

ಇತ್ತೀಚೆಗಷ್ಟೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಅಂದು ಪ್ರಧಾನಿ ನರೇಂದ್ರ ಮೋದಿ ಧರ್ಮಧ್ವಜಾರೋಹಣ ಕಾರ್ಯ ನೆರವೇರಿಸಿದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಧರ್ಮಧ್ವಜಾರೋಹಣದ ಧ್ವಜವನ್ನು ಹಿಡಿದುಕೊಂಡು ಮಂಗ ಕುಳಿತಿರುವುದು ಕಾಣಬಹುದು. ಅಯೋಧ್ಯೆಯ ರಾಮ ಮಂದಿರದ ಧರ್ಮ ಧ್ವಜದ ಮೇಲೆ ಮಂಗ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರಾಮಾಯಣ ಕಾಲ್ಪನಿಕ ಅನ್ನೋ ಗುಲಾಮನೆ ಒಂದು ಸಾರಿ ಇಲ್ಲಿ ನೋಡಿ ಪ್ರಭು ಶ್ರೀರಾಮರ ಸೇವೆಗೆ ಸದಾ ಸಿದ್ದನಿರುತ್ತಾನೆಂದು. ಅಯೋಧ್ಯೆಯ ರಾಮ ಮಂದಿರದ ಧರ್ಮ ಧ್ವಜದ ಮೇಲೆ ಕಪೀಶ, ಜಯ ಕಪೀಶ ತಿಹು ಲೋಕ ಉಜಾಗರ ರಾಮದೂತ ಅತುಲಿತ ಬಲಧಾಮ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನಿಜವಾಗಿ ನಡೆದ ಘಟನೆ ಅಲ್ಲ ಬದಲಾಗಿ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ನಾವು ವೈರಲ್ ಹೇಳಿಕೆಗೆ ಸಂಬಂಧಿಸಿದ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಇಲ್ಲಿಯೂ ಯಾವುದೇ ವಿಶ್ವಾಸರ್ಹ ವರದಿ ಕಂಡುಬಂದಿಲ್ಲ.
ಬಳಿಕ ನಾವು ವೈರಲ್ ಆದ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಸಂದರ್ಭ ಇದರಲ್ಲಿ ಹಲವಾರು ನೈಜ್ಯತೆಗೆ ದೂರವಾದ ಅಂಶ ಕಂಡುಬಂದವು. ಉದಾಹರಣೆಗೆ ವೀಡಿಯೊದ ಹಲವು ಫ್ರೇಮ್‌ಗಳಲ್ಲಿ ಜರ್ಕ್ ಮೋಷನ್ ಆಗುವುದು ಕಾಣಬಹುದು, ಅಷ್ಟೇ ಅಲ್ಲದೆ ಇದರಲ್ಲಿ ಮಂಗನ ಆಕೃತಿ, ಬಣ್ಣವು ಸಹಜವಾಗಿಲ್ಲದ ರೀತಿ ಇರುವುದನ್ನು ಗುರುತಿಸಿದ್ದೇವೆ. ವೀಡಿಯೊದ ಕೆಲವು ಫ್ರೇಮ್‌ಗಳಲ್ಲಿ ಮಂಗ ಕಾಣೆಯಾಗುವುದನ್ನು ಗಮನಿಸಿದರೆ ನಮಗೆ ದು ಎಐ ಮೂಲಕ ರಚಿಸಿರಬಹುದು ಎಂಬ ಅನುಮಾನ ಮೂಡಿತು.
ಹೀಗಾಗಿ ನಾವು ಎಐ ಡಿಟೆಕ್ಟರ್ ಟೂಲ್ ಮೂಲಕ ಪರೀಕ್ಷಿಸಿದ್ದೇವೆ. ಸೈಟ್ ಇಂಜಿನ್ ಟೂಲ್ ಮೂಲಕ ಪರೀಕ್ಷಿಸಿದಾಗ ವೈರಲ್ ಆದ ವೀಡಿಯೊ ಶೇ. 97 ರಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ. ಮತ್ತೊಂದು ಎಐ ಡಿಟೆಕ್ಟರ್ ಟೂಲ್ ಹೈವ್ ಮಾಡರೇಶನ್ ಕೂಡ ಶೇ. 99.9 ರಷ್ಟು ವೈರಲ್ ವೀಡಿಯೊನ್ನು ಎಐ ಮೂಲಕ ರಚಿಸಲಾಗಿದೆ ಎಂದು ಹೇಳಿದೆ. ವಾಸ್ ಇಟ್ ಎಐ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗುತ್ತಿರುವ ಪೊಸ್ಟ್ ಸುಳ್ಳು ಮತ್ತು ಇದನ್ನು ಎಐ ಮೂಲಕ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.