

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಕಾರ್ಯಕ್ರಮವೊಂದರಲ್ಲಿ ಅರೇಬಿಕ್ ಉಡುಪಿನಲ್ಲಿದ್ದ ವ್ಯಕ್ತಿಯಿಂದ ಮೈಕ್ರೊಫೋನ್ ತೆಗೆದುಕೊಳ್ಳುವ ಮೊದಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಅರೇಬಿಕ್ ಉಡುಪಿನಲ್ಲಿದ್ದ ವ್ಯಕ್ತಿ ನೆತನ್ಯಾಹು ಅವರಿಗೆ ಮೈಕ್ರೊಫೋನ್ ನೀಡಲು ಮುಂದೆ ಬರುತ್ತಾನೆ. ಆದರೆ ನೆತನ್ಯಾಹು ತನ್ನ ಕೈಗಳನ್ನು ಸ್ಯಾನಿಟೈಸ್ ಮಾಡಿ, ನಂತರ ಮೈಕ್ರೊಫೋನ್ ತೆಗೆದುಕೊಳ್ಳುತ್ತಾರೆ. ಕೆಲವರು ಇದನ್ನು ಜನಾಂಗೀಯತೆಯ ಉದಾಹರಣೆಯಾಗಿ ಹಂಚಿಕೊಳ್ಳುತ್ತಿದ್ದರೆ, ಇನ್ನು ಕೆಲವರು ನೆತನ್ಯಾಹು ಅರಬ್ ಮುಸ್ಲಿಮರನ್ನು ಕೀಳಾಗಿ ಕಾಣುತ್ತಿರುವಂತೆ ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ನೆತನ್ಯಾಹು ಮುಂದೆ ಅರಬ್ ಬಿಲಿಯನೇರ್ ತೈಲ ದೊರೆಗಳ ಸ್ಥಿತಿ. ನೆತನ್ಯಾಹು ತನ್ನ ಕೈಗಳನ್ನು ಸೋಂಕುನಿವಾರಕದಿಂದ ಸೋಂಕುರಹಿತಗೊಳಿಸುವವರೆಗೆ ಅರಬ್ ಶೇಖ್‌ನಿಂದ ಮೈಕ್ ತೆಗೆದುಕೊಳ್ಳುವುದಿಲ್ಲ.’’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಈ ಹೇಳಿಕೆ ದಾರಿತಪ್ಪಿಸುವಂತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಇತ್ತೀಚಿನದ್ದಲ್ಲ, ಬದಲಾಗಿ ಕೋವಿಡ್-19 ರ ಸಮಯದ್ದಾಗಿದ್ದು ಮುನ್ನೆಚ್ಚರಿಕೆಯಾಗಿ ನೆತನ್ಯಾಹು ಅವರು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡಿದ್ದರು.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ನಲ್ಲಿ ಹುಡುಕಿದಾಗ, ಇಸ್ರೇಲಿ ಪ್ರಧಾನ ಮಂತ್ರಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನಾವು ಇದೇ ವೈರಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ಕಂಡುಕೊಂಡಿದ್ದೇವೆ. ಇದನ್ನು ನವೆಂಬರ್ 26, 2020 ರಂದು ಅಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿವರಣೆಯ ಪ್ರಕಾರ, ನೆತನ್ಯಾಹು ದುಬೈನಿಂದ ಇಸ್ರೇಲ್‌ನ ಮೊದಲ ವಾಣಿಜ್ಯ ವಿಮಾನವನ್ನು ಸ್ವಾಗತಿಸುವ ಸಮಾರಂಭದಲ್ಲಿ ಭಾಗವಹಿಸಿದರು ಮತ್ತು ಬೆನ್-ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ವೈರಲ್ ವೀಡಿಯೊವನ್ನು 3:00 ನಿಮಿಷಗಳ ಟೈಮ್ಸ್ಟ್ಯಾಂಪ್ನಲ್ಲಿ ವೀಕ್ಷಿಸಬಹುದು.
ಈ ವೀಡಿಯೊ COVID-19 ಕಾಲದ್ದಾಗಿದೆ. ವೀಡಿಯೊದಲ್ಲಿರುವ ಹೆಚ್ಚಿನ ಜನರು ಮಾಸ್ಕ್‌ಗಳನ್ನು ಧರಿಸಿದ್ದಾರೆ. ಆ ಸಮಯದಲ್ಲಿ, ಸೋಂಕನ್ನು ತಡೆಗಟ್ಟಲು ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನಿಯಮಿತವಾಗಿ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವಂತಹ ವಿವಿಧ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು.
ಮೈಕ್ರೊಫೋನ್ ತೆಗೆದುಕೊಳ್ಳುವ ಮೊದಲು ನೆತನ್ಯಾಹು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರುವುದು ಕಾಣಬಹುದು. ಭಾಷಣ ಮಾಡುವ ಮೊದಲು ಮತ್ತು ನಂತರ ಅವರು ಮಾಸ್ಕ್ ಧರಿಸಿರುವುದು ಕಂಡುಬಂದಿದೆ.
ಸುದ್ದಿ ವರದಿಗಳ ಪ್ರಕಾರ, ಯುಎಇ ಸರ್ಕಾರದ ಬಜೆಟ್ ವಿಮಾನಯಾನ ಸಂಸ್ಥೆಯಾದ ಫ್ಲೈದುಬಾಯ್, COVID-19 ಸಾಂಕ್ರಾಮಿಕ ಸಮಯದಲ್ಲಿ ಪ್ರವಾಸೋದ್ಯಮದಿಂದ ಲಾಭ ಪಡೆಯುವ ಮತ್ತು ಅವರ ಆರ್ಥಿಕತೆಯನ್ನು ಹೆಚ್ಚಿಸುವ ಆಶಯದೊಂದಿಗೆ ಉಭಯ ದೇಶಗಳ ನಡುವೆ ವಾಣಿಜ್ಯ ಪ್ರಯಾಣಿಕ ಸೇವೆಯನ್ನು ಪ್ರಾರಂಭಿಸಿದ ಮೊದಲ ಸಂಸ್ಥೆಯಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮುಸ್ಲಿಂ ವ್ಯಕ್ತಿಯಿಂದ ಮೈಕ್ರೊಫೋನ್ ತೆಗೆದುಕೊಳ್ಳುವ ಮೊದಲು ಕೈಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ ಎಂಬರ್ಥದಲ್ಲಿ ವೈರಲ್ ಆಗುತ್ತಿರುವ ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.