Fact Check: ದೆಹಲಿಯ ಸುಲ್ತಾನ್‌ಪುರಿಯಲ್ಲಿ ಮಹಿಳೆಗೆ ಚಾಕು ಝಳಪಿಸಿ ಬೆದರಿಸಿದ್ದು ಮುಸ್ಲಿಂ ವ್ಯಕ್ತಿ ಅಲ್ಲ

ಚಾಕು ಝಳಪಿಸಿ ಹೆದರಿಸುತ್ತಿರುವುದು ಮುಸ್ಲಿಂ ಹುಡುಗರು ಎಂದು ಕೆಲವು ಬಳಕೆದಾರರು ಕೋಮುವಾದ ಮತ್ತು ಪ್ರಚೋದಕ ಹೇಳಿಕೆಗಳೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದಾರೆ.
Fact Check: ದೆಹಲಿಯ ಸುಲ್ತಾನ್‌ಪುರಿಯಲ್ಲಿ ಮಹಿಳೆಗೆ ಚಾಕು ಝಳಪಿಸಿ ಬೆದರಿಸಿದ್ದು ಮುಸ್ಲಿಂ ವ್ಯಕ್ತಿ ಅಲ್ಲ
Published on
2 min read

ದೆಹಲಿಯ ಸುಲ್ತಾನಪುರಿ ಪ್ರದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಕೆಲ ಹದಿಹರೆಯದವರು ಮಹಿಳೆಗೆ ಚಾಕು ತೋರಿಸಿ ಬೆದರಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಸಾಕಷ್ಟು ಜನ ಅಲ್ಲಿ ಜಮಾಯಿಸಿದ್ದರು. ಚಾಕು ಝಳಪಿಸಿ ಹೆದರಿಸುತ್ತಿರುವುದು ಮುಸ್ಲಿಂ ಹುಡುಗರು ಎಂದು ಕೆಲವು ಬಳಕೆದಾರರು ಕೋಮುವಾದ ಮತ್ತು ಪ್ರಚೋದಕ ಹೇಳಿಕೆಗಳೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದಾರೆ.

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಮಿನಿ ಪಾಕಿಸ್ತಾನ ಎಂದು ಕರೆಯಲ್ಪಡುವ ದೆಹಲಿಯ ಸುಲ್ತಾನಪುರಿಯಲ್ಲಿ ಜಿಹಾದಿ ಭಯೋತ್ಪಾದನೆಗೆ ಸಾಕ್ಷಿಯಾಗಿದೆ. ಗೊಂದಲದ ವೀಡಿಯೊದಲ್ಲಿ ರಸ್ತೆ ಬದಿಯ ವ್ಯಾಪಾರಿ ಮಹಿಳೆಯೊಬ್ಬರ ಮೇಲೆ ದೊಡ್ಡ ಚಾಕುವಿನಿಂದ ಹಲ್ಲೆ ನಡೆಸುತ್ತಿರುವುದನ್ನು ತೋರಿಸುತ್ತದೆ. ಆಸಿಫ್ ಎಂದು ಗುರುತಿಸಲಾದ ದಾಳಿಕೋರನು ಹೊಡೆಯಲು ಮುಂದಾಗಿದ್ದಾನೆ,’’ ಎಂದು ಬರೆಯಲಾಗಿದೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಗೂಗಲ್​ನಲ್ಲಿ ‘Delhi Sultanpuri Knife’ ಎಂಬ ಕೀವರ್ಡ್​ ಮೂಲಕ ಇತ್ತೀಚಿನ ಸುದ್ದಿಯನ್ನು ಸರ್ಚ್ ಮಾಡಿದ್ದೇವೆ.

ಆಗ ಈ ಕುರಿತು ಇಂಡಿಯಾ ಟಿವಿಯ ಯೂಟ್ಯೂಬ್ ಚಾನೆಲ್​ನಲ್ಲಿ ಅಕ್ಟೋಬರ್ 3 ರಂದು ಅಪ್‌ಲೋಡ್ ಮಾಡಿದ ವಿಡಿಯೋ ನಮಗೆ ಸಿಕ್ಕಿದೆ. ‘ದೆಹಲಿಯ ಸುಲ್ತಾನ್‌ಪುರಿಯ ವಿಡಿಯೋ ವೈರಲ್ ಆಗುತ್ತಿದೆ. ಕೆಲ ಹದಿಹರೆಯದವರು ಕಿಕ್ಕಿರಿದ ಮಾರುಕಟ್ಟೆಯಲ್ಲಿ ಮಹಿಳೆಗೆ ಚಾಕು ತೋರಿಸಿ ಹಲ್ಲೆ ನಡೆಸಿದ್ದಾರೆ. ರಾಜ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿಹರೆಯದವರು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂಬ ಮಾಹಿತಿ ಇದರಲ್ಲಿದೆ.

ಇನ್ನಷ್ಟು ಹುಡುಕಿದಾಗ ಡೆಕ್ಕನ್ ಹೆರಾಲ್ಡ್ ಮತ್ತು ದಿ ಟ್ರಿಬ್ಯೂನ್‌ ಅಕ್ಟೋಬರ್ 3, 2024 ರಂದು ಪ್ರಕಟಿಸಿರುವ ಸುದ್ದಿ ನಮಗೆ ಸಿಕ್ಕಿತು. ಇದರಲ್ಲಿರುವ ಮಾಹಿತಿಯ ಪ್ರಕಾರ, ಈ ಘಟನೆ ಸೆಪ್ಟೆಂಬರ್ 22 ರಂದು ನಡೆದಿದೆ. ಮಹಿಳೆಯನ್ನು 28 ವರ್ಷದ ಮಮತಾ ದೇವಿ ಎಂದು ಗುರುತಿಸಲಾಗಿದೆ. ಅವರು ಸುಲ್ತಾನ್‌ಪುರಿ ಪ್ರದೇಶದ ಡಿಡಿಎ ಮಾರುಕಟ್ಟೆಯಲ್ಲಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿಯ ಹೆಸರು ರಾಕೇಶ್ ಈತನಿಗೆ 21 ವರ್ಷ. ಜೊತೆಗೆ 17 ವರ್ಷದ ಅಪ್ರಾಪ್ತನೂ ಸೇರಿದ್ದಾನೆ.

ಡಿಸಿಪಿ ಔಟರ್ ದೆಹಲಿಯ ಎಕ್ಸ್ ಖಾತೆ ಕೂಡ ಈ ಘಟನೆಯ ಬಗ್ಗೆ ಅಕ್ಟೋಬರ್ 3, 2024 ರಂದು ಪೋಸ್ಟ್ ಅನ್ನು ಹಂಚಿಕೊಂಡಿದೆ. ಪೋಸ್ಟ್ ಪ್ರಕಾರ, ರಾಜ್ ಪಾರ್ಕ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಅಪ್ರಾಪ್ತನೂ ಸೇರಿದ್ದಾನೆ ಎಂದು ಬರೆಯಲಾಗಿದೆ.

ಹೀಗಾಗಿ ವಿಡಿಯೋದಲ್ಲಿ ಕಂಡುಬರುವ ಆರೋಪಿಯ ಹೆಸರು ರಾಕೇಶ್ ಮತ್ತು ಇನ್ನೊಬ್ಬ ಅಪ್ರಾಪ್ತ. ಇದರಲ್ಲಿ ಯಾವುದೇ ಕೋಮು ಕೋನವಿಲ್ಲ. ಆರೋಪಿ ಮತ್ತು ಸಂತ್ರಸ್ತೆ ಹಿಂದೂಗಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Related Stories

No stories found.
logo
South Check
southcheck.in