ಆಹಾರ ಕಲಬೆರಕೆ ಇಂದು ವಿಶ್ವದ ಬಹುದೊಡ್ಡ ಗಂಭೀರ ಸಮಸ್ಯೆಯಾಗಿದೆ. ಮೊಹರು ಮಾಡಿದ ಪ್ಯಾಕೆಟ್‌ಗಳಲ್ಲಿನ ಆಹಾರ ಕೂಡ ಕೆಲವೊಮ್ಮೆ ಅಸುರಕ್ಷಿತ ಎಂದು ಹೇಳಲಾಗುತ್ತದೆ. ಇದೀಗ ಲುಪೋ ಕಂಪನಿಯ ಕೇಕ್‌ಗಳನ್ನು ಮಕ್ಕಳು ತಿಂದರೆ ಅರ್ಧ ಸತ್ತಂತೆ ಎಂದು ಹೇಳಲಾಗುವ ವೀಡಿಯೊವೊಂದು ವೈರಲ್ ಆಗುತ್ತಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.
ರಾಜು ಕನಸುಗಾರ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಆಗಸ್ಟ್ 8, 2024 ರಂದು ಈ ವೀಡಿಯೊ ಹಂಚಿಕೊಂಡಿದ್ದು, ‘ಹೊಸ ಕೇಕ್ ಮಾರುಕಟ್ಟೆಯಲ್ಲಿದೆ. ಲುಪೋ ಕಂಪನಿಯು ಚಿಕ್ಕ ಮಕ್ಕಳನ್ನು ಅರ್ಧ ಸತ್ತಂತೆ ಮಾಡುವ ಟ್ಯಾಬ್ಲೆಟ್ ಅನ್ನು ಹೊಂದಿದೆ, ದಯವಿಟ್ಟು ಈ ವೀಡಿಯೊವನ್ನು ನಿಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡಿ ಮತ್ತು ಅದನ್ನು ಹಿಂದೂ ಪ್ರದೇಶದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ನಿಮ್ಮ ಮಕ್ಕಳು ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿ’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಮಹದೇವಯ್ಯ ಎಂಬವರು ಆಗಸ್ಟ್ 12, 2024 ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಇದೇ ವೀಡಿಯೊವನ್ನು ಅಪ್ಲೋಡ್ ಮಾಡಿದ್ದು, ನಮ್ಮ ಭಾರತ ದೇಶಕ್ಕಾಗಿ ಮತ್ತು ನಮ್ಮ ಮಕ್ಕಳು ಮತ್ತು ನಮ್ಮ ಹಿಂದೂಗಳ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದ್ದಾರೆ. 30-51 ಸೆಕೆಂಡ್‌ಗಳ ಈ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಕವರ್‌ನಿಂದ 'ಲುಪ್ಪೋ' ಎಂಬ ಹೆಸರಿನ ಸಣ್ಣ ಗಾತ್ರದ ಕೇಕ್ ಅನ್ನು ಹೊರತೆಗೆಯುತ್ತಾನೆ, ಆಗ ಅದರಲ್ಲಿ ಎರಡು ಮಾತ್ರೆಗಳು ಕಾಣಿಸುತ್ತವೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ಸದ್ಯ ವೈರಲ್ ಆಗುತ್ತಿರುವ ಲುಪೋ ಕೇಕ್ ಭಾರತದಲ್ಲೇ ಮಾರಾಟ ಆಗುತ್ತಿಲ್ಲ. ಬದಲಾಗಿ ಈ ಉತ್ಪನ್ನವನ್ನು ಇರಾಕ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.
