ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹತೋಟಿಗೆ ಬರುತ್ತಿದೆ ಎನ್ನುತ್ತಿರುವಾಗ ಅಲ್ಲಿನ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಾಂಗ್ಲಾದೇಶ ಪ್ರವಾಹಕ್ಕೆ ತುತ್ತಾಗಿದೆ. ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ಪಶ್ಚಿಮ ಬಾಂಗ್ಲಾದೇಶದ ಹಲವು ಭಾಗಗಳಲ್ಲಿ ಇದುವರೆಗೆ 13 ಜನರು ಸಾವನ್ನಪ್ಪಿದ್ದಾರೆ. ನೂರಾರು ಮನೆಗಳು ಪ್ರವಾಹದಲ್ಲಿ ಮುಳುಗಿದ್ದು, ಲಕ್ಷಾಂತರ ಜನರು ಈ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ, ಅನೇಕ ಕುಟುಂಬಗಳು ನಿರಾಶ್ರಿತವಾಗಿವೆ.
ಬಾಂಗ್ಲಾ ಪ್ರವಾಹದ ಕುರಿತು ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಇತ್ತೀಚೆಗಷ್ಟೆ ನಡೆದ ಹಿಂಸಾಚಾರದಲ್ಲಿ ಕಿಡಿಗೇಡಿಗಳು ಬಾಂಗ್ಲಾದ ಖುಲ್ನಾ ವಿಭಾಗದಲ್ಲಿ ನೆಲೆಗೊಂಡಿರುವ ಮೆಹರ್‌ಪುರದಲ್ಲಿರುವ ಇಸ್ಕಾನ್ ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದರು. ಹೀಗಿದ್ದರೂ ಇಸ್ಕಾನ್, ಪ್ರವಾಹದಲ್ಲಿ ಸಿಲುಕಿರುವ ಬಾಂಗ್ಲಾ ಪ್ರಜೆಗಳಿಗೆ ಸಹಾಯ ಮಾಡುತ್ತಿದೆ ಎಂಬ ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ.
ರವಿ ಎನ್ ದೇವಾಡಿಗ ಎಂಬವರು ಆಗಸ್ಟ್ 24, 2024 ರಂದು ತಮ್ಮ ಎಕ್ಸ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ‘ತಿನ್ನುವ ಬಟ್ಟಲಿಗೆ ವಿಷ ಹಾಕಿದರು. ತಿರುಗಿ ಅವರಿಗೆ ಅಮೃತ ಬಡಿಸುವ ಧರ್ಮ ಅಂತ ಈ ಭೂಮಿಯ ಮೇಲೆ ಇದ್ದರೆ ಅದು ಸನಾತನ ಹಿಂದೂ ಧರ್ಮ ಮಾತ್ರ. ಯಾವ ಜನರು ಬಾಂಗ್ಲಾದೇಶದಲ್ಲಿ ಇಸ್ಕಾನ್ ಟೆಂಪಲ್ ಧ್ವಂಸ ಮಾಡಿದರೋ ಇಂದು ಅದೇ ಪ್ರವಾಹ ಪೀಡಿತ ಜನರಿಗೆ ಇಸ್ಕಾನ್ ಆಹಾರವನ್ನು ಬಡಿಸುವ ಮೂಲಕ ಅವರ ನೆರವಿಗೆ ಧಾವಿಸಿದೆ.’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಆಗಸ್ಟ್ 23, 2024 ರಂದು ಅಂಶುಲ್ ಸಕ್ಸೇನಾ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಇದೇ ವೀಡಿಯೊ ಅಪ್ಲೋಡ್ ಮಾಡಿದ್ದು, ‘ಬಾಂಗ್ಲಾದೇಶದ ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಇಸ್ಕಾನ್ ನೆರವು ನೀಡುತ್ತಿದೆ. ಕೆಲವು ದಿನಗಳ ಹಿಂದೆ, 5 ಆಗಸ್ಟ್ 2024 ರಂದು, ಬಾಂಗ್ಲಾದೇಶದ ಮೆಹರ್‌ಪುರದಲ್ಲಿ ಇಸ್ಕಾನ್ ದೇವಾಲಯದ ಮೇಲೆ ದಾಳಿ ನಡೆಸಲಾಯಿತು. ಇದು ಮೊದಲ ದಾಳಿಯಾಗಿರಲಿಲ್ಲ. ಅಕ್ಟೋಬರ್ 2021 ರಲ್ಲಿ ಕೂಡ ಬಾಂಗ್ಲಾದೇಶದ ನೊಖಾಲಿಯಲ್ಲಿ ಇಸ್ಕಾನ್ ದೇವಾಲಯದ ಮೇಲೆ ಗುಂಪೊಂದು ದಾಳಿ ನಡೆಸಿತ್ತು.’ ಎಂದು ಹೇಳಿಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಇದು ಸುಳ್ಳು ಮಾಹಿತಿ ಎಂಬುದು ಕಂಡುಬಂದಿದೆ. ಸದ್ಯ ವೈರಲ್ ಆಗುತ್ತಿರುವ ವೀಡಿಯೊ 2022 ರದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆದರೆ, ನಿಖರ ಮಾಹಿತಿ ಸಿಗಲಿಲ್ಲ. ಬಳಿಕ ‘ಇಸ್ಕಾನ್ ಬಾಂಗ್ಲಾದೇಶ ಪ್ರವಾಹ’ ಎಂಬ ಕೀವರ್ಡ್ನೊಂದಿಗೆ ಗೂಗಲ್ ಸರ್ಚ್ ಮಾಡಿದೆವು. ಆಗ ಇಸ್ಕಾನ್ ಬಾಂಗ್ಲಾದೇಶ ವೆಬ್ಸೈಟ್ನಲ್ಲಿ ಜೂನ್ 22, 2022 ರಲ್ಲಿ ಪ್ರಕಟವಾದ ಲೇಖನ ಕಂಡುಬಂತು. ಇದಕ್ಕೆ ‘ಇಸ್ಕಾನ್ ಸಿಲ್ಹೆಟ್ ಪ್ರವಾಹ ಸಂತ್ರಸ್ತರ ಪರವಾಗಿ ನಿಂತಿದೆ’ ಎಂಬ ಹೆಡ್ಲೈನ್ ನೀಡಿದೆ. ಜೊತೆಗೆ ವೈರಲ್ ಆಗುತ್ತಿರುವ ವೀಡಿಯೊ ಕೂಡ ಇದರಲ್ಲಿದೆ.
ವರದಿಯಲ್ಲಿ ಏನಿದೆ?: ‘ಸತತ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಸಿಲ್ಹೆಟ್ ಮತ್ತು ಸುನಮ್‌ಗಂಜ್‌ನಲ್ಲಿ ಪ್ರವಾಹ ಪರಿಸ್ಥಿತಿ ಭೀಕರ ಸ್ಥಿತಿ ತಲುಪಿದೆ. ಸರ್ಕಾರ ವಿವಿಧೆಡೆ ಪರಿಹಾರ ವಿತರಣೆ ಮಾಡಿದರೂ ಹಲವರಿಗೆ ಕೈತುಂಬ ಆಹಾರ ಸಿಕ್ಕಿಲ್ಲ. ಪ್ರವಾಹ ಸಂತ್ರಸ್ತರ ಮನೆಗಳಿಗೆ ತೆರಳಿ ಸಾಧ್ಯವಾದಷ್ಟು ಆಹಾರ ನೆರವು ನೀಡುತ್ತಿದ್ದೇವೆ. ಸಿಲ್ಹೆಟ್ ನಗರದ ಹೊರತಾಗಿ, ಸಮೀಪದ ಉಪಜಿಲಾಗಳಲ್ಲಿ ಪ್ರತಿದಿನ 3-4 ಸಾವಿರ ಜನರಿಗೆ ಬೇಯಿಸಿದ ಆಹಾರವನ್ನು ವಿತರಿಸಲಾಗುತ್ತದೆ. ಆಹಾರದ ಜೊತೆಗೆ, ಇಸ್ಕಾನ್ ಬಟ್ಟೆಗಳು, ಅಗತ್ಯ ಔಷಧಗಳು, ನೀರು ಶುದ್ಧೀಕರಣಕ್ಕಾಗಿ ಮಾತ್ರೆಗಳು ಮತ್ತು ವೈದ್ಯಕೀಯ ಆರೈಕೆಯಂತಹ ಇತರ ಅಗತ್ಯ ಸಹಾಯವನ್ನು ವಿತರಿಸುತ್ತದೆ. ಪ್ರವಾಹ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಇಸ್ಕಾನ್ ಪ್ರವಾಹ ಸಂತ್ರಸ್ತರ ಪಕ್ಕದಲ್ಲಿರುತ್ತದೆ’ ಎಂದು ವರದಿಯಲ್ಲಿದೆ.
