ಕಳೆದ ಕೆಲವು ದಿನಗಳಿಂದ ಕರ್ನಾಟಕ ಸೇರಿದಂತೆ ಭಾರತದಲ್ಲಿ ನಾಯಿ ಮಾಂಸದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇತ್ತೀಚೆಗಷ್ಟೆ ರಾಜಸ್ಥಾನದಿಂದ ಬೆಂಗಳೂರಿಗೆ ವಾರಕ್ಕೆ ಮೂರು ಬಾರಿ ರೈಲಿನಲ್ಲಿ ಕುರಿ ಮಾಂಸದ ಜೊತೆ ನಾಯಿ ಮಾಂಸವನ್ನು ಬೆರೆಸಿ ತರಲಾಗುತ್ತಿದೆ ಎಂದು ಹಿಂದುಪರ ಸಂಘಟನೆಗಳು ಆರೋಪಿಸಿ ಕೆಎಸ್‌ಆರ್(ಯಶವಂತಪುರ) ರೈಲ್ವೆ ನಿಲ್ದಾಣಕ್ಕೆ ಜೈಪುರದಿಂದ ಬಂದ ರೈಲಿನ ಮೇಲೆ ದಾಳಿ ನಡೆಸಿದ್ದರು. ಇದಾದ ಬೆನ್ನಲ್ಲೇ ಬೆಂಗಳೂರಿಗೆ ರಾಜಸ್ಥಾನದಿಂದ ನಾಯಿ ಮಾಂಸ ಬರುತ್ತಿದೆ ಎಂದು ಹೇಳಲಾಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಮೋ ಕರುನಾಡು ಎಂಬ ಫೇಸ್ಬುಕ್ ಖಾತೆಯಿಂದ ಈ ಫೋಟೋ ಅಪ್ಲೋಡ್ ಆಗಿದೆ. ''ಬೆಂಗಳೂರಿನಲ್ಲಿ ನಾಯಿ ಮಾಂಸ ಪತ್ತೆ. ಅಬ್ದುಲ್ ರಜಾಕ್ ಮಾಲಕತ್ವದ ಟ್ರಾನ್ಸ್ಪೋರ್ಟ್ ಗಾಡಿಯಲ್ಲಿ ಕುರಿ ಮಾಂಸ ಸಾಗಾಟದ ಹೆಸರಿನಲ್ಲಿ ರಾಜಸ್ಥಾನದಿಂದ ಕರ್ನಾಟಕಕ್ಕೆ ನಾಯಿ ಮಾಂಸ ಸಾಗಾಟ ಮಾಡುವ ವೇಳೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ,'' ಎಂದು ಬರೆಯಲಾಗಿದೆ.
ಇದೇ ಫೋಟೋವನ್ನು ಯೋಗಿ ಎಂಬ ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದು, ''ಯಾರಿಗುಂಟು ಯಾರಿಗಿಲ್ಲ... ಕರುನಾಡಿಗೆ ನಾಯಿ ಮಾಂಸ ತಿನ್ನುವ ಸೌಭಾಗ್ಯ. ಇದು ಆರನೇ ಗ್ಯಾರಂಟಿ,'' ಎಂದು ಬರೆದುಕೊಂಡಿದ್ದಾರೆ. ಇದೇರೀತಿಯ ಅನೇಕ ಫೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತರ್ಲೆ ಕಟ್ಟೆ ಎಂಬ ಯೂಟ್ಯೂಬ್ ಚಾನೆಲ್ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿರುವ ವೀಡಿಯೊವನ್ನು ಹಂಚಿಕೊಂಡಿದ್ದು, 'ಮುಸ್ಲಿಂ ವಕ್ತಾರ ಅಬ್ದುಲ್ ರಜಾಕ್ ನಾಯಿ ಮಾಂಸ ವ್ಯಾಪಾರಕ್ಕೆ ಇಳಿದ ಅಸಲಿ ದೃಶ್ಯ ನೋಡಿ' ಎಂಬ ಶೀರ್ಷಿಕೆ ನೀಡಿದೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಇದು ಸುಳ್ಳು ಸುದ್ದಿ ಎಂಬುದು ತಿಳಿಯಿತು. ಈ ಬಗ್ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಕರ್ನಾಟಕದ ಗೃಹ ಸಚಿವರು ಸ್ಪಷ್ಟನೆ ನೀಡಿರುವುದನ್ನು ನಾವು ಕಂಡಿದ್ದೇವೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ 'ರೈಲು ಮೂಲಕ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸವಲ್ಲ, ಮೇಕೆ ಮಾಂಸವೆಂದು ಸ್ಪಷ್ಟನೆ ನೀಡುತ್ತಿರುವ ವೀಡಿಯೊವನ್ನು ಟಿವಿ9 ಕನ್ನಡ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದೆ. ''ರಾಜಸ್ಥಾನದಿಂದ ಪ್ರತಿ ವಾರ ಅಥವಾ 15 ದಿನಗಳಿಗೊಮ್ಮೆ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ಆದರೆ, ಕೆಲವರು ಅದು ನಾಯಿ ಮಾಂಸ ಎಂದು ಆರೋಪಿಸಿದ್ದರು. ಈಗ ಪ್ರಯೋಗಾಲಯದ ವರದಿ ಬಂದಿದ್ದು ಅದು ಮೇಕೆ ಮಾಂಸ ಎಂದು ತಿಳಿದಿದೆ. ಆದ್ದರಿಂದ ದುರುದ್ದೇಶದಿಂದ ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,'' ಎಂದು ಅವರು ಹೇಳಿದ್ದಾರೆ.
ಹಾಗೆಯೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ರಾಜ್ಯ ಆಯುಕ್ತ ಶ್ರೀನಿವಾಸ್ ಕೆ ಪ್ರಯೋಗಾಲಯದ ಪರೀಕ್ಷೆಯಲ್ಲಿ ಈ ಮಾಂಸವು ನಾಯಿಯದ್ದಲ್ಲ, ಮೇಕೆಯದ್ದು ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ. ''ಇದನ್ನು ಸಿರೋಹಿ ಮೇಕೆ ಮಾಂಸ ಎಂದು ಗುರುತಿಸಲಾಗಿದೆ, ಇದು ರಾಜಸ್ಥಾನ ಮತ್ತು ಗುಜರಾತ್‌ನ ಕಚ್-ಭುಜ್ ಪ್ರದೇಶದ ತಳಿಯಾಗಿದೆ. ಈ ತಳಿಯ ಮೇಕೆಗಳು ಮಚ್ಚೆಯುಳ್ಳ ದೇಹ ಮತ್ತು ಸ್ವಲ್ಪ ಉದ್ದವಾದ ಬಾಲವನ್ನು ಹೊಂದಿರುವುದು ವಿಶಿಷ್ಟವಾಗಿದೆ, ಹೀಗಾಗಿ ಈ ಮೇಕೆಗಳು ನಾಯಿಯನ್ನು ಹೋಲುತ್ತವೆ,'' ಎಂದು ಶ್ರೀನಿವಾಸ್ ಅವರು ನೀಡಿರುವ ಸ್ಪಷ್ಟನೆ ಕರ್ನಾಟಕದ ಪ್ರಸಿದ್ಧ ಡಿಜಿಟಲ್ ಮಾಧ್ಯಮ ಕನ್ನಡ ಪ್ರಭದಲ್ಲಿ ಪ್ರಕಟವಾಗಿದೆ.
ಏನಿದು ಘಟನೆ?:
ಕಳೆದ ಶುಕ್ರವಾರ ಪುನೀತ್ ಕೆರೆಹಳ್ಳಿ ನೇತೃತ್ವದ ಹಿಂದೂಪರ ಸಂಘಟನೆ ಕಾರ್ಯಕರ್ತರು ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದ ಜೊತೆಗೆ ನಾಯಿ ಮಾಂಸವನ್ನು ತರಲಾಗಿದೆ ಎಂದು ಆರೋಪ ಮಾಡಿದ್ದರು. ಅಲ್ಲದೆ ರಾಜಸ್ಥಾನದಿಂದ ಬಂದ ಮಟನ್ ಮಾಂಸದ ಬಾಕ್ಸ್‌ಗಳನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದ ಬಳಿ ತಡೆಹಿಡಿಯಲಾಗಿತ್ತು. ಈ ಮಟನ್ ಬಾಕ್ಸ್‌ಗಳು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್‌ಗೆ ಸೇರಿದವು ಎಂದು ತಿಳಿದು ಬಂದಿತ್ತು. ಇದರಿಂದ ಸ್ಥಳದಲ್ಲಿ ಅಬ್ದುಲ್ ರಜಾಕ್ ಮತ್ತು ಪುನೀತ್ ಕೆರೆಹಳ್ಳಿ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಬಳಿಕ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಮಾಂಸವನ್ನು ವಶಕ್ಕೆ ಪಡೆದು ಅದರ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದರು. ಸದ್ಯ ಅದರ ಪರೀಕ್ಷೆ ನಡೆಸಿದ ಪ್ರಯೋಗಾಲಯದವರು ಅದು ಮೇಕೆ ಮಾಂಸ ಎಂದು ವರದಿ ನೀಡಿದ್ದಾರೆ.
ಈ ಮೂಲಕ ಟ್ರಾನ್ಸ್ಪೋರ್ಟ್ ಗಾಡಿಯಲ್ಲಿ ಕುರಿ ಮಾಂಸ ಸಾಗಾಟದ ಹೆಸರಿನಲ್ಲಿ ರಾಜಸ್ಥಾನದಿಂದ ಕರ್ನಾಟಕಕ್ಕೆ ನಾಯಿ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ವೈರಲ್ ಆಗುತ್ತಿರುವ ಫೋಟೋ ಸತ್ಯಕ್ಕೆ ದೂರವಾಗಿದೆ ಎಂದು ನಾವು ಖಚಿತಪಡಿಸುತ್ತೇವೆ.