ಈ ಕೇಕ್ ಬಗ್ಗೆ ನಾವು ಗೂಗಲ್ನಲ್ಲಿ ಹುಡುಕಾಡಿದಾಗ ಇದೇ ಮಾಹಿತಿಯೊಂದಿಗೆ ಈ ವಿಡಿಯೋ ಪ್ರಪಂಚದಾದ್ಯಂತ 2019 ರಿಂದಲೂ ವೈರಲ್ ಆಗುತ್ತಿದೆ ಎಂಬುದು ತಿಳಿಯಿತು. ಇದರ ಜೊತೆಗೆ ಅನೇಕ ವಿದೇಶಿ ವೆಬ್ಸೈಟ್ಳು ಈ ವೈರಲ್ ಸುದ್ದಿಯ ಬಗ್ಗೆ ಸ್ಪಷ್ಟೀಕರಣ ನೀಡಿರುವುದು ಕೂಡ ಸಿಕ್ಕಿದೆ. Yahoo News (UK) ವೆಬ್‌ಸೈಟ್‌ನಲ್ಲಿನ ವರದಿಯ ಪ್ರಕಾರ, ವೀಡಿಯೊದಲ್ಲಿ ಹೇಳಿರುವ ಮಾಹಿತಿಗೆ ಯಾವುದೇ ಆಧಾರವಿಲ್ಲ. ಲುಪೋ ಕೇಕ್‌ಗಳನ್ನು ಟರ್ಕಿಯಲ್ಲಿ ತಯಾರಿಸಲಾಗುತ್ತದೆ. ವರದಿಯು ಫ್ರಾನ್ಸ್ ಅಬ್ಸರ್ವರ್, ಟೆಯಿಟ್ ಮತ್ತು ಸ್ನೋಪ್ಸ್ ವೆಬ್‌ಸೈಟ್‌ನ ಪರಿಶೀಲನೆಯನ್ನು ಉಲ್ಲೇಖಿಸಿದೆ.
ಹಾಗೆಯೆ ಸ್ನೋಪ್ಸ್ ಬರೆದಿರುವ ಲೇಖನದ ಪ್ರಕಾರ , 'ಸೊಲೆನ್' (ಲೂಪೋ ಕೇಕ್ ತಯಾರಿಸುವ ಟರ್ಕಿಶ್ ಕಂಪನಿ) ಅಧಿಕಾರಿಗಳು ವೈರಲ್ ಆಗುತ್ತಿರುವ ವೀಡಿಯೊ ನಿಜವಲ್ಲ ಎಂದು ಉಲ್ಲೇಖಿಸಿದ್ದಾರೆ.
ಟರ್ಕಿಶ್ ಮಾಧ್ಯಮ ಔಟ್ಲೆಟ್ Teyit ಪ್ರಕಟಿಸಿದ ಲೇಖನದ ಪ್ರಕಾರ, "ಕೇಕ್ನ ಮೇಲ್ಮೈಯಲ್ಲಿ ತೆರೆದ ಗುರುತುಗಳು ಕಾಣಿಸುತ್ತಿದೆ. ಹೀಗಾಗಿ ಈ ಪ್ಯಾಕೆಟ್ ಅನ್ನು ತೆರೆಯುವ ಮೊದಲೇ ಕೇಕ್ಗೆ ಯಾರೋ ಮಾತ್ರೆಗಳನ್ನು ಸೇರಿಸಿದ್ದಾರೆ ಎಂದು ಸೂಚಿಸುತ್ತದೆ" ಎಂಬುದನ್ನು ಉಲ್ಲೇಖಿಸಿದೆ.