ಹಾಗೆಯೆ ಜೂನ್ 20, 2022 ರಂದು Iskcon Youth Forum, Sylhet ಫೇಸ್ಬುಕ್ ಖಾತೆಯಲ್ಲಿ ‘ಇದು ಅನ್ನವಲ್ಲ ಕೋಟ್ಯಾಂತರ ರೂಪಾಯಿಗಳ ಸಂಪತ್ತು. ಸ್ವಲ್ಪ ಆಹಾರಕ್ಕಾಗಿ ಜನರು ಎಷ್ಟು ಚಡಪಡಿಸುತ್ತಾರೆ ನೋಡಿ. ಪ್ರವಾಹ ಸಂತ್ರಸ್ತರ ಪಕ್ಕದಲ್ಲಿ ಇಸ್ಕಾನ್ ಸಿಲ್ಹೆಟ್. ನೀವೂ ಮುಂದೆ ಬನ್ನಿ’ ಎಂಬ ಅಡಿಬರಹದೊಂದಿಗೆ ಇದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಸಂಕೀರ್ತನ್ ಫೆಸ್ಟ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿಯೂ ಜೂನ್ 20, 2022 ರಂದು ಇದೇ ವೀಡಿಯೊವನ್ನು ಶೇರ್ ಮಾಡಲಾಗಿದ್ದು, ‘ಇಸ್ಕಾನ್ ಸಿಲ್ಹೆಟ್ ಮತ್ತು ಸಂಕೀರ್ತನ್ ಫೆಸ್ಟ್ ಸಿಲ್ಹೆಟ್-ಸುನಮ್‌ಗಂಜ್‌ನಲ್ಲಿನ ಪ್ರವಾಹ ಪೀಡಿತರಿಗೆ ಸಹಾಯ ಮಾಡುತ್ತಿರುವುದು’ ಎಂಬ ಶೀರ್ಷಿಕೆ ನೀಡಿದೆ.
ಹೀಗಾಗಿ ಬಾಂಗ್ಲಾದೇಶದ ಇತ್ತೀಚಿನ ಗಲಭೆಯಲ್ಲಿ ಕಿಡಿಗೇಡಿಗಳು ಇಸ್ಕಾನ್ ದೇವಾಲಯಕ್ಕೆ ಹಾನಿ ಮಾಡಿದ್ದರೂ, ಇಸ್ಕಾನ್ ಅಲ್ಲಿನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದೆ ಎನ್ನಲಾಗುತ್ತಿವ ವೀಡಿಯೊ ಸುಳ್ಳಲಾಗಿದೆ. ಇದು 2022ರಲ್ಲಿ ಸಿಲ್ಹೆಟ್ ಪ್ರವಾಹ ಸಂತ್ರಸ್ತರಿಗೆ ಇಸ್ಕಾನ್ ಸಹಾಯ ಮಾಡುತ್ತಿರುವ ವೀಡಿಯೊ ಆಗಿದೆ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.