದ ನೈತಿಕತೆಯ ಪೊಲೀಸರು 22 ವರ್ಷದ ಮಹ್ಸಾ ಅಮಿನಿಯನ್ನು ಬಂಧಿಸಿದರು ಮತ್ತು ಮೂರು ದಿನಗಳ ನಂತರ ಬಂಧನ ಕೇಂದ್ರದಲ್ಲಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ನಿಧನರಾದರು. ಕಸ್ಟಡಿಯಲ್ಲಿ ಯುವತಿಯ ಸಾವಿನಿಂದಾಗಿ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಮಹಿಳೆಯರು ಶಿರಸ್ತ್ರಾಣಗಳನ್ನು ಸುಟ್ಟು ತಮ್ಮ ಕೂದಲನ್ನು ಕತ್ತರಿಸಿಕೊಂಡರು’’ ಎಂಬ ಮಾಹಿತಿ ಇದರಲ್ಲಿದೆ.
Malta Daily ಕೂಡ ಸೆಪ್ಟೆಂಬರ್ 22, 2022 ರಂದು ಇದೇ ವೈರಲ್ ವೀಡಿಯೊ ಜೊತೆಗೆ, ‘‘ಹಿಜಾಬ್ ಧರಿಸದ ಕಾರಣ ದೇಶದ ನೈತಿಕ ಪೊಲೀಸರು 22 ವರ್ಷದ ಮಹ್ಸಾ ಅಮಿನಿಯನ್ನು ಬಂಧಿಸಿದರು. ಆದರೆ, ನಂತರ ಟೆಹ್ರಾನ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇವರು ಸಾವನ್ನಪ್ಪಿದರು. ಇದನ್ನು ಖಂಡಿಸಿ ಪ್ರತಿಭಟನೆ ನಡೆದಿದ್ದು, ಇರಾನ್‌ನಾದ್ಯಂತ ಹಿಜಾಬ್‌ಗಳನ್ನು ಬೆಂಕಿಗೆ ಎಸೆಯಲಾಗುತ್ತಿದೆ. ಲಂಡನ್ ಮೂಲದ ಇರಾನ್ ಇಂಟರ್ನ್ಯಾಷನಲ್ ಪ್ರಕಾರ, ಯುವತಿಯನ್ನು ಮಂಗಳವಾರ ಬಂಧಿಸಲಾಗಿದ್ದು, ತಲೆಗೆ ಹಲವಾರು ಬಾರಿ ಪೆಟ್ಟು ಬಿದ್ದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆಕೆಯನ್ನು ಥಳಿಸಿದ್ದಾರೆ ಎಂದು ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರು ಹೇಳಿದ್ದಾರೆ.’’ ಎಂದು ಬರೆಯಲಾಗಿದೆ.
ಸೆಪ್ಟೆಂಬರ್ 21, 2022 ರಂದು ಬಿಬಿಸಿ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಇದೇ ವೈರಲ್ ವೀಡಿಯೊದ ಜೊತೆಗೆ ವೀಡಿಯೊ ಸುದ್ದಿ ಪ್ರಕಟಿಸಿದೆ. ‘‘ಹಿಜಾಬ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ಮಹ್ಸಾ ಅಮಿನಿಯ ಮರಣದ ನಂತರ ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ವಿರೋಧಿ ಪ್ರತಿಭಟನೆಗಳಲ್ಲಿ ಶಿರಸ್ತ್ರಾಣಗಳನ್ನು ಸುಟ್ಟು ಹಾಕಿದ್ದಾರೆ.’’ ಎಂಬ ಮಾಹಿತಿ ಇದರಲ್ಲಿದೆ.
ಇದಲ್ಲದೆ, ಹೆಚ್ಚಿನ ತನಿಖೆಯ ನಂತರ, ಇರಾನ್‌ನಲ್ಲಿ ಹಿಜಾಬ್‌ಗೆ ಕಾನೂನುಬದ್ಧ ಅವಶ್ಯಕತೆಯನ್ನು ರದ್ದುಗೊಳಿಸಲಾಗಿದೆ ಎಂದು ಸೂಚಿಸುವ ಯಾವುದೇ ಸುದ್ದಿ ಅಥವಾ ವಿಶ್ವಾಸರ್ಹ ವರದಿ ನಮಗೆ ಕಂಡುಬಂದಿಲ್ಲ. ಇದಕ್ಕೆ ವಿರುದ್ಧವಾಗಿ, ಇರಾನಿನ ದಂಡ ಸಂಹಿತೆಯ ಅಡಿಯಲ್ಲಿ ಹಿಜಾಬ್ ಧರಿಸುವುದು ಇನ್ನೂ ಕಡ್ಡಾಯವಾಗಿದೆ. ಸರಿಯಾದ ಹಿಜಾಬ್ ಇಲ್ಲದೆ ಸಾರ್ವಜನಿಕವಾಗಿ ಕಂಡುಬರುವ ಮಹಿಳೆಯರಿಗೆ ಹತ್ತು ದಿನಗಳಿಂದ ಎರಡು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 50,000 ರಿಂದ 500,000 ರಿಯಾಲ್‌ಗಳ ದಂಡ ವಿಧಿಸಲಾಗುತ್ತದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಹಿಜಾಬ್ ಕಾನೂನು ರದ್ದುಗೊಳಿಸಿದ್ದಕ್ಕೆ ಇರಾನಿನ ಮಹಿಳೆಯರು ಹಿಜಾಬ್‌ಗಳನ್ನು ಸುಟ್ಟು ಸಂಭ್ರಮಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ವೀಡಿಯೊ ಮೂರು ವರ್ಷ ಹಳೆಯದು ಮತ್ತು ಡ್ರೆಸ್ ಕೋಡ್ ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲ್ಪಟ್ಟ 22 ವರ್ಷದ ಮಹಿಳೆ ಮಹ್ಸಾ ಅಮಿನಿ ಸಾವಿನ ನಂತರದ ಪ್ರತಿಭಟನೆಗಳನ್ನು ಚಿತ್ರಿಸುತ್ತದೆ.