ಎರ್ಬಿಲ್ ಆರೋಗ್ಯ ರಕ್ಷಣಾ ವ್ಯವಹಾರಗಳ ನಿರ್ದೇಶನಾಲಯ ತನ್ನ ಫೇಸ್ಬುಕ್ ಖಾತೆಯಲ್ಲಿ 2019 ರಲ್ಲಿ ಈ ಕೇಕ್ ತಿನ್ನಲು ಯೋಗ್ಯವಾಗಿದೆ ಎಂದು ವರದಿ ಪ್ರಕಟಿಸಿದೆ. ‘ಆಹಾರ ಕೇಂದ್ರ / ಎರ್ಬಿಲ್‌ನ ಪ್ರಯೋಗಾಲಯದ ಪರೀಕ್ಷೆಯ ಪ್ರಕಾರ ನಾವು ನಾಗರಿಕರಿಗೆ ತಿಳಿಸುವುದೇನೆಂದರೆ, ಲುಪೋ ಕೇಕ್ ತಿನ್ನಲು ಯೋಗ್ಯವಾಗಿದೆ. ಎರ್ಬಿಲ್‌ನ ಆರೋಗ್ಯ ರಕ್ಷಣಾ ವ್ಯವಹಾರಗಳ ನಿರ್ದೇಶಕ ಡಾ. ಸರ್ಹಾಂಗ್ ಜಲಾಲ್, ಅವರು ಈ ಕೇಕ್ ಅನ್ನು ಸಂಪೂರ್ಣವಾಗಿ ಪರೀಕ್ಷಿಸಲ್ಪಟ್ಟಿದ್ದಾರೆ ಮತ್ತು ಇದರಲ್ಲಿ ಯಾವುದೇ ದೋಷವಿಲ್ಲ ಎಂದು ಖಚಿತಪಡಿಸಿದ್ದಾರೆ’ ಎಂದು ಬರೆಯಲಾಗಿದೆ.
ಈ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದೆವು. ಆಗ 2019 ರಲ್ಲಿ ಹನನ್ ಕೊಹೆನ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಹೀಗಾಗಿ ಸದ್ಯ ವೈರಲ್ ಆಗುತ್ತಿರುವ ವೀಡಿಯೊ ಹಳೆಯದು ಎಂಬುದನ್ನು ನಾವು ಖಚಿತವಾಗಿ ಹೇಳಬಹುದು.
ಈ ವೀಡಿಯೊದಲ್ಲಿ ಮಾತನಾಡುವ ಭಾಷೆ ಸೊರಾನಿ, ಇರಾಕ್‌ನ ಕುರ್ದಿಸ್ತಾನ್‌ನಲ್ಲಿ ಬಳಸಲಾಗುವ ಸ್ಥಳೀಯ ಭಾಷೆಯಾಗಿದೆ ಎಂದು 'ಟೇಟ್' ವರದಿಯಲ್ಲಿ ಹೇಳಿದೆ. ಈ ವಿಡಿಯೋವನ್ನು ಇರಾಕ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವೀಡಿಯೊದಲ್ಲಿ ತೋರಿಸಿರುವ ಲುಪೋ ಕೇಕ್‌ಗಳನ್ನು ಇರಾಕ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ವೀಡಿಯೊ ವೈರಲ್ ಆದ ನಂತರ, ಇರಾಕ್‌ನ ಗಡಿಯಲ್ಲಿರುವ ಪ್ರದೇಶವಾದ ಕುರ್ದಿಸ್ತಾನ್ ಸರ್ಕಾರವು ಲುಪೋ ಕೇಕ್‌ನಲ್ಲಿ ಮಾತ್ರೆಗಳು ಪತ್ತೆಯಾಗಿರುವುದು ಸುಳ್ಳು ಸುದ್ದಿ ಎಂದಿದೆ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.
ತೀರ್ಮಾನ:
ಹೀಗಾಗಿ ವೈರಲ್ ವೀಡಿಯೊದಲ್ಲಿರುವ ಲುಪೋ ಕೇಕ್‌ಗಳು ಭಾರತದಲ್ಲಿ ಮಾರಾಟವಾಗುವುದಿಲ್ಲ ಎಂದು ನಾವು ದೃಢೀಕರಿಸಬಹುದು. ಅಲ್ಲದೆ, ಲುಪೋ ಕೇಕ್‌ಗಳನ್ನು ಮಕ್ಕಳು ತಿಂದರೆ ಅರ್ಧ ಸತ್ತಂತೆ ಎಂಬ ಮಾಹಿತಿ ಸತ್ಯಕ್ಕೆ ದೂರವಾಗಿದೆ.