

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಭಾರೀ ಮಳೆ ಮತ್ತು ಉಕ್ಕಿ ಹರಿಯುತ್ತಿರುವ ನದಿಗಳು ಅನಾಹುತ ಸೃಷ್ಟಿಸುತ್ತಿವೆ. ಏಳು ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಅಸ್ಸಾಂನಲ್ಲಿನ ಇತ್ತೀಚಿನ ಪ್ರವಾಹ ಪರಿಸ್ಥಿತಿ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ ಒಂದು ಸಂಕೀರ್ಣವು ಮೊಗಚಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಕಾಣಬಹುದು. ಫೇಸ್‌ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಭೀಕರ ಪ್ರವಾಹಕ್ಕೆ ತತ್ತರಿಸಿದ ಅಸ್ಸಾಂ’’ ಎಂದು ಹೇಳಿಕೊಳ್ಳುತ್ತಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಬೀರ್ವಾದಲ್ಲಿ ನಡೆದ ಘಟನೆ ಆಗಿದೆ.
ನಿಜಾಂಶವನ್ನು ತಿಳಿಯಲು ವೈರಲ್ ವೀಡಿಯೊದ ಪ್ರಮುಖ ಕ್ಲಿಪ್ ಅನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇಂಡಿಯಾ ಟುಡೇ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಇದೇ ವೈರಲ್ ಕ್ಲಿಪ್ ಅನ್ನು ಜುಲೈ 22 ರಂದು ಅಪ್‌ಲೋಡ್ ಮಾಡಿರುವುದು ಕಂಡುಬಂತು.
"ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಬೀರ್ವಾದಲ್ಲಿನ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿನ ವಾಣಿಜ್ಯ ರಚನೆಯು ಹಠಾತ್ ಪ್ರವಾಹದ ನಂತರ ಕುಸಿದಿದೆ. ಕಟ್ಟಡವು ಕುಸಿದು ಬಿದ್ದು, ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುವ ಕೆಲವೇ ಕ್ಷಣಗಳಲ್ಲಿ ಪೊಲೀಸರು ಆ ಪ್ರದೇಶವನ್ನು ಸ್ಥಳಾಂತರಿಸಿದಾಗ ಅಂಗಡಿಯವರು ತಮ್ಮ ಸರಕುಗಳನ್ನು ಉಳಿಸಿಕೊಳ್ಳಲು ಹತಾಶರಾಗಿದ್ದರು. ನಾಟಕೀಯ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ" ಎಂದು ಪೋಸ್ಟ್‌ನ ಶೀರ್ಷಿಕೆ ಬರೆಯಲಾಗಿದೆ.
ಜುಲೈ 21 ರಂದು ಗ್ರೇಟರ್ ಕಾಶ್ಮೀರ್‌ನ ಯೂಟ್ಯೂಬ್ನಲ್ಲಿ ಕೂಡ ಇದೇ ವೀಡಿಯೊ ಸಿಕ್ಕಿತು. ವೀಡಿಯೊ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಬೀರ್ವಾ ಎಂದು ಗುರುತಿಸಲ್ಪಟ್ಟಿದೆ, ಅಲ್ಲಿ ಒಂದು ಶಾಪಿಂಗ್ ಸಂಕೀರ್ಣವು ಪ್ರವಾಹದ ನೀರಿನಿಂದ ಕೊಚ್ಚಿಹೋಗಿದೆ.
ಜುಲೈ 21 ರಂದು ಟೈಮ್ಸ್ ಆಫ್ ಇಂಡಿಯಾ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿದ್ದು, ಬುಡ್ಗಾಮ್‌ನ ಬೀರ್ವಾದಲ್ಲಿ ಪ್ರವಾಹದ ನೀರು ಕಟ್ಟಡದ ಅಡಿಪಾಯವನ್ನು ದುರ್ಬಲಗೊಳಿಸಿದ ನಂತರ ಕಟ್ಟಡ ಕುಸಿದಿದೆ ಮತ್ತು ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಹೇಳಿದೆ.
ಇತರ ಹಲವಾರು ಸುದ್ದಿವಾಹಿನಿಗಳು ಕೂಡ ಈ ಘಟನೆ ಅಸ್ಸಾಂನಲ್ಲಿ ಅಲ್ಲ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ ಎಂದು ವರದಿ ಮಾಡಿವೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊವು ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರವಾಹದ ಸಮಯದಲ್ಲಿ ಕಾಂಪ್ಲೆಕ್ಸ್ ಕೊಚ್ಚಿ ಹೋಗುವುದನ್ನು ತೋರಿಸುವುದಿಲ್ಲ, ಇದು ವಾಸ್ತವವಾಗಿ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಬೀರ್ವಾದಲ್ಲಿ ನಡೆದ ಘಟನೆಯನ್ನು ಚಿತ್ರಿಸುತ್ತದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.