Fact Check: ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಿ ಧ್ವಂಸಗೊಳಿಸಲು ಹೊಂಚು ಹಾಕಿದ್ದ ಉಗ್ರರನ್ನು ಬಂಧಿಸಿದ್ದು ನಿಜವೇ?

ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಿ ಧ್ವಂಸಗೊಳಿಸಲು ಉಗ್ರರು ಸಂಚು ರೂಪಿಸಿದ್ದರು ಮತ್ತು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Fact Check: ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಿ ಧ್ವಂಸಗೊಳಿಸಲು ಹೊಂಚು ಹಾಕಿದ್ದ ಉಗ್ರರನ್ನು ಬಂಧಿಸಿದ್ದು ನಿಜವೇ?
Published on
2 min read

ಕರ್ನಾಟಕದಲ್ಲಿರುವ ಶಿವನ ಹೆಸರಾಂತ ದೇವಸ್ಥಾನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ದೇವಾಲಯವೂ ಒಂದು. ಬೀಚ್​ನ ಅಕರ್ಷಕ ಪರಿಸರದೊಂದಿಗೆ ಬೃಹತ್ ಈಶ್ವರನ ಮೂರ್ತಿ ಇಲ್ಲಿಗೆ ಆಧ್ಯಾತ್ಮಿಕ ಮಹತ್ವವನ್ನು ತಂದು ಕೊಟ್ಟಿದೆ. ಹೀಗಾಗಿಯೇ ಇದು ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಆಗಿದೆ. ಪ್ರತಿದಿನ ಸಾವಿರಾರೂ ಭಕ್ತಾದಿಗಳು ಭೇಟಿ ನೀಡುವ ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಿ ಧ್ವಂಸಗೊಳಿಸಲು ಉಗ್ರರು ಸಂಚು ರೂಪಿಸಿದ್ದರು ಮತ್ತು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು, ‘‘ಮುರ್ಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಿ ಧ್ವಂಸಗೊಳಿಸಲು ಹೊಂಚು ಹಾಕುತ್ತಿರುವ ಆರು ಜನ ಆತಂಕವಾದಿಗಳನ್ನು ಭಟ್ಕಳದಲ್ಲಿ ಸೆರೆ ಹಿಡಿಯಲಾಗಿದೆ’’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸ್ಥಳೀಯ ನ್ಯೂಸ್ ಚಾನೆಲ್ ಗೋಮಾಂತಕ್ ವರದಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಸ್ಟ್ ಅನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್‌ ಹಾಕಲು ಹೊಂಚು ಹಾಕುತ್ತಿದ್ದ 6 ಜನ ಉಗ್ರರ ಬಂಧನ ಎನ್ನುವುದು ತಪ್ಪು ಹೇಳಿಕೆ. ಇದು ಕರ್ನಾಟಕ ಕರಾವಳಿ ಕಾವಲು ಪಡೆ ಪೊಲೀಸರು ನಡೆಸಿದ ಅಣಕು ಕಾರ್ಯಾಚರಣೆ ಒಂದು ಭಾಗವಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ಫೋಟೋದಲ್ಲಿ ಇರುವ ಗೋಮಾಂತಕ್ ಟಿವಿಯ ವೆಬ್​ಸೈಟ್​ನಲ್ಲಿ ಈ ಕುರಿತು ಸುದ್ದಿ ಹುಡುಕಿದ್ದೇವೆ. ಆಗ ಅಕ್ಟೋಬರ್ 18, 2024ರಂದು ಇದಕ್ಕೆ ಸಂಬಂಧಿಸಿದ ವರದಿ ಪ್ರಕಟವಾಗಿರುವುದು ಸಿಕ್ಕಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಕರಾವಳಿ ಕಾವಲು ಪಡೆ ಪೊಲೀಸರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸಾಗರ ರಕ್ಷಾ ಕವಚ ಕಾರ್ಯಾಚರಣೆ ಆಯೋಜಿಸಿದ್ದಾರೆ, ಭಟ್ಕಳದ ಮುರುಡೇಶ್ವರ ದೇವಸ್ಥಾನದ ಮೇಲೆ ಯಾವುದೇ ಭಯೋತ್ಪಾದಕರ ಭೀತಿ ಇಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ’’ ಎಂದು ಬರೆಯಲಾಗಿದೆ. ಈ ಸುದ್ದಿಯಲ್ಲಿ ಕರಾವಳಿ ಕಾವಲು ಪಡೆ ಪೊಲೀಸರ ಸಾಗರ ರಕ್ಷಾ ಕವಚ ‘ಕಾರ್ಯಾಚರಣೆ’ ಎಂದು ಬರೆದಿರುವುದನ್ನು ನಾವು ಗಮನಿಸಿದ್ದು, ಆ ಪ್ರಕಾರ ಇನ್ನಷ್ಟು ಶೋಧ ನಡೆಸಿದ್ದೇವೆ.

