ಹಾಲು ತುಂಬಿದ ಟಬ್‌ನಲ್ಲಿ ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವ್ಯಕ್ತಿಯೋರ್ವ ಒಂದು ಸಣ್ಣ ಟಬ್‌ನಲ್ಲಿ ಮಲಗಿದ್ದು, ಒಂದು ಚೊಂಬಿನೊಂದಿಗೆ ಬಿಳಿ ದ್ರವವನ್ನು ಸ್ಕೂಪ್ ಮಾಡಿ ತಲೆಯ ಮೇಲೆ ಸುರಿಯುತ್ತಾನೆ. ಇದು ಕೇರಳದ ಹಾಲಿನ ಡೈರಿಯಲ್ಲಿ ನಡೆದ ಘಟನೆ ಆಗಿದ್ದು, ಈ ಮುಸ್ಲಿಂ ವ್ಯಕ್ತಿ ಹಾಲಿನಲ್ಲಿ ಸ್ನಾನ ಮಾಡಿ ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ನವೆಂಬರ್ 10, 2024 ರಂದು ಈ ವೀಡಿಯೊ ಹಂಚಿಕೊಂಡು, ‘‘ಜಿಹಾದಿಗಳ ಮತ್ತೊಂದು ಕ್ರೂರ ಮುಖ. ಕೇರಳದ ಹಾಲಿನ ಡೈರಿ ಕಾರ್ಖಾನೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಾಲಿನ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ನೋಡಿ. ಇದೇ ಹಾಲನ್ನು ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ ಹಿಂದೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಥೂ ನಿಮ್ಮ ಜನ್ಮಕ್ಕೆ..’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊಕ್ಕು ಕೇರಳ ಅಥವಾ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಇದು ಟರ್ಕಿಯಲ್ಲಿ 2020 ರಲ್ಲಿ ನಡೆದ ಘಟನೆ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಟರ್ಕಿಯ ಸ್ಥಳೀಯ ವೆಬ್ಸೈಟ್ kosmo ನವೆಂಬರ್ 9, 2020 ರಂದು ಈ ಕುರಿತು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ.
ಇದರಲ್ಲಿರುವ ವರದಿಯ ಪ್ರಕಾರ, ‘‘ಈ ಘಟನೆ ಟರ್ಕಿಯ ಕೊನ್ಯಾ ನಗರದಲ್ಲಿ ನಡೆದಿದೆ. ಕೊನ್ಯಾದಲ್ಲಿನ ಡೈರಿ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಮ್ರೆ ಸಾಯರ್ ಅವರನ್ನು ಹಾಲಿನಲ್ಲಿ ಸ್ನಾನ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ನವೆಂಬರ್ 6, 2020 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡ ಪ್ಲಾಂಟ್‌ನ ಇನ್ನೊಬ್ಬ ಕೆಲಸಗಾರ ಉಗುರ್ ತುರ್ಗುಟ್ ಅವರನ್ನು ಸಾಯರ್ ಜೊತೆಗೆ ಬಂಧಿಸಲಾಯಿತು. ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಡೈರಿ ಪ್ಲಾಂಟ್‌ಗೆ ದಂಡ ಕೂಡ ವಿಧಿಸಲಾಗಿದೆ ಮತ್ತು ಅವರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ’’ ಎಂದು ವರದಿಯಲ್ಲಿದೆ.
ಹಾಗೆಯೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ನವೆಂಬರ್ 13, 2020 ರಂದು ಮಾಡಿರುವ ವರದಿ ಕೂಡ ನಮಗೆ ಸಿಕ್ಕಿದೆ. ‘‘ಈ ವೀಡಿಯೊವನ್ನು ಸೆಂಟ್ರಲ್ ಅನಾಟೋಲಿಯನ್ ಪ್ರಾಂತ್ಯದ ಕೊನ್ಯಾದಲ್ಲಿ ರೆಕಾರ್ಡ್ ಮಾಡಲಾಗಿದೆ ಮತ್ತು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ನಂತರ ಅದು ವೈರಲ್ ಆಗಿದೆ. ವೀಡಿಯೊದಲ್ಲಿರುವ ವ್ಯಕ್ತಿಯನ್ನು ಎಮ್ರೆ ಸಾಯರ್ ಎಂದು ಗುರುತಿಸಲಾಗಿದೆ ಮತ್ತು ಚಿತ್ರೀಕರಿಸಿದವರನ್ನು ಕೂಡ ಬಂಧಿಸಲಾಗಿದೆ. ಘಟನೆಯ ನಂತರ, ಅಧಿಕಾರಿಗಳು ದಂಡವನ್ನು ವಿಧಿಸಿದ್ದಾರೆ. ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಸ್ಥಾವರವನ್ನು ಮುಚ್ಚಲಾಗಿದೆ’’ ಎಂದು ವರದಿಯಲ್ಲಿದೆ.
ಟರ್ಕಿಯ ಮತ್ತೊಂದು ಸ್ಥಳೀಯ ಸುದ್ದಿ ವಾಹಿನಿ ಟಿಆರ್‌ಟಿ ಹೇಬರ್ ಕೂಡ ಈ ಬಗ್ಗೆ ಯೂಟ್ಯೂಬ್ನಲ್ಲಿ ವೀಡಿಯೊ ಹಂಚಿಕೊಂಡು ವರದಿ ಮಾಡಿದೆ.
ಹೀಗಾಗಿ ವೈರಲ್ ವಿಡಿಯೋ ಇತ್ತೀಚಿನದಲ್ಲ ಮತ್ತು ಇದು ಕೇರಳಕ್ಕೆ ಸಂಬಂಧ ಪಟ್ಟದಲ್ಲ ಎಂಬುದು ಸ್ಪಷ್ಟವಾಗಿದೆ. ಈ ವಿಡಿಯೋ 2020 ರದ್ದಾಗಿದೆ. ಟರ್ಕಿಯ ಡೈರಿ ಪ್ಲಾಂಟ್‌ನಲ್ಲಿ ನಡೆದ ಘಟನೆ ಇದಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಸದ್ಯ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.