ಈ ವೈರಲ್ ಫೋಟೋವನ್ನು ನಾವು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಮೂಲಕ ಸರ್ಚ್ ಕೊಟ್ಟೆವು. ಆಗ ಅಕ್ಟೋಬರ್ 19, 2024ರ ವಿಜಯವಾಣಿ ವರದಿ ನಮಗೆ ಸಿಕ್ಕಿದೆ. ‘‘ಸಮುದ್ರದ ಮೂಲಕ ಒಳನುಸುಳಲು ಯತ್ನಿಸುತ್ತಿದ್ದ ಆರು ಭಯೋತ್ಪಾದಕರನ್ನು ಗುರುವಾರ ಬೆಳಗಿನ ಜಾವ 1.30ರ ಸುಮಾರಿಗೆ ಕರಾವಳಿ ಕಾವಲು ಪಡೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇವರಾರೂ ನೈಜ ಭಯೋತ್ಪಾದಕರಲ್ಲ. ಕರಾವಳಿ ಕವಚದಿಂದ ನಡೆದ ಕಲ್ಪಿತ ಕಾರ್‍ಯಾಚರಣೆ ಇದಾಗಿದೆ. ಪ್ರತಿವರ್ಷ ಭದ್ರತಾ ಪಡೆಗಳ ಸಹಯೋಗದಲ್ಲಿ, ಕರಾವಳಿಯಲ್ಲಿ ನಡೆಯುವ ಸಾಗರ ಕವಚ ಕಲ್ಪಿತ ಕಾರ್ಯಾಚರಣೆಯ ಸನ್ನಿವೇಶಗಳಿವು,’’ ಎಂದು ಬರೆಯಲಾಗಿದೆ.

ಹಾಗೆಯೆ ಅಕ್ಟೋಬರ್ 17, 2024ರ ಕನ್ನಡವಾಣಿ ನ್ಯೂಸ್‌ ವರದಿಯಲ್ಲಿ, ‘‘ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯವರು ನಡೆಸಿದ ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೇ ಮುರುಡೇಶ್ವರ ದೇವಸ್ಥಾನದಲ್ಲಿ ಸಮುದ್ರ ಮಾರ್ಗವಾಗಿ ಬಾಂಬ್ ಇಡಲು ಬಂದಿದ್ದ ನಾಲ್ಕು ಜನ ಭಯೋತ್ಪಾದಕರನ್ನು ಕರಾವಳಿ ಕಾವಲು ಪೊಲೀಸರು ಬಂಧಿಸಿದ್ದಾರೆ. ಹೌದು ಇದು ನಿಜ ಎಂದು ಹೆದರಬೇಡಿ. ಇದು ಅಣಕು ಕಾರ್ಯಾಚರಣೆ ಅಷ್ಟೇ. ರಾಜ್ಯದ ಸೂಕ್ಷ್ಮ ಪ್ರದೇಶದಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಸಾಗರ ಕವಚ್ ಅಣುಕು ಕಾರ್ಯಾಚರಣೆ ನಡೆಸಲಾಗುತ್ತದೆ,’’ ಎಂದು ಇದರಲ್ಲಿ ಮಾಹಿತಿ ನೀಡಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಿ ಧ್ವಂಸಗೊಳಿಸಲು ಹೊಂಚು ಹಾಕಿದ್ದ ಉಗ್ರರನ್ನು ಬಂಧಿಸಿರುವುದು ನಿಜವಲ್ಲ, ಇದು ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯವರು ನಡೆಸಿದ ಅಣಕು ಕಾರ್ಯಾಚರಣೆ ಆಗಿದೆ.

Related Stories

No stories found.
logo
South Check
southcheck.in